ನವದೆಹಲಿ: ಇತ್ತೀಚೆಗೆ ರಾಜಸ್ಥಾನ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ (BJP) ಜಯಭೇರಿ ಭಾರಿಸಿದ್ದು, ಇದು ತಂಡದ ಶ್ರಮಕ್ಕೆ ಸಿಕ್ಕ ಯಶಸ್ಸು ಎಂದು ಗುರುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಗುರುವಾರ ಬಣ್ಣಿಸಿದರು.
ಬಿಜೆಪಿಯ ಸಂಸದೀಯ ಪಕ್ಷದ ಸಭೆಯಲ್ಲಿ ಸಂಸದರನ್ನುದ್ದೇಶಿಸಿ ಮಾತನಾಡಿದ ಮೋದಿ, ಪಕ್ಷವು ಗೆದ್ದ ಜನಾದೇಶದ ಶ್ರೇಯಸ್ಸನ್ನು ಸಹೋದ್ಯೋಗಿಗಳೊಂದಿಗೆ ಹಂಚಿಕೊಂಡರು. ಭವಿಷ್ಯದಲ್ಲಿಯೂ ಪಕ್ಷವು ಸಾಮೂಹಿಕ ಮನೋಭಾವದಿಂದ ಮುಂದುವರಿಯಬೇಕಾಗಿದೆ ಎಂದು ಕರೆ ನೀಡಿದರು. ಕಾರ್ಯಕರ್ತರ ಸಾಮೂಹಿಕ ಪ್ರಯತ್ನದಿಂದ ಗೆಲುವು ಸಾಧ್ಯವಾಗಿದೆ ಎಂದು ಮೋದಿ ಹೇಳಿದರು.
Prime Minister Shri @narendramodi ji receives a grand welcome as he arrives for the BJP Parliamentary meeting. pic.twitter.com/LoDtuR9m4G
— Pralhad Joshi (@JoshiPralhad) December 7, 2023
ಜನಪರ ಯೋಜನೆಗಳ ಕಾರ್ಯಕ್ಷಮತೆ ಮತ್ತು ಅನುಷ್ಠಾನದ ಆಧಾರದ ಸಹಾಯದಿಂದ ಬಿಜೆಪಿ ಆಡಳಿತ ವಿರೋಧಿ ಅಲೆಯನ್ನು ಆಡಳಿತ ಪರ ಅಲೆಯನ್ನಾಗಿ ಪರಿವರ್ತಿಸಿದ್ದು ಗೆಲುವಿಗೆ ಮುಖ್ಯ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ʼʼಬಿಜೆಪಿ ಶೇ. 56 ಮತ್ತು ಕಾಂಗ್ರೆಸ್ ಶೇ. 18ರಷ್ಟು ಮತಗಳನ್ನು ಹೊಂದಿದೆ. ಹೀಗಾಗಿ ಈಗ ಜನರ ದೊಡ್ಡ ಆಯ್ಕೆ ಬಿಜೆಪಿ ಎನ್ನುವುದನ್ನು ಅಂಕಿಅಂಶಗಳು ಸಾಬೀತುಪಡಿಸುತ್ತವೆ” ಎಂದು ಮೋದಿ ಹೇಳಿದರು.
ಡಿಸೆಂಬರ್ 22ರಿಂದ ಜನವರಿ 25ರವರೆಗೆ ಆಯೋಜಿಸಿರುವ ‘ವಿಕಾಸ್ ಭಾರತ್ ಸಂಕಲ್ಪ್ ಯಾತ್ರೆ’ (Vikas Bharat Sankalp Yatra)ಯಲ್ಲಿ ಭಾಗವಹಿಸಲು ಎಲ್ಲ ಬಿಜೆಪಿ ಸಂಸದರಿಗೆ ಪ್ರಧಾನಿ ಕರೆ ನೀಡಿದರು. ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳಿಗಾಗಿ ಜಾರಿಗೆ ತಂದಿರುವ ಇತ್ತೀಚಿನ ವಿಶ್ವಕರ್ಮ ಯೋಜನೆಯನ್ನು ಎಲ್ಲರಿಗೂ ತಲುಪಿಸುವಂತೆ ಮಾಡಲು ಅವರು ಸಂಸದರಿಗೆ ಸೂಚಿಸಿದರು.
