Site icon Vistara News

PM Modi Parliament Speech: ಪ್ರತಿಪಕ್ಷಗಳ ಆರೋಪಗಳಿಗೆ ಗೇಲಿ ಮೂಲಕವೇ ಗೋಲಿ ಹೊಡೆದ ಮೋದಿ!

PM Narendra Modi attack oppositions with A Story In Parliament

#image_title

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇರುವುದೇ ಹಾಗೆ. ಅವರು ಪ್ರತಿಪಕ್ಷಗಳಿಗೆ ತಿರುಗೇಟು ನೀಡುವಾಗ, ಚಾಟಿಯೇಟು ಬೀಸುವಾಗ ವ್ಯಂಗ್ಯ, ಟೀಕೆ, ಗೇಲಿ, ವಿಮರ್ಶೆ, ತಿರುಗೇಟು, ಕುಚೋದ್ಯ, ಪರಾಮರ್ಶೆ, ವಿಡಂಬನೆ ಇದ್ದೇ ಇರುತ್ತವೆ. ಸ್ವಲ್ಪವಾದರೂ ಕಾಲೆಳೆಯದೆ ಪ್ರತಿಪಕ್ಷಗಳನ್ನು ಮೋದಿ ಸುಮ್ಮನೆ ಬಿಡುವುದಿಲ್ಲ. ಅಷ್ಟರಮಟ್ಟಿಗೆ ಅವರು ಪ್ರತಿಪಕ್ಷಗಳ ಆರೋಪಗಳಿಗೆ ತಿರುಗೇಟು ನೀಡುತ್ತಾರೆ. ಇದಕ್ಕೆ ಬುಧವಾರ ಸಂಸತ್ತಿನಲ್ಲಿ (PM Modi Parliament Speech) ರಾಷ್ಟ್ರಪತಿಯವರ ವಂದನಾ ನಿರ್ಣಯಕ್ಕೆ ಉತ್ತರಿಸುವ ವೇಳೆ ಒಂದೂವರೆ ತಾಸಿನ ನಿರರ್ಗಳ ಭಾಷಣವೇ ಸಾಕ್ಷಿಯಾಗಿದೆ.

ಜನವರಿ ೭ರಂದು ರಾಹುಲ್‌ ಗಾಂಧಿ ಅವರು ಸಂಸತ್ತಿನಲ್ಲಿ ಗೌತಮ್‌ ಅದಾನಿ, ಹಾರ್ವರ್ಡ್‌ ವಿಶ್ವವಿದ್ಯಾಲಯ, ಬೆಲೆಯೇರಿಕೆ, ಬಡತನ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿ ದೇಶದ ಗಮನ ಸೆಳೆದಿದ್ದರು. ಇದು ಮೋದಿ ಸರ್ಕಾರಕ್ಕೆ ನೀಡಿದ ಚಾಟಿಯೇಟು, ಇದಕ್ಕೆ ಸರ್ಕಾರದ ಬಳಿ ಉತ್ತರವೇ ಇಲ್ಲ ಎಂದೇ ವಿಶ್ಲೇಷಿಸಲಾಗಿತ್ತು. ಆದರೆ, ಮೋದಿ ಅವರು ಸಂಸತ್ತಿನಲ್ಲಿ ಅದಾನಿ ಹೆಸರು ಹೇಳದೆಯೇ, ರಾಹುಲ್‌ ಗಾಂಧಿ ಭಾಷಣ ಪ್ರಸ್ತಾಪಿಸದೆಯೇ ಎಳೆ ಎಳೆಯಾಗಿ ಉತ್ತರ ನೀಡಿದರು. ಗೇಲಿಯ ಮೂಲಕವೇ ಆರೋಪಗಳಿಗೆ ಗೋಲಿ ಹೊಡೆದರು.

