Site icon Vistara News

Indian Passport : 70 ಸಾವಿರ ಭಾರತಿಯರಿಂದ ಪಾಸ್‌ಪೋರ್ಟ್ ಸರೆಂಡರ್! ಕಾರಣ ಏನಿರಬಹುದು?

Indian Passport

ನವದೆಹಲಿ: 2011 ಮತ್ತು 2022ರ ಅವಧಿಯಲ್ಲಿ ಸುಮಾರು 70 ಸಾವಿರ ಭಾರತೀಯರು ತಮ್ಮ ಪಾಸ್‌ಪೋರ್ಟ್‌ಗಳನ್ನು (Indian Passport) ಸರೆಂಡರ್ ಮಾಡಿದ್ದಾರೆ. ಈ ಪೈಕಿ ಗೋವಾದಲ್ಲಿ (Goa) ಹೆಚ್ಚಿನ ಸಂಖ್ಯೆಯಲ್ಲಿ ಪಾಸ್‌ಪೋರ್ಟ್‌ಗಳನ್ನು ಬಿಟ್ಟು ಕೊಡಲಾಗಿದೆ. ಮಾಹಿತಿ ಹಕ್ಕು ಕಾಯಿದೆಯಡಿ (Right to Information Act) ಕೇಳಲಾದ ಪ್ರಶ್ನೆಗೆ ಸರ್ಕಾರ ಉತ್ತರಿಸಿದೆ. ಪಾಸ್‌ಪೋರ್ಟ್‌ಗಳನ್ನು ಹೆಚ್ಚಾಗಿ ಪ್ರಾದೇಶಿಕ ಕಚೇರಿಗಳಲ್ಲಿ ಸರೆಂಡರ್ ಮಾಡಲಾಗಿದೆ. ಪಾಸ್‌ಪೋರ್ಟ್ ಸರೆಂಡರ್ ಮಾಡಿರುವ ಮಾಹಿತಿಯಲ್ಲಿ ಭಾರತೀಯ ರಾಯಭಾರ ಹಾಗೂ ಹೈಕಮಿಷನ್‌ ಕಚೇರಿಗಳ ಮಾಹಿತಿ ಸೇರಿಸಿಲ್ಲ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಬಿಟ್ಟುಕೊಟ್ಟ 69,303 ಪಾಸ್‌ಪೋರ್ಟ್‌ಗಳಲ್ಲಿ ಅತಿ ಹೆಚ್ಚು 28,031 (ಶೇ.40.45) ಗೋವಾ ಕಚೇರಿಯಲ್ಲಿ ದಾಖಲಾಗಿದೆ. ಗೋವಾ ನಂತರದ ಪಟ್ಟಿಯಲ್ಲಿ 9,557 ಪಾಸ್‌ಪೋರ್ಟ್‌ಗಳೊಂದಿಗೆ(ಶೇ.13.79) ಪಂಜಬ್‌ನ ಅಮೃತಸರ, ಜಲಂಧರ್ ಮತ್ತು ಚಂಡೀಗಢ ಕಚೇರಿಗಳಲ್ಲಿ ಸರೆಂಡರ್ ಮಾಡಲಾಗಿದೆ. ಪಂಜಾಬ್ ಬಳಿಕ ನಂತರದ ಸ್ಥಾನದಲ್ಲಿ ಗುಜರಾತ್ ರಾಜ್ಯವಿದೆ.

ಈ ಸುದ್ದಿಯನ್ನೂ ಓದಿ: Parliament Budget Session: ಭಾರತೀಯ ಪೌರತ್ವ ತೊರೆದ 16 ಲಕ್ಷ ಜನ, ಇದಕ್ಕೇನು ಕಾರಣ?

2011ರ ಬಳಿಕ ಪಾಸ್‌ಪೋರ್ಟ್ ತ್ಯಜಿಸುವವರ ಸಂಖ್ಯೆ ಹೆಚ್ಚಿದ್ದರೂ ಪೌರತ್ವವ ಬಿಟ್ಟುಕೊಟ್ಟವರ ಸಂಖ್ಯೆ ತೀರಾ ಕ್ಷೀಣವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 2011ರಿಂದ 2022ರ ಅಕ್ಟೋಬರ್ 31 ರ ನಡುವೆ 16.21 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಮಾರ್ಚ್‌ನಲ್ಲಿ ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ ವಿ ಮುರಳೀಧರನ್ ಲೋಕಸಭೆಗೆ ತಿಳಿಸಿದ್ದರು. ಪೌರತ್ವವನ್ನು ತ್ಯಜಿಸಲು ಅಥವಾ ಪಡೆದುಕೊಳ್ಳಲು ವೈಯಕ್ತಿಕ ಕಾರಣಗಳಿರುತ್ತವೆ ಎಂದು ವಿದೇಶಾಂಗ ಸಚಿವಾಲಯವು ತಿಳಿಸಿತ್ತು.

ದ್ವಿಪೌರತ್ವವನ್ನು ಹೊಂದಲು ಭಾರತೀಯ ಕಾನೂನುಗಳಲ್ಲಿ ಅವಕಾಶವಿಲ್ಲ. ಹಾಗಾಗಿ, ಬೇರೆ ದೇಶದ ಪಾಸ್‌ಪೋರ್ಟ್ ಪಡೆದುಕೊಂಡವರು ಭಾರತೀಯ ಪಾಸ್‌ಪೋರ್ಟ್‌ವನ್ನು ಸರ್ಕಾರಕ್ಕೆ ಒಪ್ಪಿಸಬೇಕಾಗುತ್ತದೆ. ಹಾಗಾಗಿ, ಪಾಸ್‌ಪೋರ್ಟ್ ಸರೆಂಡರ್ ಮಾಡುವವರ ಸಂಖ್ಯೆಯು ಹೆಚ್ಚಳವಾಗಲು ಕಾರಣವಾಗಿರಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತದೆ.

ದೇಶದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ.

Exit mobile version