Site icon Vistara News

CWC meet : ಒಂದು ದೇಶ ಒಂದು ಚುನಾವಣೆಗೆ ವಿರೋಧ, ಇನ್ನೇನಿವೆ ಕಾಂಗ್ರೆಸ್​ನ ಕಾರ್ಯಸೂಚಿಗಳು?

P Chidambaram

ಹೈದರಾಬಾದ್​: ಇಲ್ಲಿ ನಡೆದ ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯಲ್ಲಿ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್​ ಹೇಳಿದೆ. ಮೋದಿ ಸರ್ಕಾರದ, ಒಂದು ದೇಶ ಒಂದು ಚುನಾವಣೆಯ ಪ್ರಸ್ತಾಪವನ್ನು ತಿರಸ್ಕರಿಸುವುದಾಗಿ ಹೇಳಿದ ಪಕ್ಷದ ಮುಖಂಡರು ಭಾರತ್​ ಜೋಡೊ ಎರಡನೇ ಹಂತವನ್ನು ಆರಂಭಿಸುವುದಾಗಿ ತಿಳಿಸಿದೆ.

ಶನಿವಾರ ನಡೆದ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು ಮಾತನಾಡಿದ್ದು, ಕಾಂಗ್ರೆಸ್ ಪಕ್ಷವು ಪೂರ್ವದಿಂದ ಪಶ್ಚಿಮಕ್ಕೆ ‘ಭಾರತ್ ಜೋಡೋ ಯಾತ್ರೆ’ ನಡೆಸಬೇಕು ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ (ಸಿಡಬ್ಲ್ಯೂಸಿ) ಚರ್ಚೆ ನಡೆದಿದೆ. ಈ ವಿಚಾರ ಪರಿಗಣನೆಯಲ್ಲಿದೆ ಎಂದು ಹೇಳಿದ್ದಾರೆ.

ನಾವು ಪೂರ್ವದಿಂದ ಪಶ್ಚಿಮಕ್ಕೆ ಭಾರತ್ ಜೋಡೋ ಯಾತ್ರಾ 2 ಅನ್ನು ನಡೆಸಬೇಕು ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸದಸ್ಯರು ವಿನಂತಿಸಿದ್ದಾರೆ. ಸಭೆಯಲ್ಲಿ ಕರಡು ನಿರ್ಣಯದ ಬಗ್ಗೆ ಚರ್ಚಿಸಲಾಗುತ್ತಿದೆ . ಚರ್ಚೆಗಳು ಇನ್ನೂ ನಡೆಯುತ್ತಿವೆ. ನಾವು ದೇಶದ ಪರಿಸ್ಥಿತಿಯ ಬಗ್ಗೆ ಚರ್ಚಿಸುತ್ತಿದ್ದೇವೆ. ವಿಶಾಲವಾಗಿ, ಇದನ್ನು ರಾಜಕೀಯ ಪರಿಸ್ಥಿತಿ, ದೇಶ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಮತ್ತು ದೇಶಕ್ಕೆ ದೊಡ್ಡ ಸವಾಲಾಗಿರುವ ಆಂತರಿಕ ಮತ್ತು ಬಾಹ್ಯ ಭದ್ರತಾ ಬೆದರಿಕೆಗಳು ಎಂದು ವಿಂಗಡಿಸಬಹುದ ಎಂದು ಚಿದಂಬರಂ ಅರು ಹೇಳಿದ್ದಾರೆ.

