| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ
ಬ್ಲೂ ವಾಟರ್ ಫೋರ್ಸ್ (Blue Water Force) ಅಥವಾ ನೀಲಿ ನೀರಿನ ನೌಕಾಪಡೆ ಎನ್ನುವುದು ಜಗತ್ತಿನ ಅತ್ಯಂತ ಪ್ರಬಲ ನೌಕಾಪಡೆಗಳಲ್ಲಿ ಒಂದಾಗಿದ್ದು, ಅವು ಅತ್ಯಂತ ಆಳವಾದ, ದೂರ ಪ್ರದೇಶಗಳ ಸಾಗರಗಳಲ್ಲಿ ಕಾರ್ಯಾಚರಿಸಬಲ್ಲದು. ಡಿಸೆಂಬರ್ 4ರಂದು ಆಚರಿಸುವ ನೌಕಾಪಡೆಯ (Navy Day) ದಿನದಂದು ಎಲ್ಲಾ ಕಡೆಗಳಲ್ಲೂ “ಭಾರತೀಯ ನೌಕಾಪಡೆ ಅತ್ಯಂತ ಪ್ರಬಲವಾದ ನೀಲಿ ನೀರಿನ ಪಡೆಯಾಗಿದೆ. ಬಿಳಿ ಸಮವಸ್ತ್ರದಲ್ಲಿರುವ ಎಲ್ಲ ಯುವಕ ಯುವತಿಯರಿಗೆ ಶುಭಾಶಯಗಳು” ಎಂದು ಸಂದೇಶ ಕಾಣಿಸುತ್ತದೆ.
ನೀಲಿ ನೀರಿನ ನೌಕಾಪಡೆ
ಒಂದು ನೀಲಿ ನೀರಿನ ನೌಕಾಪಡೆ ಎನ್ನುವುದು ತನ್ನ ಜಲ ಗಡಿಗಳನ್ನು ಮೀರಿ, ದೊಡ್ಡ ಪ್ರದೇಶಗಳಲ್ಲಿ ಕಾರ್ಯಾಚರಿಸುವ ಸಾಮರ್ಥ್ಯ ಹೊಂದಿರುತ್ತದೆ. ಸರಳವಾಗಿ ಹೇಳುವುದಾದರೆ, ನೀಲಿ ಸಮುದ್ರದ ನೌಕಾಪಡೆ ಎನ್ನುವುದು ಜಗತ್ತಿನಾದ್ಯಂತ ಇರುವ ವಿಶಾಲವಾದ, ಆಳವಾದ ಸಮುದ್ರಗಳಿಗೆ ತೆರಳುವ ಸಾಮರ್ಥ್ಯ ಹೊಂದಿರುವ ಪಡೆಯಾಗಿದೆ. ಆದರೆ, ಜಗತ್ತಿನ ಬಹುತೇಕ ಎಲ್ಲ ನೌಕಾಪಡೆಗಳೂ ನೌಕೆಗಳನ್ನು ಕಳುಹಿಸುವ ಸಾಮರ್ಥ್ಯ ಹೊಂದಿವೆಯಾದರೂ, ಬ್ಲೂ ವಾಟರ್ ಫೋರ್ಸ್ ತನ್ನ ಜಲಗಡಿಗಳಿಂದ ಸಾಕಷ್ಟು ದೂರದಲ್ಲೂ ಕಾರ್ಯಾಚರಣೆ ನಡೆಸಲು ಸಮರ್ಥವಾಗಿದೆ. ಈ ನೌಕೆಗಳು ಇಂಧನ ಮರುಪೂರೈಕೆಗೆ, ಆಯುಧ ಮರು ಪೂರೈಕೆಗೆ ತನ್ನ ಗಡಿಗೆ ಮರಳುವ ಅಗತ್ಯತೆ ಇರುವುದಿಲ್ಲ.
ಇಂತಹ ಬ್ಲೂ ವಾಟರ್ ಫೋರ್ಸ್‌ಗಳು ಸಾಮಾನ್ಯವಾಗಿ ಜಗತ್ತಿನ ಅತ್ಯಂತ ಪ್ರಬಲ ರಾಷ್ಟ್ರಗಳ ಬಳಿ ಇರುತ್ತದೆ ಎಂದು ಹೇಳಲಾಗುತ್ತದಾದರೂ, ಬ್ಲೂ ವಾಟರ್ ಫೋರ್ಸ್ ಎನ್ನಲು ಸಾರ್ವತ್ರಿಕವಾಗಿ ಒಪ್ಪಿತವಾದ ವಿವರಣೆ ಎನ್ನುವುದು ಲಭ್ಯವಿಲ್ಲ. ಒಂದು ಅಥವಾ ಒಂದಕ್ಕಿಂತ ಹೆಚ್ಚು ವಿಮಾನವಾಹಕ ನೌಕೆಗಳನ್ನು ಹೊಂದಿರುವುದೂ ಒಂದು ಮಾನದಂಡ ಎನ್ನಬಹುದು.
