Site icon Vistara News

National Herald case: ಸೋನಿಯಾ, ರಾಹುಲ್‌ಗೆ ಇ.ಡಿ ಸಮನ್ಸ್‌, ಪ್ರತೀಕಾರದ ಕ್ರಮ ಎಂದ ಕಾಂಗ್ರೆಸ್‌

National herald case

ನವ ದೆಹಲಿ: ಬಹುಕಾಲದಿಂದ ಕಾಂಗ್ರೆಸ್‌ ಪಕ್ಷದ ಬೆನ್ನು ಬಿದ್ದಿರುವ ನ್ಯಾಷನಲ್‌ ಹೆರಾಲ್ಡ್‌ ಹಗರಣ (National Herald case) ಈಗ ಪಕ್ಷದ ಪ್ರಮುಖ ನಾಯಕರನ್ನು ಬಲವಾಗಿ ಬಿಗಿಯುವಂತೆ ಕಾಣುತ್ತಿದೆ. ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಮಾಲೀಕತ್ವವನ್ನು ಹೊಂದಿರುವ, ಕಾಂಗ್ರೆಸ್‌ ಪಕ್ಷದ ಪೋಷಕತ್ವದಲ್ಲಿ ಮುನ್ನಡೆಯುತ್ತಿರುವ ಯಂಗ್‌ ಇಂಡಿಯಾ ಸಂಸ್ಥೆಯಲ್ಲಿ ನಡೆದಿರುವ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿ ತನಿಖೆಗಾಗಿ ದಾಖಲಿಸಿಕೊಂಡಿರುವ ಪ್ರಕರಣದ ಸಂಬಂಧ ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರಿಗೆ ಅನುಷ್ಠಾನ ನಿರ್ದೇಶನಾಲಯ ಸಮನ್ಸ್‌ ನೀಡಿದೆ. ಇದು ಭಾರಿ ಚರ್ಚೆಯನ್ನು ಹುಟ್ಟು ಹಾಕಿದ್ದು, ಕಾಂಗ್ರೆಸ್‌ ಇದೊಂದು ದ್ವೇಷದ ರಾಜಕಾರಣ ಎಂದು ಆರೋಪಿಸಿದೆ.

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಜೂನ್‌ 8ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದ್ದರೆ, ರಾಹುಲ್‌ ಗಾಂಧಿ ಅವರು ಜೂನ್‌ 2ರಂದೇ ಹಾಜರಾಗಬೇಕಾಗಿದೆ. ಆದರೆ, ರಾಹುಲ್‌ ಇದೀಗ ವಿದೇಶದಲ್ಲಿರುವುದರಿಂದ ಹೆಚ್ಚುವರಿ ಸಮಯಾವಕಾಶವನ್ನು ಕೇಳಲಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಅಭಿಷೇಕ್‌ ಮನು ಸಿಂಘ್ವಿ ಹೇಳಿದ್ದಾರೆ. ಸೋನಿಯಾ ಗಾಂಧಿ ಅವರು ನಿಗದಿತ ದಿನಾಂಕದಂದು ಇ.ಡಿ ಮುಂದೆ ಹಾಜರಾಗಲಿದ್ದಾರೆ ಎಂದು ಸಿಂಘ್ವಿ ತಿಳಿಸಿದ್ದಾರೆ.

ಯಂಗ್‌ ಇಂಡಿಯನ್‌ ಸಂಸ್ಥೆಯಲ್ಲಿ ಹಣಕಾಸು ಅವ್ಯವಹಾರ ನಡೆದಿದೆ ಎಂಬುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಇ.ಡಿ ಹಣಕಾಸು ಲೇವಾದೇವಿ ತಡೆ ಕಾಯಿದೆ (ಪಿಎಂಎಲ್‌ಎ)ಯಡಿ ಹೇಳಿಕೆಗಳನ್ನು ದಾಖಲಿಸಿಕೊಳ್ಳುವುದಕ್ಕಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರಿಗೆ ಸಮನ್ಸ್‌ ನೀಡಿದ್ದಾಗಿ ಹೇಳಲಾಗಿದೆ. ಇದೇ ಪ್ರಕರಣವನ್ನು ಹಿನ್ನೆಲೆಯಾಗಿಟ್ಟುಕೊಂಡು ಇ.ಡಿ. ಇತ್ತೀಚೆಗಷ್ಟೇ ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಪವನ್‌ ಬನ್ಸಾಲ್‌ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.

