ಚಂಡಿಗಢ: ಹರಿಯಾಣದ ನೂತನ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ (Nayab Singh Saini) ನೇತೃತ್ವದ ಬಿಜೆಪಿ ಸರ್ಕಾರ ಬುಧವಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದುಕೊಂಡಿದೆ. ಶಾಸಕರು ಧ್ವನಿ ಮತ ಚಲಾಯಿಸುವ ಮೂಲಕ ಮತದಾನದಲ್ಲಿ ಪಾಲ್ಗೊಂಡರು. ಸೈನಿ ಅವರಿಗೆ 48 ಶಾಸಕರ ಬೆಂಬಲ ಲಭಿಸಿದೆ. ಎರಡು ಗಂಟೆಗಳ ಸುದೀರ್ಘ ಚರ್ಚೆಯ ನಂತರ ವಿಶ್ವಾಸಮತ ಯಾಚಿಸಲಾಯಿತು.
ಸದನ ಕರೆಯುವುದನ್ನು ಪ್ರತಿಪಕ್ಷ ಕಾಂಗ್ರೆಸ್ ಪ್ರಶ್ನಿಸಿದ ನಂತರ ಹರಿಯಾಣ ವಿಧಾನಸಭೆಯ ವಿಶೇಷ ಅಧಿವೇಶನವು ಬಿರುಸಿನ ಚರ್ಚೆಯೊಂದಿಗೆ ಪ್ರಾರಂಭವಾಯಿತು. ಎಲ್ಲ ಸದಸ್ಯರು ಬರುವವರೆಗೆ ಸದನವನ್ನು ಮುಂದೂಡುವಂತೆ ಪ್ರತಿಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ ಸ್ಪೀಕರ್ ಅವರನ್ನು ಕೋರಿದರು. ಆದರೆ ಕಾಂಗ್ರೆಸ್ ಬೇಡಿಕೆಯನ್ನು ಸ್ಪೀಕರ್ ನಿರಾಕರಿಸಿದರು.
#WATCH | CM Nayab Singh Saini-led Haryana Government wins the Floor Test in the State Assembly. pic.twitter.com/0D78XmtbqQ
— ANI (@ANI) March 13, 2024
ಮಂಗಳವಾರ ತಮ್ಮ ಐವರು ಸಚಿವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಸದನದಲ್ಲಿ ವಿಶ್ವಾಸ ಮತವನ್ನು ಕೋರುವ ನಿರ್ಣಯವನ್ನು ಮಂಡಿಸಿದ್ದರು. ಸೈನಿ ಅವರು ವಿಶ್ವಾಸ ಮತವನ್ನು ಮಂಡಿಸಿದ ನಂತರ, ಸದನದಲ್ಲಿ ಹಾಜರಿದ್ದ ನಾಲ್ವರು ಜನ ನಾಯಕ್ ಜನತಾ ಪಕ್ಷ(JJP)ದ ಶಾಸಕರು ಹೊರ ನಡೆದರು. ದುಶ್ಯಂತ್ ಚೌಟಾಲಾ ನೇತೃತ್ವದ ಜೆಜೆಪಿ ತನ್ನ 10 ಶಾಸಕರಿಗೆ ವಿಶ್ವಾಸಮತ ನಿರ್ಣಯದ ಮತದಾನದಿಂದ ದೂರ ಉಳಿಯುವಂತೆ ವಿಪ್ ಜಾರಿ ಮಾಡಿತ್ತು.
ವಿಶ್ವಾಸ ಮತ ಗೆದ್ದುಕೊಂಡ ಬಳಿಕ ವಿಧಾನಸಭೆ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ನಯಾಬ್ ಸಿಂಗ್ ಸೈನಿ, ʼʼನಾನು ವಿನಮ್ರ ಕುಟುಂಬದ ಹಿನ್ನೆಲೆಯಿಂದ ಬಂದಿದ್ದೇನೆ. ನನ್ನ ಕುಟುಂಬದಲ್ಲಿ ಯಾರೂ ರಾಜಕೀಯದಲ್ಲಿಲ್ಲ. ನಾನು ಬಿಜೆಪಿಯ ಕಾರ್ಯಕರ್ತ. ಇಂದು ನನಗೆ ಅಂತಹ ದೊಡ್ಡ ಅವಕಾಶವನ್ನು ಪಕ್ಷ ನೀಡಿದೆʼʼ ಎಂದು ಹೇಳಿದರು.
