Site icon Vistara News

National Girl Child Day 2024: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಹಿನ್ನೆಲೆ ಏನು?

National Girl Child Day 2024

ಭಾರತೀಯ ಹೆಣ್ಣು ಮಕ್ಕಳು ಸಮಾಜದಲ್ಲಿ ಎದುರಿಸುತ್ತಿರುವ ತಾರತಮ್ಯದ ಬಗೆಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಪ್ರತಿ ವರ್ಷ ಜನವರಿ 24ನೇ ದಿನವನ್ನು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವೆಂದು ಗುರುತಿಸಲಾಗಿದೆ. 2008ರಂದು ಮೊದಲ ಬಾರಿಗೆ ಈ ದಿನವನ್ನು ಕೇಂದ್ರ ಸರಕಾರ ಆಚರಣೆಗೆ ತಂದಿತ್ತು. ಅಂದಿನಿಂದ ಪ್ರತಿ ವರ್ಷ ಈ ದಿನವನ್ನು (National Girl Child Day 2024) ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವೆಂದು ಆಚರಿಸಲಾಗುತ್ತಿದೆ.

ಹಿನ್ನೆಲೆ ಏನು?

ದೀರ್ಘ ಕಾಲದಿಂದ ಸಮಾಜದಲ್ಲಿ ಬೇರೂರಿ ಬಂದಿರುವ ಲಿಂಗ ತಾರತಮ್ಯದ ಬಗೆಗೆ ಜಾಗೃತಿ ಮೂಡಿಸುವ ಪ್ರಯತ್ನವಿದು. ಶಿಕ್ಷಣ, ಆಹಾರವೂ ಸೇರಿದಂತೆ ಎಲ್ಲ ಮೂಲಭೂತ ಹಕ್ಕುಗಳು, ಉದ್ಯೋಗ ಮುಂತಾದ ಕಡೆಗಳಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಸವಾಲುಗಳನ್ನು, ಅವರ ಸಾಧ್ಯತೆಗಳನ್ನು ತೆರೆದು ತೋರಿಸುವ ಉದ್ದೇಶವೂ ಈ ಜಾಗೃತಿ ದಿನದ ಹಿಂದಿದೆ.
ಹೆಣ್ಣು ಜೀವದ ಅನನ್ಯತೆ ಮತ್ತು ಘನತೆಯನ್ನು ಸಮಾಜಕ್ಕೆ ತಿಳಿ ಹೇಳುವ ಉದ್ದೇಶದಿಂದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಈ ಆಚರಣೆಯನ್ನು ಕೈಗೆತ್ತಿಕೊಂಡಿದ್ದು, ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆ ಮತ್ತು ಅನ್ಯಾಯಗಳ ಕುರಿತು ಗಮನ ಸೆಳೆಯುವ ಉದ್ದೇಶವೂ ಇದರ ಹಿಂದಿದೆ. ಜೊತೆಗೆ, ದೇಶದ ಕಾನೂನು ಮಹಿಳೆಯರಿಗೆ ನೀಡಿರುವ ಹಕ್ಕುಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನವೂ ಹೌದು.