ಖರ್ಗೆ ಮತ್ತು ಬನ್ಸಾಲ್‌ ಅವರ ವಿಚಾರಣೆಯ ಬಳಿಕ ಹೇಳಿಕೆಯೊಂದನ್ನು ನೀಡಿದ್ದ ಲೋಕಸಭೆಯ ಕಾಂಗ್ರೆಸ್‌ ವಿಪ್‌ ಅಗಿರುವ ಮಾಣಿಕಂ ಠಾಗೋರ್‌ ಅವರು ಸರಕಾರ ತನಗೆ ಕಿರುಕುಳ ನೀಡುತ್ತಿದೆ ಎಂದು ಹೇಳಿದ್ದರು.

ದ್ವೇಷ ರಾಜಕಾರಣ ಎಂದ ಸುರ್ಜೇವಾಲಾ
ಈ ನಡುವೆ ಬುಧವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್‌ ನಾಯಕರಾದ ರಣದೀಪ್‌ ಸಿಂಗ್‌ ಸುರ್ಜೇವಾಲಾ ಮತ್ತು ಅಭಿಷೇಕ್‌ ಮನು ಸಿಂಘ್ವಿ, ಇದು ಬಿಜೆಪಿಯ ಹಗೆತನ ಮತ್ತು ದ್ವೇಷದ ರಾಜಕಾರಣ. ದೇಶದ ಬೇರೆ ವಿರೋಧಿಗಳಿಗೆ ಮಾಡಿದಂತೆ ಇದೀಗ ಪ್ರತಿಪಕ್ಷದ ನಾಯಕರನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂದಿದ್ದಾರೆ.

ಹಣ ಲೇವಾದೇವಿಯೇ ನಡೆಯದ ಪ್ರಕರಣದಲ್ಲಿ ಇಲ್ಲದ ಕೇಸನ್ನು ದಾಖಲಿಸಿಕೊಳ್ಳಲಾಗಿದೆ. ಈ ಪ್ರಕರಣ 2015ರಲ್ಲೇ ಮುಕ್ತಾಯ ಕಂಡಿದೆ. ಆದರೆ, ಈಗ ಅಪಮಾನ ಮಾಡುವುದಕ್ಕಾಗಿಯೇ ದುರುದ್ದೇಶದಿಂದ ಕೇಸು ದಾಖಲಿಸಿ ವಿಚಾರಣೆಗೆ ಸಮನ್ಸ್‌ ನೀಡಲಾಗಿದೆ ಎಂದು ಕಾಂಗ್ರೆಸ್‌ ಹೇಳಿದೆ.

ʻʻಬಿಜೆಪಿಯ ಯಾರೊಬ್ಬರೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಅನುಭವ ಹೊಂದಿಲ್ಲ. ಈಗ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯನ್ನು ಮುಂದಿಟ್ಟುಕೊಂಡು ಆಗಾಗ ಟಾರ್ಗೆಟ್‌ ಮಾಡುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡುತ್ತಿದೆ,ʼʼ ಎಂದಿರುವ ಸುರ್ಜೇವಾಲಾ, ನ್ಯಾಷನಲ್‌ ಹೆರಾಲ್ಡ್‌ ಸ್ಥಾಪನೆಯಾಗಿರುವುದು 1942ರಲ್ಲಿ. ಆಗ ಬ್ರಿಟಿಷ್‌ ಆಡಳಿತ ಅದನ್ನು ದಮನಿಸಲು ಯತ್ನಿಸಿತು. ಈಗ ಮೋದಿ ಸರಕಾರ ಜಾರಿ ನಿರ್ದೇಶನಾಲಯವನ್ನು ಬಳಸಿಕೊಂಡು ಅದೇ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು.

