ನವದೆಹಲಿ: ಬಿಜೆಪಿ (Bhartiya Janata Party – BJP) ನೇತೃತ್ವದ ಎನ್‌ಡಿಎ (NDA) ವಿರುದ್ಧ ‘ಇಂಡಿಯಾ’ (INDIA) ಕೂಟ ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ (No Confidence Motion) ಅಂಥ ಮಹತ್ವವಿಲ್ಲ. ಯಾಕೆಂದರೆ, ಆಡಳಿತಾರೂಢ ಪಕ್ಷದ ಬಳಿಕ ಅವಿಶ್ವಾಸ ನಿರ್ಣಯವನ್ನು ಗೆಲ್ಲುವಷ್ಟು ಮತಗಳಿವೆ ಎಂದು ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಾರ್ಟಿ (YSRCP) ಸಂಸದ ಪಿ ವಿ ಮಿಥುನ್ ರೆಡ್ಡಿ ಅವರು ಲೋಕಸಭೆಯಲ್ಲಿ (Lok Sabha) ಹೇಳಿದರು. ಅವಿಶ್ವಾಸ ನಿರ್ಣಯ ಕುರಿತು ನಡೆಯತ್ತಿರುವ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಎರಡು ಕೂಟಗಳ ನಡುವಿನ ಜಗಳದ ಭಾಗವಾಗಲು ವೈಎಸ್‌ಆರ್‌ಸಿಪಿ ತಯಾರಿಲ್ಲ ಎಂದು ಹೇಳಿದರು.
ಆಡಳಿತ ಕೂಟ ಎನ್‌ಡಿಎ ಸಂಪೂರ್ಣ ಬಹುಮತವನ್ನು ಹೊಂದಿರುವುದರಿಂದ ಈ ಅವಿಶ್ವಾಸ ನಿರ್ಣಯವು ಹೆಚ್ಚಿನ ಮೌಲ್ಯವನ್ನು ಹೊಂದಿಲ್ಲ ಎಂದು ವೈಎಸ್ಆರ್ ಕಾಂಗ್ರೆಸ್ ಪಕ್ಷವು ನಂಬುತ್ತದೆ ಎಂದು ಮಿಥುನ್ ರೆಡ್ಡಿ ಅವರು ಹೇಳಿದರು.
ಮಣಿಪುರ ಹಿಂಸಾಚಾರ ನಿಲ್ಲಿಸಿ
ನಮ್ಮ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಈ ಅವಿಶ್ವಾಸ ನಿರ್ಣಯವನ್ನು ಬಳಸಬಾರದು ಎಂದು ನಾವು ನಂಬುತ್ತೇವೆ. ಎರಡು ಮೈತ್ರಿಗಳ ನಡುವಿನ ಜಗಳದ ಭಾಗವಾಗಲು ನಾವು ಬಯಸುವುದಿಲ್ಲ. ಈ ಅವಿಶ್ವಾಸ ನಿರ್ಣಯವನ್ನು ನಾವು ವಿರೋಧಿಸುತ್ತೇವೆ ಎಂದು ರೆಡ್ಡಿ ಹೇಳಿದರು. ಲೋಕಸಭೆಯಲ್ಲಿ ವೈಎಸ್‌ಆರ್‌ಸಿಪಿ 22 ಸದಸ್ಯರನ್ನು ಹೊಂದಿದೆ.
ಇದೇ ವೇಳೆ ಸಂಸದ ಪಿ ವಿ ಮಿಥುನ್ ರೆಡ್ಡಿ ಅವರು ಮಣಿಪುರ ಹಿಂಸಾಚಾರ ಕುರಿತು ಮಾತನಾಡಿ, ಮಣಿಪುರದಲ್ಲಿ ನಡೆಯುತ್ತಿರುವ ಕೃತ್ಯಗಳು ಹೀನಾತಿಹೀನವಾಗಿವೆ. ಮಹಿಳೆಯರ ವಿರುದ್ಧ ನಡೆಯುತ್ತಿರುವ ಈ ಅಪರಾಧಗಳು ತಲೆ ತಗ್ಗಿಸುವಂತಾಗಿವೆ. ಸರ್ಕಾರ ಈ ಹಿಂಸಾಚಾರದ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಬೇಕು ಮತ್ತು ಕಠಿಣ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಸಂಸತ್ತಲ್ಲಿ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್, ಬಿಜೆಪಿ ಸಂಸದೆಯರಿಂದ ದೂರು!
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ಅನರ್ಹತೆ ರದ್ದಾದ ಬಳಿಕ ಸಂಸತ್‌ನಲ್ಲಿ ಮೊದಲ ಬಾರಿಗೆ ಭಾಷಣ ಮಾಡಿದ್ದು, ಇದೇ ವೇಳೆ ಅವರು ಸ್ಮೃತಿ ಇರಾನಿ (Smriti Irani) ಅವರಿಗೆ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಾಗಾಗಿ, ಸಂಸತ್‌ನಲ್ಲಿ ಅನುಚಿತ ವರ್ತನೆ ತೋರಿದ ರಾಹುಲ್ ಗಾಂಧಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಶೋಭಾ ಕಂರದ್ಲಾಜೆ ಸೇರಿ 21 ಸಂಸದೆಯರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ನೀಡಿದ್ದಾರೆ.