ಉದ್ದೇಶಗಳು ಹೀಗಿವೆ

ಹೆಣ್ಣು ಭ್ರೂಣಗಳ ಹತ್ಯೆ, ಲಿಂಗ ಅಸಮಾನತೆ, ಲೈಂಗಿಕ ದೌರ್ಜನ್ಯ, ಸ್ತ್ರೀ ಶಿಕ್ಷಣದ ಅಗತ್ಯ, ಮಹಿಳೆಯರ ಆರೋಗ್ಯ ರಕ್ಷಣೆಯಲ್ಲಿ ಪೌಷ್ಟಿಕ ಆಹಾರದ ಮಹತ್ವ ಮುಂತಾದ ಬಹಳಷ್ಟು ವಿಷಯಗಳ ಬಗ್ಗೆ ಸಮಾಜದಲ್ಲಿ ತಿಳುವಳಿಕೆ ಮೂಡಿಸುವುದು ಈ ದಿನದ ಉದ್ದೇಶ. ಜೊತೆಗೆ, ಉಳಿದೆಲ್ಲರಂತೆ ಅವರಿಗೂ ಅವಕಾಶಗಳ ಬಾಗಿಲು ತೆರೆಯುವುದು, ಲಿಂಗದ ನೆಲೆಯಲ್ಲಿನ ಅಸಮಾನತೆಯನ್ನು ಹೋಗಲಾಡಿಸುವುದು, ಈ ವಿಷಯಗಳ ಕುರಿತಾಗಿ ಇರುವ ಪೂರ್ವಗ್ರಹಗಳ ಬಗ್ಗೆ ಸಾಮಾಜಿಕ ಜಾಗೃತಿ ಮೂಡಿಸುವುದು, ಎಲ್ಲರಂತೆ ಅವರಿಗೂ ಬದುಕುವ ಹಕ್ಕಿದೆ ಎಂಬ ತಿಳಿವು ಮೂಡಿಸುವ ಘನ ಉದ್ದೇಶ ಇದರದ್ದು.

ಆದರೆ ಹೇಗೆ?

ಇವನ್ನೆಲ್ಲ ಹೇಳುವುದು ಸರಿಯೆ, ಆದರೆ ಆಚರಣೆಗೆ ತರುವ ಮಾರ್ಗಗಳುಂಟೇ? ಕೇವಲ ಸರಕಾರಿ ಪ್ರಾಯೋಜಿತ ಆಚರಣೆಯಾಗಿ, ಒಂದಿಷ್ಟು ವಿಚಾರ ಸಂಕಿರಣಗಳು, ಜಾಗೃತಿ ಕಾರ್ಯಕ್ರಮಗಳ ಘೋಷಣೆಯಾಗಿ ಉಳಿಯದೆ ಎಲ್ಲರೂ ಇದರ ಭಾಗವಾಗಿ ಮುಂದುವರಿಯುವುದು ಹೇಗೆ? ಬದಲಾವಣೆ ಮೊದಲು ಬರಬೇಕಾದ್ದು ವ್ಯಕ್ತಿಗತ ಮಟ್ಟದಿಂದ. ಹಾಗಾಗಿ ಮೊದಲು ಅರಿವಿನ ಬೀಜ ಮೊಳೆಯಬೇಕಾದ್ದು ನಮ್ಮೆಲ್ಲರ ಎದೆಗಳಲ್ಲಿ. ಏನು ಹಾಗೆಂದರೆ?

ಆಯ್ಕೆಯ ಸ್ವಾತಂತ್ರ್ಯ

ಕೆಲವು ತಳ ಮಟ್ಟದ ಬದಲಾವಣೆಗಳು ಸಮಾಜದ ಅಸಮಾನತೆಯ ಅಡಿಪಾಯವನ್ನು ಅಲ್ಲಾಡಿಸಬಲ್ಲವು. ಉದಾ, ನಂನಮ್ಮ ಬದುಕಿನಲ್ಲಿರುವ ಮಹಿಳೆಯರಿಗೆ ಆಯ್ಕೆಯ ಸ್ವಾತಂತ್ರ್ಯವನ್ನು ಖಾತ್ರಿ ಪಡಿಸುವುದು. ಅವರ ಶಿಕ್ಷಣ, ಅವರ ಉದ್ಯೋಗ, ಅವರ ವಿವಾಹ, ಅವರ ವಸ್ತ್ರ- ಮುಂತಾದವು ಅವರವರ ಆಯ್ಕೆಗೆ ಬಿಟ್ಟಿದ್ದು. ಇವೆಲ್ಲವೂ ಸಮಾಜದ ಕಣ್ಗಾವಲಿನಲ್ಲಿ ನಡೆಯುವುದು ಸಲ್ಲದು.

