Site icon Vistara News

National herald case: ಜುಲೈ 21ರಂದು ಹಾಜರಾಗಲು ಸೋನಿಯಾ ಗಾಂಧಿಗೆ ಇ.ಡಿ ಹೊಸ ಸಮನ್ಸ್‌

Sonia gandhi

ನವ ದೆಹಲಿ: ನ್ಯಾಷನಲ್‌ ಹೆರಾಲ್ಡ್‌ ಹಗರಣಕ್ಕೆ ಸಂಬಂಧಿಸಿ ಜುಲೈ ೨೧ರಂದು ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಹೊಸ ಸಮನ್ಸ್‌ ಜಾರಿಗೊಳಿಸಿದೆ.
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಸೋನಿಯಾ ಗಾಂಧಿ ವಿಚಾರಣೆಗೆ ಮೊದಲು ಜೂ.8 ದಿನಾಂಕ ನಿಗದಿಯಾಗಿತ್ತು. ಆದರೆ ಜೂ. 2ರಂದು ಅವರಲ್ಲಿ ಕೊರೊನಾ ದೃಢಪಟ್ಟಿತ್ತು. ಹೀಗಾಗಿ ಅದನ್ನು ಮುಂದೂಡಲಾಗಿತ್ತು. ಬಳಿಕ ಮತ್ತೆ ಜೂ.23ಕ್ಕೆ ದಿನಾಂಕ ನಿಗದಿಯಾಯಿತು. ಆದರೆ ಸೋನಿಯಾ ಗಾಂಧಿ ಶ್ವಾಸಕೋಶದ ಸೋಂಕಿನಿಂದ ಜೂ.12ಕ್ಕೆ ಆಸ್ಪತ್ರೆಗೆ ದಾಖಲಾಗಿ ಜೂನ್‌ ೨೦ರಂದು ಬಿಡುಗಡೆಯಾಗಿದ್ದರು. ಅವರಿಗೆ ಕಟ್ಟುನಿಟ್ಟಿನ ವಿಶ್ರಾಂತಿ ಅಗತ್ಯವೆಂದು ವೈದ್ಯರು ಹೇಳಿದ್ದರು. ಹೀಗಾಗಿ ಅವರು ಇ.ಡಿ ಮುಂದೆ ವಿಚಾರಣೆಗೆ ಹೊಸ ದಿನಾಂಕ ನೀಡುವಂತೆ ಕೋರಿದ್ದರು. ಆಗ ಇ.ಡಿ ಜುಲೈ ಅಂತ್ಯದೊಳಗೆ ಯಾವುದೇ ದಿನ ಬಂದು ಹೇಳಿಕೆ ನೀಡಬಹುದು ಎಂದು ಹೇಳಿತ್ತು. ಈಗ ಜುಲೈ ೨೧ರಂದು ಬರುವಂತೆ ನೋಟಿಸ್‌ ನೀಡಿದೆ.

ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಲ್ಲಿ ಇ.ಡಿ ಈಗಾಗಲೇ ಕಾಂಗ್ರೆಸ್‌ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಪವನ್‌ ಬನ್ಸಾಲ್‌ ಅವರನ್ನು ಕಳೆದ ಏಪ್ರಿಲ್‌ ತಿಂಗಳಲ್ಲಿ ವಿಚಾರಣೆಗೆ ಒಳಪಡಿಸಿತ್ತು. ಅದಾದ ಬಳಿಕ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರಿಗೆ ನೋಟಿಸ್‌ ನೀಡಿತ್ತು. ರಾಹುಲ್‌ ಗಾಂಧಿ ಅವರು ಜೂನ್‌ ತಿಂಗಳಲ್ಲಿ ಸುಮಾರು ಐದು ದಿನಗಳ ಕಾಲ ವಿಚಾರಣೆ ಎದುರಿಸಿದ್ದರು. ಸುಮಾರು ೫೪ ಗಂಟೆಗಳ ಕಾಲ ಇ.ಡಿ ಕಚೇರಿಯಲ್ಲಿ ಕಳೆದಿದ್ದರು. ಈಗ ೭೫ ವರ್ಷದ ಸೋನಿಯಾ ಗಾಂಧಿ ಅವರ ವಿಚಾರಣೆ ನಡೆಯಲಿದೆ.

ಯಾಕೆ ಸೋನಿಯಾಗೆ ಸಮನ್ಸ್‌?
ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಮಾಲೀಕತ್ವ ಹೊಂದಿರುವ ಕಾಂಗ್ರೆಸ್‌ ಪ್ರಾಯೋಜಿತ ಯಂಗ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ನಲ್ಲಿ ನಡೆದಿರುವ ಹಣಕಾಸು ಅವ್ಯವಹಾರಗಳಿಗೆ ಸಂಬಂಧಿಸಿ ಬಿಜೆಪಿ ನಾಯಕ ಸುಬ್ರಮಣ್ಯನ್‌ ಸ್ವಾಮಿ ಅವರು ಸಲ್ಲಿಸಿದ ದೂರಿನ ಅನ್ವಯ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಅಸೋಸಿಯೇಟೆಡ್‌ ಜರ್ನಲ್ಸ್‌ ಲಿಮಿಟೆಡ್‌ ಕಾಂಗ್ರೆಸ್‌ಗೆ ೯೦.೨೫ ಕೋಟಿ ರೂ. ಸಾಲ ರೂಪದಲ್ಲಿ ಕೊಡಬೇಕಾಗಿತ್ತು. ಆದರೆ, ಕಾಂಗ್ರೆಸ್‌ಗೆ ಸೇರಿದ ಯಂಗ್‌ ಇಂಡಿಯಾ ಸಂಸ್ಥೆ ಕೇವಲ ೫೦ ಲಕ್ಷ ರೂ. ಕೊಟ್ಟು ಇಡೀ ಸಂಸ್ಥೆಯನ್ನು ಖರೀದಿ ಮಾಡಿತ್ತು. ಅಂದರೆ, ೨೦೦೦ ಕೋಟಿ ರೂ. ಆಸ್ತಿ ಇರುವ ಸಂಸ್ಥೆ ಕೇವಲ ೫೦ ಲಕ್ಷ ರೂ.ಗೆ ಕಾಂಗ್ರೆಸ್‌ ಪಾಲಾಗಿತ್ತು. ಇದರಲ್ಲಿ ಹೆಚ್ಚಿನ ಪಾಲನ್ನು ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರೇ ಹೊಂದಿದ್ದಾರೆ. ಇದು ದೊಡ್ಡ ಮಟ್ಟದ ಅಕ್ರಮ ವ್ಯವಹಾರ ಎನ್ನುವುದು ಸ್ವಾಮಿ ಆರೋಪ. ಈ ಬಗ್ಗೆ ಈಗ ನಾನಾ ಹಂತಗಳಲ್ಲಿ ತನಿಖೆ, ವಿಚಾರಣೆ ನಡೆಯುತ್ತಿದೆ.

ಇದನ್ನೂ ಓದಿ| National Herald: ರಾಹುಲ್‌ ಗಾಂಧಿಗೆ ಇ.ಡಿ ಫುಲ್ ಗ್ರಿಲ್‌;‌ ದೇಶಾದ್ಯಂತ ಕೈ ಪ್ರತಿಭಟನೆಯ ಸವಾಲ್‌

Exit mobile version