Site icon Vistara News

Narendra Modi: ರಾಹುಲ್‌ ಗಾಂಧಿ, ಕೇಜ್ರಿವಾಲ್‌ಗೆ ಪಾಕ್‌ ಬೆಂಬಲ; ತನಿಖೆಯಾಗಲಿ ಎಂದ ಮೋದಿ

Narendra Modi

Needs Investigation: PM Narendra Modi On Pakistan's Support For Rahul Gandhi, Arvind Kejriwal

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಕೊನೆಯ ಹಂತಕ್ಕೆ ಬಂದರೂ ರಾಜಕೀಯ ನಾಯಕರ ಅಬ್ಬರದ ಹೇಳಿಕೆ, ಟೀಕೆ, ವ್ಯಂಗ್ಯ, ವಾಗ್ವಾದಗಳು ನಿಲ್ಲುತ್ತಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಹಾಗೂ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ (Arvind Kejriwal) ಅವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ವಾಗ್ದಾಳಿ ನಡೆಸಿದ್ದಾರೆ. “ಅರವಿಂದ ಕೇಜ್ರಿವಾಲ್‌ ಹಾಗೂ ರಾಹುಲ್‌ ಗಾಂಧಿ ಅವರಿಗೆ ಪಾಕಿಸ್ತಾನದ ನಾಯಕರು ಬೆಂಬಲ ನೀಡುತ್ತಿರುವ ಕುರಿತು ತನಿಖೆಯಾಗಬೇಕಿದೆ” ಎಂಬುದಾಗಿ ಪ್ರಧಾನಿ ಹೇಳಿದ್ದಾರೆ.

ಐಎಎನ್‌ಎಸ್‌ ಸುದ್ದಿಸಂಸ್ಥೆಗೆ ಸಂದರ್ಶನ ನೀಡುವ ವೇಳೆ ಮೋದಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ. ಪಾಕಿಸ್ತಾನದ ನಾಯಕರ ಬೆಂಬಲದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೋದಿ, “ನಾನು ಪ್ರಧಾನಿ ಸ್ಥಾನ ಹೊಂದಿದ್ದು, ಅಂತಹ ವಿಷಯಗಳ ಬಗ್ಗೆ ಮಾತನಾಡಬಾರದು. ಆದರೆ, ನಿಮ್ಮ ಕಾಳಜಿ ನನಗೆ ಅರ್ಥವಾಗುತ್ತದೆ. ಕೆಲವರು ನಮ್ಮ ವಿರುದ್ಧ ದ್ವೇಷ ಕಾರುತ್ತಾರೆ. ಆ ದ್ವೇಷ ಕಾರುವವರೇ ನಮ್ಮ ನಾಯಕರಿಗೆ ಬೆಂಬಲ ಸೂಚಿಸುತ್ತಾರೆ. ಆಯ್ಕೆಯ ಆಧಾರದ ಮೇಲೆಯೇ ದ್ವೇಷ ಕಾರುವವರು ಬೆಂಬಲ ನೀಡುತ್ತಾರೆ. ಈ ಕುರಿತು ತನಿಖೆಯಾಗಬೇಕಿದೆ” ಎಂಬುದಾಗಿ ನರೇಂದ್ರ ಮೋದಿ ಹೇಳಿದರು.

ಏನಿದು ಪ್ರಕರಣ?

