Site icon Vistara News

Naxal activities: 6 ಕುಕ್ಕರ್‌ ಬಾಂಬ್‌, IED ಸ್ಫೋಟಕಗಳು ಪತ್ತೆ; ತಪ್ಪಿದ ಭಾರೀ ನಕ್ಸಲ್‌ ಅಟ್ಯಾಕ್‌

Naxal activities

ಮಹಾರಾಷ್ಟ್ರ: ನಕ್ಸಲರು(Naxal activities) ಅಡಗಿಸಿಟ್ಟಿದ್ದ ಕುಕ್ಕರ್‌ ಬಾಂಬ್‌(Cooker Bomb), ಸ್ಫೋಟಕಗಳನ್ನು ಪೊಲೀಸರು ಪತ್ತೆ ಹಚ್ಚಿದ್ದು, ಮಹಾರಾಷ್ಟ್ರ(Maharastra)ದಲ್ಲಿ ನಡೆಯಬೇಕಿದ್ದ ಭಾರೀ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಸ್ಫೋಟಕಗಳು ತುಂಬಿದ್ದ ಆರು ಕುಕ್ಕರ್‌ ಬಾಂಬ್‌, ಸ್ಫೋಟಕಗಳು ಮತ್ತು ಮೂರು ಕ್ಲೇಮೋರ್‌ ಕೊಳವೆಗಳು ಮಹಾರಾಷ್ಟ್ರದ ಗದ್‌ಚಿರೋಳಿಯ ತಿಪಗಡ್‌ ಪ್ರದೇಶದಲ್ಲಿ ದೊರೆತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಯಿಂದಾಗಿ ನಕ್ಸಲರು ಮಹಾರಾಷ್ಟ್ರದಲ್ಲಿ ಐಇಡಿ ಬಾಂಬ್‌ ಸ್ಫೋಟಕ್ಕೆ ರೂಪಿಸಿದ್ದ ಸಂಚು ವಿಫಲಗೊಂಡಿದೆ.

ಘಟನೆ ಬಗ್ಗೆ ಗದ್‌ಚಿರೋಳಿ ಪೊಲೀಸ್‌ ವರಿಷ್ಠಾಧಿಕಾರಿ ನೀಲೋತ್ಪಲ್‌ ಮಾಹಿತಿ ನೀಡಿದ್ದು, ಗುಪ್ತಚರ ಇಲಾಖೆ ನೀಡಿದ ಖಚಿತ ಮಾಹಿತಿ ಆಧಾರದ ಮೇಲೆ ಬಾಂಬ್‌ ಸ್ಕ್ವಾಡ್‌ ಮತ್ತು ಪೊಲೀಸರು ಎರಡು ತಂಡಗಳು ಭಾನುವಾರ ತಿಪಗಡ್‌ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು. ಸ್ಥಳಕ್ಕೆ ತಂಡ ತಲುಪಿದಾಗ ಸ್ಫೋಟಕಗಳು ತುಂಬಿದ್ದ ಆರು ಕುಕ್ಕರ್‌ ಬಾಂಬ್‌, ಸ್ಫೋಟಕಗಳು ಮತ್ತು ಮೂರು ಕ್ಲೇಮೋರ್‌ ಕೊಳವೆಗಳು ಪತ್ತೆಯಾಗಿದ್ದವು. ಅಷ್ಟೇ ಅಲ್ಲದೇ ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ತುಂಬಿಸಿದ್ದ ಗನ್‌ ಪೌಡರ್‌, ಔಷಧಗಳು, ಕಂಬಳಿ ಹೀಗೇ ಹಲವು ವಸ್ತುಗಳು ಪತ್ತೆ ಆಗಿವೆ. ಇನ್ನು ಒಂಬತ್ತು IED ಮತ್ತು ಮೂರು ಕ್ಲೇಮೋರ್‌ ಪೈಪ್‌ಗಳನ್ನು ಸ್ಥಳದಲ್ಲೇ ನಾಶಪಡಿಸಿಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದೊಡ್ಡ ಮಟ್ಟದ ಸ್ಫೋಟ ನಡೆಸಲು ನಕ್ಸಲರು ಸಂಚು ರೂಪಿಸಿದ್ದರು. ಸ್ಫೋಟಕಗಳು ಪತ್ತೆಯಾಗಿರುವ ಹಿನ್ನೆಲೆ ಭದ್ರತೆ ಮತ್ತಷ್ಟು ಬಿಗಿಗೊಳಿಸಲಾಗಿದೆ. ಗದ್‌ಚಿರೋಳಿ-ಚಿಮೂರ್‌ ಲೋಕಸಭಾ ಕ್ಷೇತ್ರದಲ್ಲಿ ಏ.19ರಂದು ಮತದಾನ ನಡೆದಿದ್ದು, ಜೂ.4ರಂದು ಫಲಿತಾಂಶ ಹೊರ ಬೀಳಲಿದೆ.