ಇಂಡಿಯನ್ ಮಾರಿಟೈಮ್ ಡಾಕ್ಟ್ರಿನ್ 2015ರ ಪ್ರಕಾರ, ದೂರ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ನೀಲಿ ನೀರಿನ ನೌಕಾಪಡೆಯನ್ನು ಬ್ರೌನ್ ವಾಟರ್ ಫೋರ್ಸ್‌ನಿಂದ ವಿಭಿನ್ನವಾಗಿಸುತ್ತದೆ. ಬ್ಲೂ ವಾಟರ್ ಫೋರ್ಸ್ ಹೆಚ್ಚಿನ ಸಾಮರ್ಥ್ಯ, ಲಾಜಿಸ್ಟಿಕ್ಸ್, ವಿಚಕ್ಷಣೆ, ಜಾಲಬಂಧ ಕಾರ್ಯಾಚರಣಾ ಸಾಮರ್ಥ್ಯ, ಇತ್ಯಾದಿಗಳನ್ನು ಹೊಂದಿರುತ್ತದೆ. ಅದರೊಡನೆ ಉಪಕರಣ ವಿನ್ಯಾಸ, ತರಬೇತಿ, ಸಿದ್ಧಾಂತ ಮತ್ತು ಸಂಘಟನಾ ಸಾಮರ್ಥ್ಯವನ್ನೂ ಹೊಂದಿರುತ್ತದೆ. ಈ ಡಾಕ್ಟ್ರಿನ್ ದೂರ ಪ್ರದೇಶಗಳ ಕಾರ್ಯಾಚರಣೆಗಳು ಸಾಮಾನ್ಯವಾಗಿ ಪ್ರವೇಶದ ಸಾಧ್ಯತೆ, ಚಲನಶೀಲತೆ, ಸುಸ್ಥಿರತೆಗಳ ಮೇಲೆ ಆಧಾರಿತವಾಗಿದೆ. ಆ ಮೂಲಕ ನೌಕಾಪಡೆ ತನ್ನ ಗುರಿಯ ಪ್ರದೇಶದಲ್ಲಿ ತನ್ನ ಅಸ್ತಿತ್ವ, ಸಾಮರ್ಥ್ಯವನ್ನು ಪ್ರದರ್ಶಿಸಿ, ತಮ್ಮ ರಾಷ್ಟ್ರೀಯ ಗುರಿಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿತ್ತು.
ಭಾರತ ಕೂಡ ಬ್ಲೂ ವಾಟರ್ ಫೋರ್ಸ್
ಭಾರತೀಯ ನೌಕಾಪಡೆಗೆ ತನ್ನ ಗಡಿಪ್ರದೇಶಗಳಿಂದ ಸಾಕಷ್ಟು ದೂರದಲ್ಲಿ ತನ್ನ ನೌಕೆಗಳನ್ನು ಕಳುಹಿಸಿ, ಕಾರ್ಯಾಚರಣೆ ನಡೆಸುವ ಸಾಮರ್ಥ್ಯವಿದೆ. ಆದ್ದರಿಂದ ಭಾರತೀಯ ನೌಕಾಪಡೆಯನ್ನು ಬ್ಲೂ ವಾಟರ್ ಫೋರ್ಸ್ ಎಂದು ಕರೆಯಲು ಸಾಧ್ಯವಾಗುತ್ತದೆ.
ನೌಕಾಪಡೆಗಳನ್ನು ಬಣ್ಣಗಳ ಆಧಾರದಲ್ಲಿ ವಿಂಗಡಿಸಲಾಗುತ್ತದೆ. ಯಾವುದಾದರೂ ನೌಕಾಪಡೆ ತನ್ನ ತೀರ ಪ್ರದೇಶದಲ್ಲಿ, ಮಣ್ಣಿನಂತಹ ನೀರಿನಲ್ಲಿ ಕಾರ್ಯಾಚರಣೆ ಕೈಗೊಳ್ಳುತ್ತದೋ, ಅದನ್ನು ಬ್ರೌನ್ ವಾಟರ್ ಫೋರ್ಸ್ ಎಂದು ಕರೆಯಲಾಗುತ್ತದೆ. ತನ್ನ ತೀರದಿಂದ ಸ್ವಲ್ಪ ದೂರ ತೆರಳಬಲ್ಲ ನೌಕಾಪಡೆಯನ್ನು ಗ್ರೀನ್ ವಾಟರ್ ಫೋರ್ಸ್ ಎನ್ನಲಾಗುತ್ತದೆ. ಇನ್ನು ಎಲ್ಲ ಮಿತಿಗಳನ್ನು ಮೀರಿ, ಬಹುದೂರದಲ್ಲಿ ಕಾರ್ಯಾಚರಿಸಬಲ್ಲ ನೌಕಾಪಡೆಯನ್ನು ಬ್ಲೂ ವಾಟರ್ ಫೋರ್ಸ್ ಎನ್ನಲಾಗುತ್ತದೆ.
ಇದನ್ನೂ ಓದಿ | Navy Day| ಇಂದು ನೌಕಾಪಡೆ ದಿನ; ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ನಡೆಯುತ್ತಿಲ್ಲ ಆಚರಣೆ