Site icon Vistara News

Naresh Goyal: ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಜೆಟ್‌ ಏರ್‌ವೇಯ್ಸ್ ಸಂಸ್ಥಾಪಕ ನರೇಶ್ ಗೋಯಲ್ ಅರೆಸ್ಟ್

Naresh Goyal

ನವದೆಹಲಿ: ಅಕ್ರಮ ಹಣ ವರ್ಗಾವಣೆಗೆ (money laundering case) ಸಂಬಂಧಿಸಿದಂತೆ ಜೆಟ್‌ ಏರ್‌ವೇಯ್ಸ್‌ನ (Jet Airways) ಸಂಸ್ಥಾಪಕ ನರೇಶ್ ಗೋಯಲ್ (Naresh Goyal Arrested) ಅವರನ್ನು ಜಾರಿ ನಿರ್ದೇಶನಾಲಯವು (Enforcement Directorate) ಶುಕ್ರವಾರ ರಾತ್ರಿ ಬಂಧಿಸಿದೆ. ಕೆನರಾ ಬ್ಯಾಂಕ್‌ನಲ್ಲಿ 538 ಕೋಟಿ ರೂ. ಬ್ಯಾಂಕ್ ವಂಚನೆ ಆರೋಪದಡಿ ಹಣ ವರ್ಗಾವಣೆ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿದೆ. ಕೇಂದ್ರ ಏಜೆನ್ಸಿಯ ಕಚೇರಿಯಲ್ಲಿ ಸುದೀರ್ಘ ವಿಚಾರಣೆಯ ನಂತರ ಗೋಯಲ್ ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

74 ವರ್ಷದ ನರೇಶ್ ಗೋಯಲ್ ಅವರನ್ನು ಶನಿವಾರ ಮುಂಬೈನ ವಿಶೇಷ ಪಿಎಂಎಲ್‌ಎ ನ್ಯಾಯಾಲಯಕ್ಕೆ ಹಾಜರುಪಡಿಸುವ ನಿರೀಕ್ಷೆಯಿದೆ. ಅಲ್ಲಿ ಜಾರಿ ನಿರ್ದೇಶನಾಲಯವು ಅವರ ಕಸ್ಟಡಿ ರಿಮಾಂಡ್‌ಗಾಗಿ ಪ್ರಯತ್ನಿಸಲಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಕೆನರಾ ಬ್ಯಾಂಕಿನ ದೂರಿನ ಆಧಾರದ ಮೇಲೆ ಕೇಂದ್ರೀಯ ತನಿಖಾ ದಳ (CBI) ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಜುಲೈ 20 ರಂದು ಜಾರಿ ನಿರ್ದೇಶನಾಲಯವು ಗೋಯಲ್ ಮತ್ತು ಅವರ ಪತ್ನಿ ಅನಿತಾ ಮತ್ತು ಅವರ ಸಹಚರರ ಮನೆಗಳ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಂಡಿತ್ತು.

ಈ ಸುದ್ದಿಯನ್ನೂ ಓದಿ: Jet Airways: ಕೆನರಾ ಬ್ಯಾಂಕ್​ಗೆ 538 ಕೋಟಿ ರೂ. ವಂಚನೆ; ಜೆಟ್​ ಏರ್​ ವೇ ಸಂಸ್ಥಾಪಕನ ವಿರುದ್ಧ ಸಿಬಿಐ ತನಿಖೆ ಪ್ರಾರಂಭ

ಎಫ್‌ಐಆರ್ ಪ್ರಕಾರ, ಜೆಟ್ ಏರ್‌ವೇಸ್ (JIL) 848.86 ಕೋಟಿ ರೂ. ಮೊತ್ತದ ಸಾಲದ ಮಿತಿಗಳು ಮತ್ತು ಸಾಲಗಳನ್ನು ಮಂಜೂರು ಮಾಡಿತ್ತು. ಆದರೆ, ಈ ಪೈಕಿ 538.62 ಕೋಟಿ ರೂ. ಸಾಲ ಮರು ಪಾವತಿಸಿಲ್ಲ ಎಂದು ಕೆನರಾ ಬ್ಯಾಂಕ್ ದೂರಿತ್ತು. 2021ರ ಜುಲೈ 29ರಂದು ಇವರ ಖಾತೆಯನ್ನು “ವಂಚನೆ” ಎಂದು ಘೋಷಿಸಲಾಗಿತ್ತು.

Exit mobile version