ಹೊಸ ದಿಲ್ಲಿ: ದಿನೇ ದಿನೆ ನೀಟ್ ಪರೀಕ್ಷೆ ಎಂಬುದು ವಿದ್ಯಾರ್ಥಿಗಳಿಗೆ ದುಃಸ್ವಪ್ನ ಎಂಬಂತಾಗುತ್ತಿದೆ. ಭಾನುವಾರ ದೇಶಾದ್ಯಂತ ನಡೆದ ನೀಟ್ ಪರೀಕ್ಷೆ (NEET exam) ಯಲ್ಲಿ ಹಲವು ಕಡೆ ವಿದ್ಯಾರ್ಥಿನಿಯರಿಗೆ ಅವರು ಧರಿಸಿದ ಬ್ರಾದ ಪಟ್ಟಿಗಳನ್ನು ಕೂಡ ಚೆಕ್ ಮಾಡಲಾಗಿದೆ. ಇನ್ನೂ ಕೆಲವರನ್ನು ಅವರ ದಿರಿಸು ಬದಲಾಯಿಸಿ ಬರುವಂತೆ ಸೂಚಿಸಲಾಗಿದೆ. ಕೊನೆಗೆ ಅವರು ತಮ್ಮ ಹೆತ್ತವರೊಂದಿಗೆ ತಮ್ಮ ಬಟ್ಟೆ ಬದಲಿಸಿಕೊಂಡು ಬಂದು, ಅಥವಾ ಉಲ್ಟಾ ಧರಿಸಿ ಪರೀಕ್ಷೆ ಬರೆಯಬೇಕಾಯಿತು. ಮಹಾರಾಷ್ಟ್ರ ಹಾಗೂ ಪಶ್ಚಿಮ ಬಂಗಾಳದಲ್ಲಿ ಈ ಘಟನೆಗಳು ನಡೆದಿವೆ. ಇಂಥ ಘಟನೆಗಳನ್ನು ಈ ವಿದ್ಯಾರ್ಥಿನಿಯರ ಸಹಪಾಠಿಗಳು ಮತ್ತು ಹೆತ್ತವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ತಮ್ಮ ಕಳವಳ ತೋಡಿಕೊಂಡಿದ್ದಾರೆ.
ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿಯು (NTA) ಅಭ್ಯರ್ಥಿಗಳ ಡ್ರೆಸ್ಸಿಂಗ್ ಕೋಡ್ ಪ್ರಕಟಿಸಿದ್ದು, ಅದರಂತೆ ಬರದ ಅಭ್ಯರ್ಥಿಗಳು ಕೊನೆಯ ಕ್ಷಣದ ಬದಲಾವಣೆಗಾಗಿ ಕಳವಳದಲ್ಲಿ ಓಡಾಡಬೇಕಾಯಿತು. ಕೆಲವರು ಹತ್ತಿರದ ಅಂಗಡಿಗಳಿಗೆ ನುಗ್ಗಿದರು. ಜೇಬು ಇದ್ದ ಪ್ಯಾಂಟ್ ಧರಿಸಿದ, ಜೀನ್ಸ್ ಧರಿಸಿದ ಹಲವರನ್ನು ಪರೀಕ್ಷೆ ಬರೆಯಲು ಬಿಡಲಿಲ್ಲ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಪೋಷಕರು ಧರಿಸಿದ್ದ ಲೆಗ್ಗಿಂಗ್‌ಗಳನ್ನು ತಮ್ಮ ಜೀನ್ಸ್ ಬದಲು ಮಾಡಿಕೊಂಡರು.