2019ರ ಲೋಕಸಭೆ ಚುನಾವಣೆಯಲ್ಲಿ ನಯಾಬ್ ಸಿಂಗ್ ಸೈನಿ ಕುರುಕ್ಷೇತ್ರ ಕ್ಷೇತ್ರದಿಂದ 3.83 ಲಕ್ಷ ಮತಗಳ ಅಂತರದಿಂದ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ನಿರ್ಮಲ್ ಸಿಂಗ್ ಅವರನ್ನು ಸೋಲಿಸಿದ್ದರು. ಅವರನ್ನು ಮನೋಹರ್ ಲಾಲ್ ಖಟ್ಟರ್ ಅವರ ಆಪ್ತ ಎಂದು ಪರಿಗಣಿಸಲಾಗಿದೆ. ರಾಜಕೀಯ ವಿಶ್ಲೇಷಕರು ಹೇಳುವ ಪ್ರಕಾರ ಚುನಾವಣಾ ಮತ್ತು ಜಾತಿ ಲೆಕ್ಕಾಚಾರಗಳು ಈ ಲೋಕಸಭಾ ಸಂಸದರನ್ನು ಹರಿಯಾಣದ ಮುಖ್ಯಮಂತ್ರಿ ಹುದ್ದೆಗೆ ಏರಿಸಿವೆ. ಕುರುಕ್ಷೇತ್ರ, ಯಮುನಾನಗರ, ಅಂಬಾಲಾ, ಹಿಸಾರ್ ಮತ್ತು ರೇವಾರಿ ಜಿಲ್ಲೆಗಳ ಪಾಕೆಟ್‌ಗಳಲ್ಲಿ ಗಣನೀಯ ಉಪಸ್ಥಿತಿ ಹೊಂದಿರುವ ಸೈನಿ ಜಾತಿಯ ಜನಸಂಖ್ಯೆಯು ಸುಮಾರು 8% ಇದೆ ಎನ್ನಲಾಗಿದೆ.
ಇದನ್ನೂ ಓದಿ: Lok Sabha Election 2024: ಇಂದು ರಾಜ್ಯದಲ್ಲಿ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ; ಯಾರಿಗೆಲ್ಲ ಸಿಗಲಿದೆ ಟಿಕೆಟ್?
ರಾಜಕೀಯ ಬೆಳವಣಿಗೆ
10 ಶಾಸಕರನ್ನು ಹೊಂದಿರುವ ಜೆಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಬಿಜೆಪಿ ಅಕ್ಟೋಬರ್ 2019ರಲ್ಲಿ ಇಲ್ಲಿ ಸಮ್ಮಿಶ್ರ ಸರ್ಕಾರ ರಚಿಸಿತ್ತು. ಬಿಜೆಪಿಯ ಮನೋಹರ್ ಲಾಲ್ ಖಟ್ಟರ್ ಮುಖ್ಯಮಂತ್ರಿಯಾದರೆ ದುಷ್ಯಂತ್ ಚೌತಾಲಾ ಉಪಮುಖ್ಯಮಂತ್ರಿಯಾಗಿದ್ದರು. ಇದೀಗ ಬಿಜೆಪಿ ಹಾಗೂ ಚೌತಾಲಾ ನಡುವೆ ಸಂಬಂಧ ಹಳಸಿದೆ. ಪ್ರಾಥಮಿಕವಾಗಿ, ರಾಜ್ಯದಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಒಪ್ಪಂದಕ್ಕೆ ಬರಲು ಎರಡೂ ಪಕ್ಷಗಳು ವಿಫಲವಾಗಿವೆ. ಹೀಗಾಗಿ ಖಟ್ಟರ್ ರಾಜೇನಾಮೆ ನೀಡಿದ್ದರು. 90 ಸದಸ್ಯ ಬಲದ ಹರಿಯಾಣ ವಿಧಾನಸಭೆಯಲ್ಲಿ ಬಿಜೆಪಿ 41 ಸದಸ್ಯ ಬಲ ಹೊಂದಿದೆ. ಇದೀಗ ಆರು ಪಕ್ಷೇತರರು, ಹರಿಯಾಣದ ಲೋಖಿತ್ ಪಕ್ಷದ ಏಕೈಕ ಶಾಸಕ ಗೋಪಾಲ್ ಕಾಂಡ ಅವರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