ಮೇ ತಿಂಗಳ ಆರಂಭದಲ್ಲಿ ಪಾಕಿಸ್ತಾನದ ಮಾಜಿ ಸಚಿವ ಚೌಧರಿ ಫವಾದ್‌ ಅವರು ರಾಹುಲ್‌ ಗಾಂಧಿ ಅವರ ಪೋಸ್ಟ್‌ಅನ್ನು ಹಂಚಿಕೊಂಡು, ಅವರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದರು. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಜಾಮೀನು ಸಿಕ್ಕಾಗಲೂ ಚೌಧರಿ ಫವಾದ್‌ ಪ್ರತಿಕ್ರಿಯಿಸಿದ್ದರು. ಆಗ ಅವರು, “ಅರವಿಂದ್‌ ಕೇಜ್ರಿವಾಲ್‌ ಬಿಡುಗಡೆಯಾಗಿದ್ದಾರೆ. ಇದರಿಂದ ಮೋದಿ ಮತ್ತೊಂದು ಯುದ್ಧ ಸೋತಂತಾಗಿದೆ. ಇದು ಭಾರತಕ್ಕೆ ಶುಭ ಸುದ್ದಿ” ಎಂದಿದ್ದರು. ಚುನಾವಣೆ ವೇಳೆಯೂ, “ದ್ವೇಷ ಹಾಗೂ ತೀವ್ರವಾದದ ವಿರುದ್ಧ ಶಾಂತಿ ಹಾಗೂ ಸಾಮರಸ್ಯ ಗೆಲ್ಲುತ್ತದೆ ಎಂಬ ವಿಶ್ವಾಸವಿದೆ” ಎಂದು ಚೌಧರಿಯು ಕೇಜ್ರಿವಾಲ್‌ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದರು.

ಮಣಿಶಂಕರ್‌ ಅಯ್ಯರ್‌ಗೆ ಟಾಂಗ್‌ ಕೊಟ್ಟಿದ್ದ ಮೋದಿ

ಕೆಲ ದಿನಗಳ ಹಿಂದೆ ಇಂಡಿಯಾ ಟಿವಿ ಚಾನೆಲ್‌ ಜತೆ ಸಂವಾದ ನಡೆಸುವ ವೇಳೆ, ಮಣಿಶಂಕರ್‌ ಅಯ್ಯರ್‌ ಹೇಳಿಕೆ ಕುರಿತು ಸಂದರ್ಶಕ ಕೇಳಿದ ಪ್ರಶ್ನೆಗೆ ನರೇಂದ್ರ ಮೋದಿ ಅವರು ಮಾರ್ಮಿಕವಾಗಿ ಉತ್ತರ ನೀಡಿದರು. “ನಾನೇ ಲಾಹೋರ್‌ಗೆ ತೆರಳಿ ಆ ಪಾಕಿಸ್ತಾನದ ಶಕ್ತಿ ಎಷ್ಟಿದೆ ಎಂಬುದನ್ನು ನೋಡಿಕೊಂಡು ಬಂದಿದ್ದೇನೆ. ನನ್ನನ್ನು ನೋಡಿ, ಪಾಕಿಸ್ತಾನದ ಒಬ್ಬ ಪತ್ರಕರ್ತ ಆಶ್ಚರ್ಯದಿಂದ ಕೇಳಿದ. ‘ವೀಸಾ ಇಲ್ಲದೆ ನೀವೇಗೆ ಇಲ್ಲಿಗೆ ಬಂದಿದ್ದೀರಿ’ ಎಂದ. ಅದಕ್ಕೆ ನಾನು, ‘ಪಾಕಿಸ್ತಾನ ಒಂದು ಕಾಲಕ್ಕೆ ನಮ್ಮದೇ ದೇಶದ ಭಾಗವಾಗಿತ್ತು’ ಎಂಬುದಾಗಿ ಉತ್ತರಿಸಿದೆ” ಎಂಬುದಾಗಿ ನರೇಂದ್ರ ಮೋದಿ ಹೇಳಿದ್ದಾರೆ. ಆ ಮೂಲಕ ಮಣಿಶಂಕರ್‌ ಅಯ್ಯರ್‌ ಹೇಳಿಕೆಗೆ ವ್ಯಂಗ್ಯವಾಗಿಯೇ ಉತ್ತರ ಕೊಟ್ಟಿದ್ದರು.

ಇದನ್ನೂ ಓದಿ: Varanasi: ಮೋದಿ ಕುರಿತು ವಾರಾಣಸಿಯಲ್ಲಿರುವ ಕನ್ನಡಿಗರು ಏನಂತಾರೆ? ಇಲ್ಲಿದೆ ‘ವಿಸ್ತಾರ ನ್ಯೂಸ್’ ಗ್ರೌಂಡ್‌ ರಿಪೋರ್ಟ್!

Exit mobile version