ಇನ್ನು ದೇಶೀಯ ಯುದ್ಧ ವಿಮಾನ ತೇಜಸ್ ಯೋಜನೆಯ ಕುರಿತು ಮಾತನಾಡಿದ ಮೋದಿ ಇದನ್ನು ʼಮೇಕ್ ಇನ್ ಇಂಡಿಯಾʼ ಯೋಜನೆಯ ಭಾಗ ಎಂದು ಶ್ಲಾಘಿಸಿದರು. ಇದು ಜಾಗತಿಕವಾಗಿ ಗುರುತಿಸ್ಪಟ್ಟಿದೆ. ದೇಶೀಯ ಉತ್ಪಾದನೆಗೆ ಇನ್ನಷ್ಟು ಉತ್ತೇಜನ ನೀಡುವತ್ತ ಗಮನ ಹರಿಸಬೇಕು ಎಂದು ಹೇಳಿದರು.
ಮುಖ್ಯಮಂತ್ರಿಗಳ ಆಯ್ಕೆಯ ಕುತೂಹಲ
ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಆಯ್ಕೆಯ ಬಗ್ಗೆ ಇನ್ನೂ ಕುತೂಹಲ ಮುಂದುವರಿದಿರುವ ಮಧ್ಯೆಯೇ ಪ್ರಸಕ್ತ ಚಳಿಗಾಲದ ಅಧಿವೇಶನದ ಸಮಯದಲ್ಲಿ ಬಿಜೆಪಿ ನಡೆಸಿದ ಮೊದಲ ಸಭೆ ಇದಾಗಿದೆ. ಸಂಸತ್ ಭವನ ಸಂಕೀರ್ಣದ ಬಾಲಯೋಗಿ ಸಭಾಂಗಣದಲ್ಲಿ ಬಿಜೆಪಿ ಸಂಸದೀಯ ಪಕ್ಷದ ಸಭೆ ಆಯೋಜಿಸಲಾಗಿತ್ತು.
ಸಭೆಯ ಆರಂಭಕ್ಕೂ ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪ್ರಧಾನಿಯನ್ನು ಸ್ವಾಗತಿಸಿದರು ಮತ್ತು ಪಕ್ಷದ ಸಂಸದರು “ಮೋದಿ ಜಿ ಕಾ ಸ್ವಾಗತ್ ಹೈ” ಎಂಬ ಘೋಷಣೆ ಕೂಗಿದರು. ದೊಡ್ಡ ಚಪ್ಪಾಳೆಯೊಂದಿಗೆ ಮೋದಿ ಅವರನ್ನು ಅಭಿನಂದಿಸಿದರು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Assembly Election 2023: 3 ರಾಜ್ಯಗಳಲ್ಲೂ ಮುಖ್ಯಮಂತ್ರಿಯಾಗಿ ಬಿಜೆಪಿಯಿಂದ ಹೊಸ ಮುಖ
ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಣ್ಣಿಸಲಾಗಿದೆ. ಈ ನಿರ್ಣಾಯಕ ಚುನಾವಣೆಯಲ್ಲಿ ಬಿಜೆಪಿ ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಅಧಿಕಾರಕ್ಕೆ ಬಂದಿದೆ. ಎರಡೂ ರಾಜ್ಯಗಳಲ್ಲಿ ಆಡಳಿತರೂಢ ಕಾಂಗ್ರೆಸ್‌ನಿಂದ ಬಿಜೆಪಿ ಅಧಿಕಾರವನ್ನು ಪಡೆದುಕೊಂಡಿತ್ತು. ಮಧ್ಯಪ್ರದೇಶದಲ್ಲಿ ತನ್ನ ಸರ್ಕಾರವನ್ನು ಉಳಿಸಿಕೊಂಡಿತ್ತು. ಕಾಂಗ್ರೆಸ್ ತೆಲಂಗಾಣದಲ್ಲಿ ಮಾತ್ರ ಅಧಿಕಾರ ಹಿಡಿದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