When #RahulGandhi gave a flying #kiss pic.twitter.com/qbOUBZRWRx
— Madhuri Adnal (@madhuriadnal) August 9, 2023
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂಸತ್‌ನಲ್ಲಿ ಭಾಷಣ ಮಾಡುವಾಗ ಫ್ಲೈಯಿಂಗ್ ಕಿಸ್ ನೀಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. “ರಾಹುಲ್ ಗಾಂಧಿ ಅವರು ಸಂಸತ್‌ನಲ್ಲಿ ಸ್ಮೃತಿ ಇರಾನಿ ಅವರ ತಿರುಗಿ ಅನುಚಿತವಾಗಿ ವರ್ತನೆ ತೋರಿದಿದ್ದಾರೆ. ಇಂತಹ ವರ್ತನೆ ತೋರಿದ ರಾಹುಲ್ ಗಾಂಧಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇದು ಸ್ಮೃತಿ ಇರಾನಿ ಮಾತ್ರವಲ್ಲ, ಸದನದಲ್ಲಿದ್ದ ಎಲ್ಲ ಮಹಿಳಾ ಸಂಸದರ ಗೌರವದ ಪ್ರಶ್ನೆಯಾಗಿದೆ” ಎಂದು 21 ಸಂಸದೆಯರು ಸಹಿ ಇರುವ ದೂರನ್ನು ಸ್ಪೀಕರ್‌ಗೆ ನೀಡಲಾಗಿದೆ.
ಸಚಿವೆ ಸ್ಮೃತಿ ಇರಾನಿ ಆಕ್ರೋಶ
ರಾಹುಲ್ ಗಾಂಧಿ ಅವರು ಸ್ಮೃತಿ ಇರಾನಿಗೆ ಫ್ಲೈಯಿಂಗ್ ಕಿಸ್ ನೀಡಿದ ವಿಡಿಯೊ ಲಭ್ಯವಾಗಿಲ್ಲ. ಕಾಂಗ್ರೆಸ್ ನಾಯಕ ಒಮ್ಮೆ ಫ್ಲೈಯಿಂಗ್ ಕಿಸ್ ನೀಡಿದ್ದರೂ ಅವರು ಆಗ ಸ್ಪೀಕರ್ ಕಡೆ ನೋಡುತ್ತಿದ್ದರು. ಹಾಗಾಗಿ, ಅವರು ಸ್ಮೃತಿ ಇರಾನಿ ಅವರಿಗೇ ಫ್ಲೈಯಿಂಗ್ ಕಿಸ್ ನೀಡಿದ್ದರ ವಿಡಿಯೊ ಲಭ್ಯವಾಗಿಲ್ಲ. ಇನ್ನು, ರಾಹುಲ್ ಗಾಂಧಿ ಅವರ ಅಬ್ಬರದ ಭಾಷಣ ಸಹಿಸದೆ ಬಿಜೆಪಿ ನಾಯಕರು ಇಂತಹ ಕುತಂತ್ರ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಹುಲ್ ಗಾಂಧಿ ವರ್ತನೆ ಕುರಿತು ಸಂಸತ್‌ನಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದ ಸ್ಮೃತಿ ಇರಾನಿ, “ರಾಹುಲ್ ಗಾಂಧಿ ಅವರು ಫ್ಲೈಯಿಂಗ್ ಕಿಸ್ ನೀಡುತ್ತಾರೆ ಎಂದರೆ ಅವರ ಮನಸ್ಸಿನಲ್ಲಿ ಎಂತಹ ಭಾವನೆ ಇರಬೇಕು? ಅವರಿಗೆ ಹೆಣ್ಣುಮಕ್ಕಳ ಮೇಲೆ ಎಷ್ಟು ದ್ವೇಷದ ಮನೋಭಾವ ಇರಬೇಕು? ಇದು ಅವರ ಕುಟುಂಬದ ಹಿನ್ನೆಲೆ ಹಾಗೂ ಸಂಸ್ಕೃತಿಯನ್ನು ತೋರಿಸುತ್ತದೆ” ಎಂದು ಕುಟುಕಿದ್ದರು. ಸಂಸತ್‌ನಿಂದ ಹೊರಬಂದ ಬಳಿಕವೂ ಶೋಭಾ ಕರಂದ್ಲಾಜೆ, ಸ್ಮೃತಿ ಇರಾನಿ ಸೇರಿ ಹಲವರು ರಾಹುಲ್ ಗಾಂಧಿ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.