ನವದೆಹಲಿ: ಅಧಿಕ ಸೇವಾ ಶುಲ್ಕ ವಿಧಿಸಿದ್ದನ್ನು ವಿರೋಧಿಸಿದ್ದಕ್ಕೇ ಭಾರತದ ಕಂಪನಿಗಳ (Indian Companies) ಹಲವು ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ (Play Store) ತೆಗೆದುಹಾಕಿದ್ದ ಗೂಗಲ್ ಈಗ ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯಿಂದಾಗಿ ಮಣಿದಿದೆ. ಮ್ಯಾಟ್ರಿಮೋನಿ, ನೌಕ್ರಿ.ಕಾಮ್ ಸೇರಿ ಭಾರತದ ಹಲವು ಆ್ಯಪ್‌ಗಳನ್ನು ಗೂಗಲ್ ರಿಸ್ಟೋರ್ ಮಾಡಿದೆ. ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಅವರು ಮಧ್ಯಸ್ಥಿಕೆ ವಹಿಸಿ, ಸೋಮವಾರ ಗೂಗಲ್ ಪ್ರತಿನಿಧಿಗಳ ಸಭೆ ಕರೆದಿದ್ದರು. ಆದರೆ, ಸಭೆಗೂ ಮುನ್ನವೇ ಆ್ಯಪ್‌ಗಳನ್ನು ಗೂಗಲ್ ರಿಸ್ಟೋರ್ ಮಾಡಿದೆ ಎಂದು ತಿಳಿದುಬಂದಿದೆ.
“ಭಾರತವು ಭಾರಿ ಬೆಳವಣಿಗೆ ಹೊಂದಿರುವ ಸ್ಟಾರ್ಟಪ್‌ಗಳ ಎಕೋಸಿಸ್ಟಮ್ ಹೊಂದಿದೆ. ಹಾಗಾಗಿ, ಭಾರತೀಯ ಕಂಪನಿಗಳ ಹಿತ ಕಾಪಾಡುವುದು ಮುಖ್ಯವಾಗಿದೆ. ಇದೇ ದಿಸೆಯಲ್ಲಿ, ಸೋಮವಾರ ಗೂಗಲ್ ಕಂಪನಿಯ ಪ್ರತಿನಿಧಿಗಳೊಂದಿಗೆ ಸಭೆ ಕರೆಯಲಾಗಿದೆ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಸಭೆಯ ಉದ್ದೇಶವಾಗಿದೆ” ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದರು. ಹಾಗೆಯೇ, ಗೂಗಲ್ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಈಗ ಸಭೆಗೂ ಮುನ್ನವೇ ಗೂಗಲ್ ರಿಸ್ಟೋರ್ ಮಾಡಿದೆ.
BREAKING: Google to restore Indian apps on Play Store after intervention from IT minister @AshwiniVaishnaw. https://t.co/rgSPuZlDys
— Vikrant Singh (@VikrantThardak) March 2, 2024
ಗೂಗಲ್ ತೆಗೆದುಹಾಕಿದ್ದ ಆ್ಯಪ್‌ಗಳಿವು
- ಭಾರತ್ ಮ್ಯಾಟ್ರಿಮೋನಿ- ಡೇಟಿಂಗ್, ವಧು-ವರರ ವೇದಿಕೆ
- ಟ್ರೂಲಿ ಮ್ಯಾಡ್ಲಿ- ಡೇಟಿಂಗ್
- ಕ್ವ್ಯಾಕ್ ಕ್ವ್ಯಾಕ್ – ಡೇಟಿಂಗ್ ಸೈಟ್
- ಸ್ಟೇಜ್- ಒಟಿಟಿ ಪ್ಲಾಟ್‌ಫಾರ್ಮ್
- ಕುಕು ಎಫ್‌ಎಂ- ಒಟಿಟಿ ಪಾಡ್‌ಕಾಸ್ಟ್
- ಜೀವನ್‌ಸಾಥಿ.ಕಾಮ್- ಡೇಟಿಂಗ್, ಮ್ಯಾಚ್ ಮೇಕಿಂಗ್
- 99 ಎಕರ್ಸ್- ಪ್ರಾಪರ್ಟಿ ಟ್ರೇಡಿಂಗ್
- ನೌಕ್ರಿ.ಕಾಮ್- ಉದ್ಯೋಗ ನೇಮಕಾತಿ
ಏನಿದು ಪ್ರಕರಣ?
ಗೂಗಲ್ ಸಂಸ್ಥೆಯು ಇತ್ತೀಚೆಗೆ ಆ್ಯಪ್‌ಗಳಿಗೆ ಶೇ.11ರಿಂದ ಶೇ.26ರಷ್ಟು ಸೇವಾ ಶುಲ್ಕವನ್ನು ವಿಧಿಸಲು ಮುಂದಾಗಿದ್ದು, ಇದನ್ನು ಭಾರತದ ಕಂಪನಿಗಳು ವಿರೋಧಿಸಿದ್ದವು. ಇದರಿಂದ ಕುಪಿತಗೊಂಡಿದ್ದ ಗೂಗಲ್ ಸಂಸ್ಥೆಯು ಭಾರತದ ಕಂಪನಿಗಳ ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ತೆಗೆದುಹಾಕಿತ್ತು. ಇದು ಈಗ ಹೊಸ ವಿವಾದಕ್ಕೆ ಕಾರಣವಾಗಿದ್ದು, ಕೇಂದ್ರ ಸರ್ಕಾರವು ಮಧ್ಯಸ್ಥಿಕೆ ಮೂಲಕ ಸಮಸ್ಯೆ ಬಗೆಹರಿಸಲು ಮುಂದಡಿ ಇಟ್ಟಿತ್ತು. ಈಗ ಮಧ್ಯಸ್ಥಿಕೆಯು ಫಲಪ್ರದವಾಗಿದ್ದು, ಭಾರತದ ಕಂಪನಿಗಳು ನಿಟ್ಟುಸಿರು ಬಿಟ್ಟಿವೆ.
ಇದನ್ನೂ ಓದಿ: Matrimony Apps: ಮ್ಯಾಟ್ರಿಮೋನಿ ಆ್ಯಪ್ ಇನ್ನಿಲ್ಲ; ಆನ್‌ಲೈನ್‌ನಲ್ಲಿ ಇನ್ನು ಸಂಗಾತಿ ಸಿಗಲ್ಲ!
ಗೂಗಲ್ ಕ್ರಮವನ್ನು ಕಂಪನಿಗಳು ಖಂಡಿಸಿದ್ದವು. “ನಿಯಮಗಳ ಉಲ್ಲಂಘನೆಯಾಗಿದೆ ಎಂದು ಗೂಗಲ್ ಕಂಪನಿಯು ನೋಟಿಸ್ ನೀಡುತ್ತಿದೆ. ಮ್ಯಾಟ್ರಿಮೋನಿ ಸರಣಿಯ ಒಂದೊಂದೇ ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ಡಿಲೀಟ್ ಮಾಡಲಾಗುತ್ತಿದೆ. ಭಾರತದ ಇಂಟರ್‌ನೆಟ್ ಕ್ಷೇತ್ರದಲ್ಲಿ ಇದೊಂದು ಕರಾಳ ದಿನ” ಎಂದು ಮ್ಯಾಟ್ರಿಮೋನಿ ಸಂಸ್ಥಾಪಕ ಮುರುಗಾವೇಲ್ ಜಾನಕಿರಾಮ್ ಅವರು ಬೇಸರ ವ್ಯಕ್ತಪಡಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