ಜಕಾರ್ತ: ಇಂಡೋನೇಷ್ಯಾ ರಾಜಧಾನಿ ಜಕಾರ್ತದಲ್ಲಿ (PM Modi Indonesia Visit) ನಡೆದ ಭಾರತ-ಆಸಿಯಾನ್ ಶೃಂಗಸಭೆಯಲ್ಲಿ (India-Asean Summit) ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ರಾಷ್ಟ್ರಗಳ ನಾಯಕರನ್ನು ಭೇಟಿಯಾದರು. ಹಾಗೆಯೇ, ಸಭೆಯ ವೇಳೆ ಮೋದಿ ಅವರು ಭಾರತ ಹಾಗೂ ಆಸಿಯಾನ್ ಏಳಿಗೆಗೆ 12 ಸೂತ್ರಗಳನ್ನು ಹಾಕಿಕೊಟ್ಟರು. ಭಾರತ ಸೇರಿ ಆಸಿಯಾನ್ ದೇಶಗಳ ಅಭಿವೃದ್ಧಿ ದೃಷ್ಟಿಯಿಂದ ಅವರು 12 ಅಂಶಗಳನ್ನು ತಿಳಿಸಿದರು.
“ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI), ಉಗ್ರವಾದದ ವಿರುದ್ಧ ಹೋರಾಟ, ಭಾರತ, ಆಗ್ನೇಯ ಏಷ್ಯಾ, ಪಶ್ಚಿಮ ಏಷ್ಯಾ ಹಾಗೂ ಯುರೋಪ್‌ನಲ್ಲಿ ಆರ್ಥಿಕ ಕಾರಿಡಾರ್ ನಿರ್ಮಾಣ, ಬಹು ಮಾದರಿಯ ಸಂಪರ್ಕ, ಭದ್ರತೆ, ರಕ್ಷಣೆ, ಹವಾಮಾನ ವೈಪರೀತ್ಯದ ವೇಳೆ ಪರಸ್ಪರ ಸಹಕಾರ ಸೇರಿ ಹಲವು ಕ್ಷೇತ್ರಗಳಲ್ಲಿ ಆಸಿಯಾನ್ ರಾಷ್ಟ್ರಗಳ ನೆರವು, ಒಪ್ಪಂದಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ” ಎಂದು ಹೇಳಿದರು.
ಆಸಿಯಾನ್ ನಾಯಕರೊಂದಿಗೆ ಮೋದಿ
“ಜಗತ್ತಿನಲ್ಲಿ 21ನೇ ಶತಮಾನವು ಏಷ್ಯಾದ್ದಾಗಿದೆ. ಇದು ನಮ್ಮ ಶತಮಾನ. ಕೊರೊನಾ ಬಿಕ್ಕಟ್ಟಿನ ನಂತರದಲ್ಲಿ ಪರಸ್ಪರ ಸಹಕಾರದೊಂದಿಗೆ ಅಭಿವೃದ್ಧಿ ಸಾಧಿಸುವುದು ಪ್ರಮುಖವಾಗಿದೆ. ಗ್ಲೋಬಲ್ ಸೌತ್ ಕಲ್ಪನೆ ಸಾಕಾರವಾಗಬೇಕು ಎಂದರೆ ಒಗ್ಗಟ್ಟು ಹಾಗೂ ಸಹಕಾರವೇ ಪ್ರಮುಖ ಅಸ್ತ್ರಗಳಾಗಿವೆ. ಮನುಕುಲದ ಸಮೃದ್ಧಿ ಹಾಗೂ ಅಭಿವೃದ್ಧಿಗಾಗಿ ಎಲ್ಲರೂ ಕೂಡಿ ಕಾರ್ಯನಿರ್ವಹಿಸೋಣ” ಎಂದು ಕರೆ ನೀಡಿದರು.
ಈಸ್ಟ್ ಏಷ್ಯಾ ಸಭೆಯಲ್ಲಿ ಪ್ರಧಾನಿ
ಇದನ್ನೂ ಓದಿ: PM Modi Indonesia Visit: ಇಂಡೋನೇಷ್ಯಾ ತಲುಪಿದ ಮೋದಿಗೆ ಭಾರತೀಯರಿಂದ ಅದ್ಧೂರಿ ಸ್ವಾಗತ
“ನಮ್ಮ ಇತಿಹಾಸ, ಭೌಗೋಳಿಕ ವ್ಯಾಪ್ತಿಯು ಭಾರತ ಹಾಗೂ ಆಸಿಯಾನ್ ರಾಷ್ಟ್ರಗಳನ್ನು ಒಗ್ಗೂಡಿಸುತ್ತದೆ. ಹಾಗಾಗಿಯೇ, ಆಸಿಯಾನ್ ರಾಷ್ಟ್ರಗಳ ಸಂಬಂಧವು ವೃದ್ಧಿಯಾಗಿದೆ. ಆಸಿಯಾನ್ ರಾಷ್ಟ್ರಗಳ ಅಭಿವೃದ್ಧಿ, ಶಾಂತಿ, ಸ್ಥಿರತೆಯು ನಮ್ಮ ಆದ್ಯತೆಯಾಗಿದೆ. ಜಾಗತಿಕ ಏಳಿಗೆಗೆ ಆಸಿಯಾನ್ ರಾಷ್ಟ್ರಗಳ ಕೊಡುಗೆ ಅಪಾರವಾಗಿದೆ. ಮುಂದಿನ ದಿನಗಳಲ್ಲೂ ಇದೇ ಗುರಿಯೊಂದಿಗೆ ಸಾಗೋಣ” ಎಂದು ಮೋದಿ ಹೇಳಿದರು. ಇದಕ್ಕೂ ಮೊದಲು ಇಂಡೋನೇಷ್ಯಾಗೆ ಆಗಮಿಸಿದ ಮೋದಿ ಅವರನ್ನು ಅನಿವಾಸಿ ಭಾರತೀಯರು ಸಾಂಪ್ರದಾಯಿಕವಾಗಿ ಸ್ವಾಗತಿಸಿದರು.