ಒಂದು ತಿಂಗಳ ಹಿಂದೆ ರಾಜ್ಯದ ಕುಕ್ಕೆ ಸುಬ್ರಹ್ಮಣ್ಯ ಸಮೀಪ ನಕ್ಸಲ್​ ಚಟುವಟಿಕೆ ಹೆಚ್ಚಾಗಿದೆ ಎಂಬುದಾಗಿ ವರದಿಯಾಗಿತ್ತು. ದ.ಕ ಜಿಲ್ಲೆಯ ‌ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಯೊಂದಕ್ಕೆ ಶಂಕಿತ ನಕ್ಸಲರು ಭೇಟಿ ನೀಡಿದ್ದಾರೆ ಎಂಬುದಾಗಿ ಹೇಳಲಾಗಿತ್ತು. ಮೂವರಿದ್ದ ತಂಡ ಐನೆಕಿದು ಗ್ರಾಮದ ಅಶೋಕ್ ಎಂಬವರ ಮನೆಗೆ ಭೇಟಿ ನೀಡಿದ್ದಾರೆ ಎಂಬುದಾಗಿ ವರದಿಯಾಗಿದೆ. ಮನೆಯವರ ಜತೆ ಸುಮಾರು ಒಂದು ತಾಸಿಗೂ ಅಧಿಕ ಕಾಲ ಮಾತುಕತೆ ನಡೆಸಿ ಅವರು ವಾಪಸ್​ ತೆರಳಿದ್ದರು.

ಮಳೆ ಬರುತ್ತಿದ್ದ ವೇಳೆ ಅಶೋಕ್ ಅವರ ಮನೆಗೆ ಬಂದ ಶಂಕಿತ ನಕ್ಸಲರು ಮೊಬೈಲ್ ಚಾರ್ಜ್ ಮಾಡಿ ಅಲ್ಲಿಂದ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಬಂದ ಮೂವರ ಬಳಿಯೂ ಶಸ್ತ್ರಾಸ್ತ್ರಗಳಿದ್ದವು. ದಕ್ಷಿಣ ಕನ್ನಡ- ಕೊಡಗು ಗಡಿ ಭಾಗದ ಕೂಜಿಮಲೆಯ ಎಸ್ಟೇಟ್‌ ಅಂಗಡಿಗೂ ಶಂಕಿತ ನಕ್ಸಲರು ಬಂದಿದ್ದರು. ಅವರೇ ಮತ್ತೆ ಅಶೋಕ್ ಅವರ ಮನೆಗೆ ಬಂದಿದ್ದಾರೆ ಎಂದು ಹೇಳಲಾಗಿತ್ತು.

ಇದನ್ನೂ ಓದಿ:Lok Sabha Election 2024: ಮೊದಲೆರಡು ಗಂಟೆಗಳ ಮತದಾನ ನಿರೀಕ್ಷೆಗಿಂತ ಕಡಿಮೆ, ಇನ್ನೂ ಇಳಿಯುವ ಆತಂಕ; ಎಲ್ಲಿ ಎಷ್ಟು?

ಸುಬ್ರಹ್ಮಣ್ಯ ಭಾಗದಲ್ಲಿ ನಕ್ಸಲ್‌ ನಿಗ್ರಹ ದಳ ನಿರಂತರ ಶೋಧ ಕಾರ್ಯ ನಡೆಸುತ್ತಿತ್ತು. ಆದರೆ ಅವರಿಗೆ ಯಾವುದೇ ಸುಳಿವು ಲಭಿಸಿರಲಿಲ್ಲ. ನಕ್ಸಲರು ಭೇಟಿ ನೀಡಿದ ಪ್ರದೇಶ ಕುಮಾರಪರ್ವತ ಸಾಲಿನ ಪಾಟಿ ಕುಮೇರಿ ದಟ್ಟ ಕಾಡಿಗೆ ಹತ್ತಿರವಿದೆ. ಅಲ್ಲಿಂದ ಒಂದು ದಾರಿ ಸೋಮವಾರಪೇಟೆಗೆ ಹೋಗುತ್ತದೆ ಹಾಗೂ ಇನ್ನೊಂದು ದಾರಿ ಗಾಳಿಬೀಡು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುತ್ತದೆ. ಅದೂ ಅಲ್ಲದೆ, ಸಂಪಾಜೆ ಮೂಲಕ ಕೇರಳದ ಅರಣ್ಯದೊಳಗೆ ಪ್ರವೇಶ ಮಾಡಲು ಅವರಿಗೆ ಅವಕಾಶವಿದೆ.

Exit mobile version