ಅವಕಾಶಗಳಲ್ಲಿ ಸಮಾನತೆ

ಮನೆಯ ಎಲ್ಲ ಮಕ್ಕಳಿಗೂ ಸಮಾನ ಅವಕಾಶಗಳನ್ನು ಕೊಡಮಾಡುವುದು. ತಿನ್ನುವ ಆಹಾರ, ಪೋಷಣೆಯಿಂದ ಹಿಡಿದು ಶಿಕ್ಷಣ, ಉದ್ಯೋಗದವರೆಗೆ ಇರುವ ಅವಕಾಶಗಳನ್ನು ಮನೆಯ ಮಕ್ಕಳಿಗೆಲ್ಲ ಸಮಾನವಾಗಿ ಹಂಚಿಕೆ ಮಾಡುವುದು ಈ ನಿಟ್ಟಿನಲ್ಲಿ ಅತಿ ಮುಖ್ಯ. ಶಾಲೆಯ ಡ್ರಾಪ್‌ ಔಟ್‌ ಪ್ರಕರಣಗಳಲ್ಲಿ ಹೆಣ್ಣು ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಈ ಕುರಿತಾಗಿ ಬಹಳಷ್ಟನ್ನು ಹೇಳುತ್ತವೆ.

ನೈತಿಕತೆ ಹೇರಿಕೆ

ದೇಶದ ಕಾನೂನುಗಳಂತೆ, ಸಾಮಾಜಿಕ ಕಟ್ಟಳೆಗಳು ಸಹ ಎಲ್ಲರಿಗೂ ಸಮಾನವಾಗಿರಬೇಕು. ಉದಾ, ಹೊತ್ತು ಗೊತ್ತಿಲ್ಲದೆ ಅಲೆಯುವಂತಿಲ್ಲ ಎಂಬ ನಿಯಮ ಎಲ್ಲರಿಗೂ ಸಲ್ಲುವಂಥದ್ದು, ಕೇವಲ ಹೆಣ್ಣು ಮಕ್ಕಳಿಗಲ್ಲ. ದಿರಸು ಧರಿಸುವಾಗಿನ ಸಭ್ಯತೆ ಎಲ್ಲರಿಗೂ ಸಲ್ಲುವಂಥದ್ದು, ಕೇವಲ ಒಂದು ಲಿಂಗಕ್ಕಲ್ಲ. ಮಕ್ಕಳ ಪೋಷಣೆಗೆ ಸಮಾನವಾಗಿ ಹೆಗಲು ಕೊಡಬೇಕಾದ್ದು ಹೆತ್ತವರಿಬ್ಬರೂ, ತಾಯಿಗೆ ಸಿಂಹಪಾಲಲ್ಲ.
ಇಂಥ ಬಹಳಷ್ಟು ವಿಷಯಗಳಲ್ಲಿ ಸವಾಲುಗಳು ಇವತ್ತಿಗೂ ಹೆಣ್ಣು ಮಕ್ಕಳ ಎದುರಿಗಿವೆ. ಅಂದಮಾತ್ರಕ್ಕೆ, ಎಲ್ಲವೂ ಮುಗಿಯಿತೆಂದು ಅರ್ಥವಲ್ಲ. ಬದಲಾವಣೆ ಕ್ರಮೇಣ ಬರುವುದೆಂಬ ನಿರೀಕ್ಷೆ ಜೀವಂತವಿರುವುದಕ್ಕೆ ಇಂಥ ಜಾಗೃತಿ ಕಾರ್ಯಕ್ರಮಗಳು ಮುಖ್ಯವಾಗುತ್ತವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅರಿವಿನ ಕಾರ್ಯಕ್ರಮಗಳು ಮುನ್ನೆಲೆಗೆ ಬಂದಿವೆ.

ಇದನ್ನೂ ಓದಿ: Food Beneficial For Eye Health: ಕಣ್ಣಿನ ಆರೋಗ್ಯಕ್ಕೆ ಯಾವ ಆಹಾರಗಳು ಬೇಕು?

Exit mobile version