ಹಾರ್ವರ್ಡ್‌ ವಿವಿ ಶೋಕಿ ಎನ್ನುವ ಮೂಲಕ ರಾಹುಲ್‌ ಗಾಂಧಿ ಅವರಿಗೆ ಕುಟುಕಿದರು. ಲಾಲ್‌ಚೌಕ್‌ನಲ್ಲಿ ಭದ್ರತೆಯೇ ಇಲ್ಲದೆ ತಿರಂಗಾ ಹಾರಿಸಲು ನಾವು ಕಾರಣ ಎನ್ನುವ ಮೂಲಕ ಇತ್ತೀಚೆಗೆ ರಾಹುಲ್‌ ಗಾಂಧಿ ಲಾಲ್‌ಚೌಕ್‌ನಲ್ಲಿ ಧ್ವಜಾರೋಹಣ ಮಾಡಿದ್ದರ ಹಿಂದೆ ತಮ್ಮ ಸ್ಫೂರ್ತಿ ಇದೆ ಎಂಬುದನ್ನು ಪರೋಕ್ಷವಾಗಿ ತಿಳಿಸಿದರು. ಹಾಗೆಯೇ, ಕಾಂಗ್ರೆಸ್‌ ಭ್ರಷ್ಟಾಚಾರ, ಹಗರಣಗಳು, ಈಗಿನ ಸರ್ಕಾರದ ರಾಜಕೀಯ ಸ್ಥಿರತೆ, ಸರ್ಕಾರದ ಯೋಜನೆಗಳು, ತಮ್ಮ ಮೇಲೆ ಜನ ಇಟ್ಟಿರುವ ಭರವಸೆ ಸೇರಿ ಹತ್ತಾರು ವಿಷಯಗಳನ್ನು ಪ್ರಸ್ತಾಪಿಸಿ ಪ್ರತಿಪಕ್ಷಗಳ ಆರೋಪಗಳಿಗೆ ಪ್ರತ್ಯುತ್ತರ ನೀಡಿದರು. ಮೋದಿ ಅವರು ಪ್ರಸ್ತಾಪಿಸಿದ ಪ್ರಮುಖ ವಿಷಯ, ಮಾಡಿದ ಟೀಕೆ, ಕುಟುಕಿದ ರೀತಿ, ಕಾಲೆಳೆದ ಪರಿಯ ಇಣುಕು ನೋಟ ಇಲ್ಲಿದೆ.

ಇದನ್ನೂ ಓದಿ: PM Modi: ಸ್ವಾರಸ್ಯಕರ ಕತೆ ಹೇಳಿ ಪ್ರತಿಪಕ್ಷಗಳನ್ನು ಛೇಡಿಸಿದ ಪ್ರಧಾನಿ ಮೋದಿ; ಸದನದಲ್ಲಿ ನಗುವೋ ನಗು

ದೇಶದಲ್ಲೀಗ ರಾಜಕೀಯ ಸ್ಥಿರತೆ

ಯುಪಿಎ ಸರ್ಕಾರದ ಅಸ್ಥಿರತೆ, ಭ್ರಷ್ಟಾಚಾರವನ್ನು ಪ್ರಸ್ತಾಪಿಸಿದ ಮೋದಿ, ದೇಶದಲ್ಲೀಗ ರಾಜಕೀಯ ಸ್ಥಿರತೆ ಇದೆ ಎಂದು ಪ್ರತಿಪಾದಿಸಿದರು. “ಕಳೆದ ಎರಡು ದಶಕಗಳಲ್ಲಿ ಭಾರತದಲ್ಲಿ ರಾಜಕೀಯ ಅಸ್ಥಿರತೆ ಇತ್ತು. ಆದರೆ, ಈಗ ಭಾರತದಲ್ಲಿ ರಾಜಕೀಯ ಸ್ಥಿರತೆ ಇದೆ. ಇದಕ್ಕೂ ಮೊದಲು ಸರ್ಕಾರಗಳು ಅಸ್ತಿತ್ವದಲ್ಲಿದ್ದಾಗ ದೇಶದಲ್ಲಿ ರಾಜಕೀಯ ಅಸ್ಥಿರತೆ ಇತ್ತು. ವಿಶ್ವವು ಅಭಿವೃದ್ಧಿ ಹೊಂದುತ್ತಿದ್ದರೆ, ಭಾರತದಲ್ಲಿ ಮಾತ್ರ ೨ಜಿ, ಕಾಮನ್‌ವೆಲ್ತ್‌ ಗೇಮ್ಸ್‌ ಸೇರಿ ಹಲವು ಹಗರಣಗಳ ಚರ್ಚೆಯಾಗುತ್ತಿತ್ತು. ಆದರೆ, ದೇಶದ ಚಿತ್ರಣವೀಗ ಬದಲಾಗಿದೆ. ರಾಜಕೀಯ ಅಸ್ಥಿರತೆಯು ದೇಶವನ್ನು ಏಳಿಗೆಯತ್ತ ಕೊಂಡೊಯ್ಯುತ್ತಿದೆ” ಎಂದು ಹಿಂದಿನ ಸರ್ಕಾರದ ಹಳವಂಡವನ್ನು ತೆರೆದಿಟ್ಟರು.

