ಪಂಜಾಬ್: ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಸೆರೆಮನೆಯಿಂದ ಈಗ ಆಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ. ಲಿವರ್ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿರುವ ಅವರನ್ನು ಚಂಡೀಗಢದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಪಾಸಣೆ ಬಳಿಕ ಸಿಧು ಕ್ಷೇಮವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
1988ರಲ್ಲಿ ಸಿಧು ಮತ್ತು ಅವರ ಸಹಚರನೊಬ್ಬ ಸೇರಿ ಪಟಿಯಾಲಾದ ಪಾರ್ಕಿಂಗ್ ಸ್ಥಳದಲ್ಲಿ 65 ವರ್ಷದ ಗುರ್ನಾಮ್ ಸಿಂಗ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದರು. ಅಂದು ಸಿಧು ಅತಿರೇಕವಾಗಿ ವರ್ತಿಸಿ, ಗುರ್ನಾಮ್ ತಲೆಗೆ ಏಟು ಹೊಡೆದಿದ್ದರು. ಗುರ್ನಾಮ್ ಸ್ವಲ್ಪ ದಿನಗಳಲ್ಲೇ ಮೃತಪಟ್ಟಿದ್ದರು. ನಂತರ ಅವರ ಕುಟುಂಬ ನವಜೋತ್ ಸಿಂಗ್ ಸಿಧು ವಿರುದ್ಧ ಕೋರ್ಟ್ ಮೆಟ್ಟಿಲೇರಿತ್ತು. ಈ ಕೇಸ್‌ಗೆ ಸಂಬಂಧಪಟ್ಟಂತೆ ಬರೋಬ್ಬರಿ 34 ವರ್ಷಗಳ ಬಳಿಕ ತೀರ್ಪು ಹೊರಬಿದ್ದು, ಈಗ ಸಿಧು ಜೈಲಿನಲ್ಲಿದ್ದಾರೆ.
ಜೈಲಿನಲ್ಲಿ ಸಿಧು ಅವರಿಗೆ ಅನಾರೋಗ್ಯ ಕಾಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಲಿವರ್ ಸಮಸ್ಯೆ ಎನ್ನುವುದು ಗೊತ್ತಾಯಿತು. 2015ರಲ್ಲೂ ಸಿಧು ಅವರಿಗೆ ಈ ಹಿಂದೆಯೂ ಅವರಿಗೆ ಲಿವರ್ ಸಮಸ್ಯೆ ಕಾಣಿಸಿಕೊಂಡಿದ್ದು ಚಿಕಿತ್ಸೆಗೆ ಒಳಗಾಗಿದ್ದರು.
ಲಿವರ್ ಸಮಸ್ಯೆ ಮುಂದಿಟ್ಟುಕೊಂಡೇ ಸಿಧು ಅವರು ಶರಣಾಗತಿಗೆ ಸಮಯ ಕೋರಿದ್ದರು. ಜತೆಗೆ ಪಥ್ಯಾಹಾರಕ್ಕೆ ಮನವಿ ಮಾಡಿದ್ದರು. ಮತ್ತು ನ್ಯಾಯಾಲಯ ಅವರ ಮನವಿಗೆ ಸ್ಪಂದಿಸಿತ್ತು.