ಏನಿದು ನ್ಯಾಷನಲ್‌ ಹೆರಾಲ್ಡ್‌?
ನ್ಯಾಷನಲ್‌ ಹೆರಾಲ್ಡ್‌ ಎನ್ನುವುದು 1938ರಲ್ಲಿ ಜವಾಹರ ಲಾಲ್‌ ನೆಹರು ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರು ಸೇರಿ ಕಟ್ಟಿದ ಪತ್ರಿಕೆ. ಇದನ್ನು ಕಾಂಗ್ರೆಸ್‌ನ ಉದಾರವಾದಿ ನಾಯಕರ ಧೋರಣೆಗಳನ್ನು ಪ್ರಚಾರ ಮಾಡಲು ಬಳಸಲಾಗುತ್ತಿತ್ತು. ಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ (ಎಜೆಎಲ್‌) ಸಂಸ್ಥೆ ಪ್ರಕಟಿಸುತ್ತಿದ್ದ ಈ ಪತ್ರಿಕೆ ಸ್ವಾತಂತ್ರ್ಯೋತ್ತರದಲ್ಲಿ ಕಾಂಗ್ರೆಸ್‌ನ ಮುಖವಾಣಿಯಾಯಿತು. ಇದೇ ಪ್ರಕಾಶನದಡಿಯಲ್ಲಿ ಎಜೆಎಲ್‌ ಹಿಂದಿ ಮತ್ತು ಉರ್ದು ಆವೃತ್ತಿಗಳನ್ನು ಕೂಡಾ ಆರಂಭಿಸಿತು. ಆದರೆ, ಪತ್ರಿಕೆ ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪಲೇ ಇಲ್ಲ. ಹೀಗಾಗಿ 2008ರಲ್ಲಿ ಅದನ್ನು ಮುಚ್ಚಲಾಯಿತು. ಆಗ ಅದು 90 ಕೋಟಿ ರೂ. ನಷ್ಟದಲ್ಲಿತ್ತು.

ಏನಿದು ಹಗರಣ?

2011ರಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಯಂಗ್ ಇಂಡಿಯಾ ಲಿ.(ವೈಐಎಲ್) ಎಂಬ ಕಂಪನಿಯನ್ನು ಆರಂಭಿಸಿ ಸಾಲದ ಸುಳಿಗೆ ಸಿಲುಕಿದ್ದ ಎಜೆಎಲ್ ಅನ್ನು 90.21 ಕೋಟಿ ರೂ.ಗೆ ಖರೀದಿಸುತ್ತಾರೆ. ಆದರೆ, ವೈಐಎಲ್‌ಗೆ 50 ಲಕ್ಷ ರೂ. ಅನ್ನು ಕಾಂಗ್ರೆಸ್ ಖಜಾನೆಯಿಂದ ವರ್ಗಾವಣೆ ಮಾಡಲಾಗಿರುತ್ತದೆ. ದೆಹಲಿಯ 5ಎ ಬಹುದ್ದೂರ್ ಷಾ ಜಾಫರ್ ಮಾರ್ಗದಲ್ಲಿರುವ ಹೆರಾಲ್ಡ್ ಹೌಸ್ ನವೀಕರಣಕ್ಕೆ ಒಂದು ಕೋಟಿ ರೂ. ಸಾಲವನ್ನು ವೈಐಎಲ್ ನೀಡುತ್ತದೆ. ಎಜೆಎಲ್ ಹೊಂದಿದ ಅನೇಕ ಆಸ್ತಿಗಳ ಪೈಕಿ ಹೆರಾಲ್ಡ್ ಹೌಸ್ ಕೂಡ ಒಂದು. ಎಜೆಎಲ್‌ನ ಒಟ್ಟು ಆಸ್ತಿಗಳ ಮೌಲ್ಯ ಅಂದಾಜು 1600 ಕೋಟಿ ರೂ.ನಿಂದ 5,000 ಕೋಟಿ ರೂ.ವರೆಗೂ ಇದೆ. ಇಷ್ಟೊಂದು ದೊಡ್ಡ ಪ್ರಮಾಣದ ಆಸ್ತಿಯನ್ನು ಕಬಳಿಸುವುದಕ್ಕಾಗಿ ಕಾಂಗ್ರೆಸ್‌ ನಾಯಕರು ಸಂಚು ನಡೆಸಿದ್ದಾರೆ ಎಂದು 2012ರಲ್ಲಿ ಬಿಜೆಪಿಯ ಮಾಜಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಆರೋಪಿಸಿ ದಿಲ್ಲಿ ಕೋರ್ಟ್‌ನಲ್ಲಿ ದಾವೆ ಸಲ್ಲಿಸಿದ್ದರು. ಅದರ ಮುಂದುವರಿದ ಭಾಗವಾಗಿ ಈಗ ಇ.ಡಿ. ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ | ಕಾಂಗ್ರೆಸ್‌ ತೊರೆದ ಬ್ರಿಜೇಶ್‌ ಕಾಳಪ್ಪ, ಸೋನಿಯಾ ಗಾಂಧಿಗೆ ರಾಜೀನಾಮೆ ಸಲ್ಲಿಕೆ

Exit mobile version