ಭದ್ರತೆಯೇ ಇಲ್ಲದೆ ಲಾಲ್‌ಚೌಕ್‌ನಲ್ಲಿ ತಿರಂಗಾ

“ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿರುವ ಲಾಲ್‌ಚೌಕ್‌ನಲ್ಲಿ ಭದ್ರತೆಯೇ ಇಲ್ಲದೆ ತಿರಂಗಾ ಹಾರಿಸಿದ್ದು ನಮ್ಮ ಸರ್ಕಾರದ ಸಾಧನೆ” ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. “ಲಾಲ್‌ಚೌಕ್‌ನಲ್ಲಿ ತಿರಂಗಾ ಹಾರಿಸಿದರೆ ಶಾಂತಿ ಕದಡುತ್ತದೆ ಎಂಬ ಮಾತಿತ್ತು. ಉಗ್ರರು ಕೂಡ ಸವಾಲು ಹಾಕುತ್ತಿದ್ದರು, ಪೋಸ್ಟರ್‌ ಅಂಟಿಸುತ್ತಿದ್ದರು. ಆದರೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಉಗ್ರರನ್ನು ನಿಗ್ರಹಿಸಲಾಗಿದೆ. ಹಾಗಾಗಿಯೇ, ಇಂದು ಭದ್ರತೆಯೇ ಇಲ್ಲದೆ ಲಾಲ್‌ಚೌಕ್‌ನಲ್ಲಿ ಧ್ವಜಾರೋಹಣ ನೆರವೇರಿಸಬಹುದಾಗಿದೆ” ಎಂದು ಹೇಳಿದರು.

ಇದನ್ನೂ ಓದಿ: PM Modi: ಇಂದು ಪ್ರಧಾನಿ ಮೋದಿಯವರು ಸಂಸತ್ತಿಗೆ ಧರಿಸಿ ಬಂದ ನೀಲಿ ಜಾಕೆಟ್​​ ವಿಶೇಷತೆಯೇನು?

ಹಾರ್ವರ್ಡ್‌ ಶೋಕಿ ಎಂದು ಕುಟುಕಿದ ಪ್ರಧಾನಿ

“ಗೌತಮ್‌ ಅದಾನಿ ಸಂಪತ್ತಿನ ಏರಿಕೆ ಕುರಿತು ಹಾರ್ವರ್ಡ್‌ ವಿವಿಯಲ್ಲಿ ಸಂಶೋಧನೆಯಾಗಬೇಕು” ಎಂಬುದಾಗಿ ರಾಹುಲ್‌ ಗಾಂಧಿ ಮಾಡಿದ ಟೀಕೆಗೆ ಮೋದಿ ಪ್ರತ್ಯುತ್ತರ ನೀಡಿದರು. “ಸದನದಲ್ಲಿ ನಿನ್ನೆ ಒಬ್ಬರು ಹಾರ್ವರ್ಡ್‌ ವಿಶ್ವವಿದ್ಯಾಲಯದ ಬಗ್ಗೆ ಪದೇಪದೆ ಹೇಳುತ್ತಿದ್ದರು. ಅವರಿಗೆ ಹಾರ್ವರ್ಡ್‌ನಲ್ಲಿ ಓದಿರುವ ಶೋಕಿ ಇದೆ. ಕೆಲ ನಾಯಕರಿಗೆ ಹಾರ್ವರ್ಡ್‌ ವಿವಿ ಬಗ್ಗೆ ಭಾರಿ ಪ್ರೀತಿ ಇದೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲೂ ಹಾರ್ವರ್ಡ್‌ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ, ಅದೇ ಹಾರ್ವರ್ಡ್‌ ವಿವಿಯಲ್ಲಿ ಒಂದು ಅಧ್ಯಯನ ನಡೆದಿದೆ. ಅದರ ವಿಷಯವಂತೂ ತುಂಬ ಚೆನ್ನಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಏಳಿಗೆ ಮತ್ತು ಅವನತಿ (The Rise And Decline Of Indian Congress Party) ಎಂಬ ವಿಷಯದ ಬಗ್ಗೆ ಅಧ್ಯಯನ ನಡೆದಿದೆ. ಇದರ ಕುರಿತು ಎಲ್ಲ ವಿವಿಗಳಲ್ಲೂ ಅಧ್ಯಯನ ನಡೆಯಬೇಕು” ಎಂದು ಕುಟುಕಿದರು.