ಈ ಬಗ್ಗೆ ಕೆಲ ವಿದ್ಯಾರ್ಥಿಗಳ ಹೆತ್ತವರು ಎನ್‌ಟಿಎಗೆ ದೂರು ನೀಡಿದ್ದಾರೆ. ಹೀಗೆ ಪರೀಕ್ಷೆಗೆ ಮೊದಲಿನ ಕ್ಷಣಗಳಲ್ಲಿ ವಿದ್ಯಾರ್ಥಿಗಳ ಮೇಲೆ ಸೃಷ್ಟಿಸುವ ಒತ್ತಡವು ಅವರ ಮಾನಸಿಕ ಧೈರ್ಯವನ್ನು ಕುಂದಿಸುತ್ತದೆ ಎಂದು ಆಕ್ಷೇಪಿಸಿದ್ದಾರೆ. ʼʼಸಾಂಗ್ಲಿಯಲ್ಲಿ ಕೆಲವು ವಿದ್ಯಾರ್ಥಿನಿಯರ ಕುರ್ತಾವನ್ನು ಉಲ್ಟಾ ಧರಿಸಲು ತಿಳಿಸಲಾಯಿತು. ನಮ್ಮ ಮಗಳು ಇದನ್ನು ಪರೀಕ್ಷೆ ಬರೆದು ಬಂದ ಬಳಿಕ ತಿಳಿಸಿದಳು. ಇಂಥ ಗಂಭೀರ ಪರೀಕ್ಷೆಯ ಹೊತ್ತಿನಲ್ಲಿ ಹೀಗೆ ಹಿಂಸೆ ಕೊಡುವುದು ಕಳವಳದ ಸಂಗತಿ. ಇದು ಮಕ್ಕಳ ಮಾನಸಿಕ ಸ್ಥೈರ್ಯವನ್ನು ಕುಂದಿಸುತ್ತದೆʼʼ ಎಂದು ಡಾಕ್ಟರ್ ದಂಪತಿಯೊಬ್ಬರು ಕಳವಳ ತೋಡಿಕೊಂಡರು. ಜೀನ್ಸ್ ತೊಟ್ಟು ಬಂದ ಕೆಲವು ವಿದ್ಯಾರ್ಥಿಗಳನ್ನು ಜೀನ್ಸ್ ತೆಗೆದಿಟ್ಟು, ಅಂಡರ್‌ವೇರ್‌ನಲ್ಲಿಯೇ ಪರೀಕ್ಷೆ ಬರೆಸಲಾಯಿತು. ವಿದ್ಯಾರ್ಥಿನಿಯರು ಡ್ರೆಸ್ ಬದಲಾಯಿಸಲೂ ಕೋಣೆಗಳಿಲ್ಲದೆ, ಬಯಲಿನಲ್ಲಿಯೇ ಪೋಷಕರ ರಕ್ಷೆ ಪಡೆದು ಮುಜುಗರಪಡುತ್ತ ಬಟ್ಟೆ ಬದಲಾಯಿಸಬೇಕಾಯಿತು ಎಂದು ಕೆಲವರು ದೂರಿದ್ದಾರೆ.
ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್) ದೇಶದ 4,000ಕ್ಕೂ ಅಧಿಕ ಕೇಂದ್ರಗಳಲ್ಲಿ ಭಾನುವಾರ ನಡೆಯಿತು. 20 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆದರು. ಪರೀಕ್ಷಾ ಮುನ್ನ ಮಾಡುವ ಚೆಕ್ಕಿಂಗ್ ವ್ಯವಸ್ಥೆ ಇನ್ನಷ್ಟು ಸಂವೇದನಶೀಲವಾಗಿರುವಂತೆ ಪರೀಕ್ಷಾ ಕೇಂದ್ರದ ಅಧಿಕಾರಿಗಳಿಗೆ ಎನ್‌ಟಿಎ ಸೂಚಿಸಬೇಕು ಎಂದು ಆಗ್ರಹಿಸಲಾಗಿದೆ.
ಇದನ್ನೂ ಓದಿ: NEET Exam 2023: ಯಶಸ್ವಿಯಾಗಿ ಮುಗಿದ ನೀಟ್ ಪರೀಕ್ಷೆ; ಕೆಲವು ಪ್ರಶ್ನೆಗಳು ಸ್ವಲ್ಪ ಟಫ್ ಇತ್ತೆಂದ ವಿದ್ಯಾರ್ಥಿಗಳು