ಪ್ರಸ್ತುತ ರಾಜಕೀಯ ಪರಿಸ್ಥಿತಿಯಲ್ಲಿ, ದೇಶದ ಸಾಂವಿಧಾನಿಕ ಮತ್ತು ಒಕ್ಕೂಟ ವ್ಯವಸ್ಥೆಯ ರಚನೆಗೆ ಸವಾಲು ಎದುರಾಗಿದೆ ಎಂದು ನಾವು ನಂಬುತ್ತೇವೆ. ಒಕ್ಕೂಟ ವ್ಯವಸ್ಥೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸಲಾಗುತ್ತಿದೆ. ಇದು ರಾಜ್ಯ ಸರ್ಕಾರಗಳಿಗೆ ಅಡ್ಡಿಯಾಗಿದೆ, ರಾಜ್ಯ ಸರ್ಕಾರಗಳಿಗೆ ಆದಾಯವನ್ನು ನಿರಾಕರಿಸಲಾಗಿದೆ ಮತ್ತು ಕಡಿಮೆ ಮಾಡಲಾಗಿದೆ. ರಾಜ್ಯ ಸರ್ಕಾರಗಳು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವ ಹಾದಿಯಲ್ಲಿ ಅಡೆತಡೆಗಳನ್ನು ಎದುರಿಸುತ್ತಿದೆ” ಎಂದು ಕಾಂಗ್ರೆಸ್ ನಾಯಕ ಚಿದಂಬರಂ ಅವರು ಹೇಳಿದ್ದಾರೆ.

ಇದನ್ನೂ ಓದಿ : Supreme Court : ಪಿಎಂ ಕೇರ್ಸ್​ ಎಲ್ಲ ಅನಾಥ ಮಕ್ಕಳಿಗೂ ಮೀಸಲಾಗಲಿ; ಕೇಂದ್ರಕ್ಕೆ ಸುಪ್ರೀಂ ಕೋರ್ಟ್​ ಹೇಳಿದ್ಯಾಕೆ?

ಒಂದು ದೇಶ ಒಂದು ಚುನಾವಣೆಗೆ ವಿರೋಧ

ಕೇಂದ್ರ ಸರ್ಕಾರದ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕ್ರಮದ ಬಗ್ಗೆ ಮಾತನಾಡಿದ ಚಿದಂಬರಂ, ಇದು ಸಂವಿಧಾನದ ಮೇಲಿನ ದಾಳಿಯಾಗಿದೆ ಎಂದು ಹೇಳಿದರು. “ನಾವು ಅದನ್ನು ತಿರಸ್ಕರಿಸುತ್ತೇವೆ. ಇದು ಒಕ್ಕೂಟ ವ್ಯವಸ್ಥೆಯ ಮೇಲಿನ ದಾಳಿ. ಇದಕ್ಕೆ ಕನಿಷ್ಠ ಐದು ಸಾಂವಿಧಾನಿಕ ತಿದ್ದುಪಡಿಗಳು ಬೇಕಾಗುತ್ತವೆ. ಈ ಸಾಂವಿಧಾನಿಕ ತಿದ್ದುಪಡಿಗಳನ್ನು ಅಂಗೀಕರಿಸಲು ತನ್ನ ಬಳಿ ಸಂಖ್ಯಾಬಲವಿಲ್ಲ ಎಂದು ಬಿಜೆಪಿಗೆ ತಿಳಿದಿದೆ. ಆದರೂ ಅದು ಒಂದು ರಾಷ್ಟ್ರ, ಒಂದು ಚುನಾವಣೆ ಎಂಬ ಮರೀಚಿಕೆಯನ್ನು ಮುಂದಿಟ್ಟು, ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ಸುಳ್ಳು ನಿರೂಪಣೆ ಸೃಷ್ಟಿಸಲು ಹೊರಟಿದೆ ಎಂದು ಹೇಳಿದರು.

ಸನಾತನ ಧರ್ಮದ ತಂಟೆಗಿಲ್ಲ

ಸಿಡಬ್ಲ್ಯೂಸಿ ಸಭೆಯಲ್ಲಿ ಸನಾತನ ಧರ್ಮ ವಿವಾದದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಚಿದಂಬರಂ ಸ್ಪಷ್ಟಪಡಿಸಿದ್ದಾರೆ . ಸನಾತನ ಧರ್ಮದ ಬಗ್ಗೆ ಯಾವುದೇ ವಿವಾದಕ್ಕೆ ಸಿಲುಕಲು ಕಾಂಗ್ರೆಸ್ ಸಿದ್ಧವಿಲ್ಲ. ನಾವು ಎಲ್ಲಾ ಧರ್ಮಗಳಿಗೆ ಸಮಾನ ಗೌರವವನ್ನು ಉಳಿಸಿಕೊಂಡಿದ್ದೇವೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Exit mobile version