Site icon Vistara News

Maharashtra ATS: ಐಸಿಸ್‌ಗೆ ಹಣ ಕಳುಹಿಸುತ್ತಿದ್ದ ಶಂಕಿತ ಉಗ್ರ ನಾಸಿಕ್‌ನ ಎಂಜಿನಿಯರ್ ಅರೆಸ್ಟ್!

Nashik engineer arrested for sending money to ISIS Says Maharashtra ATS

ಮುಂಬೈ: ಐಸಿಸ್ ಉಗ್ರ ಸಂಘಟನೆಗೆ (ISIS Terrorist Group) ಹಣ ರವಾನಿಸುತ್ತಿದ್ದ 32 ವರ್ಷದ ಎಂಜಿನಿಯರ್‌ನನ್ನು (Nashik Engineer Arrested) ಉಗ್ರ ನಿಗ್ರಹ ಪಡೆಯು ಮಹಾರಾಷ್ಟ್ರದ (Maharashtra ATS) ನಾಸಿಕ್ ಸಿಟಿಯಿಂದ ಬುಧವಾರ ಅರೆಸ್ಟ್ ಮಾಡಿದೆ. ಮುಂಬೈನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ನಾಸಿಕ್‌ನಲ್ಲಿ ಬಂಧಿತ ವ್ಯಕ್ತಿ ಇಂಪೋರ್ಟ್-ಎಕ್ಸ್‌ಪೋರ್ಟ್‌ ವ್ಯವಹಾರ ಮಾಡುತ್ತಿದ್ದ. ಅಲ್ಲದೇ, ಐಸಿಸ್‌ಗೆ ನಿಧಿ ಸಂಗ್ರಹ ಜತೆಗೆ ಬೆಂಬಲ ಕೂಡ ನೀಡುತ್ತಿದ್ದ ಎಂದು ಎಟಿಎಸ್ ತಿಳಿಸಿದೆ.

ಬಂಧಿತ ಆರೋಪಿಯ ಕುರಿತಾದ ಈವರೆಗಿನ ತನಿಖೆಯ ವೇಳೆ ಕೆಲವು ಸಂಗತಿಗಳು ಪತ್ತೆಯಾಗಿವೆ. ಭಯಾನಕ ಉಗ್ರ ಸಂಘಟನೆ ಐಸಿಸ್‌ಗೆ ಬಂಧಿತ ಆರೋಪಿಯು ಇದುವರೆಗೆ ಮೂರು ಹಣ ರವಾನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈತನೊಂದಿಗೆ ನಂಟು ಹೊಂದಿರುವ ಇತರನ್ನು ದೇಶದ ವಿವಿಧ ರಾಜ್ಯಗಳಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ, ಎಟಿಎಸ್ ಆರೋಪಿಯ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ (ಯುಎಪಿಎ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಅಪರಾಧವನ್ನು ದಾಖಲಿಸಿದೆ ಮತ್ತು ರಾಜ್ಯ ಪೊಲೀಸ್‌ನ ಭಯೋತ್ಪಾದನಾ ವಿರೋಧಿ ವಿಭಾಗದ ತಂಡವು ಅವರ ಚಟುವಟಿಕೆಗಳ ಮೇಲೆ ಹಲವಾರು ದಿನಗಳವರೆಗೆ ನಿಗಾ ಇರಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ತನಿಖೆಯ ಸಮಯದಲ್ಲಿ, ಆರೋಪಿಯು ಐಸಿಸ್‌ಗೆ ಸಂಬಂಧಿಸಿದ ವಿದೇಶಿ ಘಟಕದೊಂದಿಗೆ ನಿರಂತರವಾಗಿ ಸಂವಹನ ನಡೆಸುತ್ತಿರುವುದನ್ನು ಎಟಿಎಸ್ ಪತ್ತೆ ಮಾಡಿದೆ ಎಂದು ಭಯೋತ್ಪಾದನಾ ವಿರೋಧಿ ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇತ್ತೀಚಿನ ವರ್ಷಗಳಲ್ಲಿ ರ್ಯಾಡಿಕಲ್ ಆಗಿ ಗುರುತಿಸಿಕೊಂಡಿದ್ದ ಇಂಜಿನಿಯರ್-ಕಮ್-ಉದ್ಯಮಿ, ವಿದೇಶಿ ಘಟಕಕ್ಕೆ ಹಣವನ್ನು ವರ್ಗಾಯಿಸುವ ಮೂಲಕ ಐಸಿಸ್ ಅನ್ನು ಸಕ್ರಿಯವಾಗಿ ಬೆಂಬಲಿಸಿದ್ದ ಎಂದು ಎಟಿಎಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಬಂಧಿತನಿಗೆ ಸೇರಿದ ಎಲೆಕ್ಟ್ರಾನಿಕ್ ಸಾಧನಗಳು, ಮೊಬೈಲ್ ಫೋನ್, ಸಿಮ್ ಕಾರ್ಡ್ಸ್, ಲ್ಯಾಪ್‌ಟಾಪ್, ಪೆನ್ ಡ್ರೈವ್ ಮತ್ತು ಪ್ರಚೋದನಕಾರಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಜನವರಿ 31ರವರೆಗೂ ಎಟಿಎಸ್‌ ಕಸ್ಟಡಿಗೆ ನೀಡಿದೆ.

ಈ ಸುದ್ದಿಯ್ನನ್ನೂ ಓದಿ: ISIS Link: ಐಸಿಸ್‌ ಜತೆ ನಂಟು;‌ ಅಲಿಗಢ ಮುಸ್ಲಿಂ ವಿವಿ ವಿದ್ಯಾರ್ಥಿ ಫೈಜಾನ್‌ ಬಂಧನ

Exit mobile version