ಜಿ-20 ಆತಿಥ್ಯ ಕುರಿತು ಪ್ರತಿಪಕ್ಷಗಳ ವಿರುದ್ಧ ಮೋದಿ ‘ಉರಿ’ ಅಟ್ಯಾಕ್

ಭಾರತವು ಜಿ 20 ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ. ಆದರೆ, ಕೆಲವು ಜನರಿಗೆ ಈ ಬಗ್ಗೆ ಖುಷಿಯಿಲ್ಲ ಎಂದು ಮೋದಿ ಟೀಕಿಸಿದರು. “140 ಕೋಟಿ ಭಾರತೀಯರು ಕೋವಿಡ್ 19 ಸವಾಲನ್ನು ಗೆದ್ದು ಬಂದಿದ್ದಾರೆ. ಇದೊಂದು ಹೆಮ್ಮೆಯ ಸಂಗತಿ. ಹಾಗೆಯೇ ನಮ್ಮ ಆರ್ಥಿಕ ಸವಾಲಗಳು ನೀಗಿಸಿದ್ದರಿಂದ ನಾವೀಗ 5ನೇ ಅತಿದೊಡ್ಡ ಆರ್ಥಿಕತೆಯಾಗಿದ್ದೇವೆ. ಇದು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ” ಎಂದರು.

ಐದನೇ ಬೃಹತ್‌ ಆರ್ಥಿಕತೆ ಹೊಂದಿರುವ ರಾಷ್ಟ್ರ ಎಂದು ಬಣ್ಣನೆ

ಭಾರತದ ಆರ್ಥಿಕ ಏಳಿಗೆ ಕುರಿತು ನರೇಂದ್ರ ಮೋದಿ ಮೆಚ್ಚುಗೆಯ ಮಾತುಗಳನ್ನಾಡಿದರು. “ನಮ್ಮ ನೆರೆ ಹೊರೆಯ ರಾಷ್ಟ್ರಗಳು ಆರ್ಥಿಕ ಸಂಕಟಗಳಿಂದ ಬಳಲುತ್ತಿವೆ. ಒಂದೊತ್ತಿನ ಊಟಕ್ಕೂ ಪರದಾಡುತ್ತಿವೆ. ಇಂಥ ವಿಷಮ ಸಂದರ್ಭದಲ್ಲೂ ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರ ಹೊಮ್ಮಿದೆ. ಭಾರತಕ್ಕೆ ಜಿ20 ಮುನ್ನೆಡಸುವ ಅವಕಾಶ ದೊರೆತಿದೆ” ಎಂದು ತಿಳಿಸಿದರು.

ರಾಷ್ಟ್ರಪತಿಗಳಿಂದ ಆದಿವಾಸಿಗಳ ಗೌರವ ದ್ವಿಗುಣ

ಆದಿವಾಸಿ ಮಹಿಳೆಯೊಬ್ಬರು ದೇಶದ ರಾಷ್ಟ್ರಪತಿ ಹುದ್ದೆಗೇರಿರುವ ಕುರಿತು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. “ರಾಷ್ಟ್ರಪತಿಯ ಭಾಷಣದ ಬಗ್ಗೆ ಈ ಹಿಂದೆ ಹಲವು ಬಾರಿ ನನಗೆ ಮಾತನಾಡುವ ಅವಕಾಶ ಸಿಕ್ಕಿದೆ. ರಾಷ್ಟ್ರಪತಿಗಳಿಗೆ ಈ ಸಂದರ್ಭದಲ್ಲಿ ಶುಭಾಶಯಗಳನ್ನು ತಿಳಿಸುತ್ತೇನೆ. ರಾಷ್ಟ್ರಪತಿಗಳು ಆದಿವಾಸಿ ಸಮಾಜದ ಗೌರವ ಹೆಚ್ಚಿಸಿದ್ದಾರೆ. ಈ ಅಮೃತ ಮಹೋತ್ಸವದಲ್ಲಿ ದೇಶದ ಮಹಿಳೆಯರಿಗೆ ಗೌರವ ಹೆಚ್ಚಿಸಿದೆ” ಎಂದರು. ರಾಷ್ಟ್ರಪತಿಯವರಿಗೆ ಒಬ್ಬ ಮಹಾನ್‌ ನಾಯಕನಿಂದ ಅವಮಾನವಾಗಿದೆ ಎಂದೂ ರಾಹುಲ್‌ ಗಾಂಧಿ ಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು.

Exit mobile version