ಹೊಸದಿಲ್ಲಿ: ಪಿಯುಸಿಯಲ್ಲಿ (PUC) ಮುಖ್ಯ ವಿಷಯವಾಗಿ ಬಯಾಲಜಿಯನ್ನು (Biology – ಜೀವಶಾಸ್ತ್ರ ) ತೆಗೆದುಕೊಳ್ಳದಿದ್ದರೂ ಕೂಡ ನೀಟ್ ಪರೀಕ್ಷೆ (NEET Exam) ಬರೆದು ವೈದ್ಯರಾಗಲು ಅವಕಾಶ ದೊರೆತಿದೆ.
ಫಿಸಿಕ್ಸ್ (ಭೌತಶಾಸ್ತ್ರ), ಕೆಮಿಸ್ಟ್ರಿ (ರಸಾಯನಶಾಸ್ತ್ರ) ಮತ್ತು ಮ್ಯಾತ್ಸ್‌ಗಳನ್ನು (ಗಣಿತ) ಪ್ರಮುಖ ವಿಷಯಗಳಾಗಿ ತೆಗೆದುಕೊಂಡು 10+2 ಪರೀಕ್ಷೆಗಳಲ್ಲಿ (ಪಿಯಸಿ) ತೇರ್ಗಡೆಯಾದವರು ಕೂಡ ಇನ್ನು ಮುಂದೆ ವೈದ್ಯರಾಗಲು ಅವಕಾಶ ನೀಡಲಾಗಿದೆ. ವೈದ್ಯರಾಗುವ ಆಕಾಂಕ್ಷಿಗಳು ಈ ಮೊದಲು ನೀಟ್- ಯುಜಿ (NEET- UG) ಪರೀಕ್ಷೆ ಬರೆಯಬೇಕಾದರೆ, ಪಿಯುಸಿ ಅಥವಾ 10+2 ತರಗತಿಯಲ್ಲಿ ಬಯಾಲಜಿ ವಿಷಯ ಅಧ್ಯಯನ ಮಾಡುವುದು ಕಡ್ಡಾಯವಾಗಿತ್ತು. ಆದರೆ ಇದೀಗ ಆ ನಿಯಮವನ್ನು ಸಡಿಲಿಸಲಾಗಿದೆ.
ನ್ಯಾಷನಲ್ ಮೆಡಿಕಲ್ ಕೌನ್ಸಿಲ್ (NMC) ನೀಡಿರುವ ಇತ್ತೀಚಿನ ಮಾರ್ಗಸೂಚಿಗಳ ಪ್ರಕಾರ, ಬಯಾಲಜಿ ತೆಗೆದುಕೊಳ್ಳದ ವಿದ್ಯಾರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಯಿಂದ 10+2 ಮಟ್ಟದಲ್ಲಿ ಹೆಚ್ಚುವರಿ ವಿಷಯವಾಗಿ ಜೀವಶಾಸ್ತ್ರ ಅಥವಾ ಜೈವಿಕ ತಂತ್ರಜ್ಞಾನ (ಬಯೋಟೆಕ್ನಾಲಜಿ) ಪರೀಕ್ಷೆಯನ್ನು ಪಾಸ್ ಮಾಡಬೇಕು. ವೈದ್ಯಕೀಯ ಶಿಕ್ಷಣದ ಅರ್ಹತಾ ಮಾನದಂಡಗಳಲ್ಲಿನ ಇತ್ತೀಚಿನ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ
ಹಲವಾರು ಪ್ರಶ್ನೆಗಳು ಮತ್ತು ಬಾಕಿ ಇರುವ ನ್ಯಾಯಾಲಯದ ಪ್ರಕರಣಗಳನ್ನು ಪರಿಹರಿಸಲು ಈ ಸಾರ್ವಜನಿಕ ಸೂಚನೆಯನ್ನು ಎನ್ಎಂಸಿ ನೀಡಿದೆ.
ಈ ಹಿಂದೆ, 1997ರ ಪದವಿ ವೈದ್ಯಕೀಯ ಶಿಕ್ಷಣದ ನಿಯಮಗಳ ಅಡಿಯಲ್ಲಿ ಎಂಬಿಬಿಎಸ್ ಆಕಾಂಕ್ಷಿ ಅಭ್ಯರ್ಥಿಗಳು 11ನೇ ಮತ್ತು 12ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ / ಜೈವಿಕ
ತಂತ್ರಜ್ಞಾನದಲ್ಲಿ ಎರಡು ವರ್ಷಗಳ ಅಧ್ಯಯನ ನಡೆಸಬೇಕಿತ್ತು. ರಾಷ್ಟ್ರೀಯ ವೈದ್ಯಕೀಯ ಆಯೋಗ ಜೂನ್ 2, 2023ರಿಂದ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ನಿಯಮಾವಳಿ- 2023 ಅನ್ನು ಪರಿಚಯಿಸಿತು. ಇದರ ನಿಯಮ 11(b) ಪ್ರಕಾರ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ /ಜೈವಿಕ ತಂತ್ರಜ್ಞಾನ ಮತ್ತು ಇಂಗ್ಲಿಷ್‌ನೊಂದಿಗೆ 10+2 ಉತ್ತೀರ್ಣರಾದ ಅಭ್ಯರ್ಥಿಗಳು ವೈದ್ಯರಾಗಲು ಅರ್ಹರಾಗಿದ್ದರು.
ಇದೇ ಜೂನ್ 14, 2023ರಂದು ನಡೆದ ಸಭೆಯಲ್ಲಿ ಎನ್‌ಸಿಎಂ ಈ ಹಿಂದಿನ ವಿಧಾನವನ್ನು ಮರುಪರಿಶೀಲಿಸಲು ನಿರ್ಧರಿಸಿತು. ಈಗ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಗಳಿಂದ 12ನೇ ತರಗತಿಯ ನಂತರ ಹೆಚ್ಚುವರಿ ವಿಷಯಗಳಾಗಿ ಅಗತ್ಯವಿರುವ ವಿಷಯಗಳನ್ನು ಅಧ್ಯಯನ ಮಾಡಬಹುದು. ಈ ಮೂಲಕ ನೀಟ್ ಯುಜಿ (NEET-UG) ಪರೀಕ್ಷೆ ಬರೆಯಲು ಮತ್ತು ಅರ್ಹತಾ ಪ್ರಮಾಣಪತ್ರಕ್ಕೆ ಅರ್ಹರಾಗಿರುತ್ತಾರೆ ಎಂದು ಹೇಳಿದೆ. ಅರ್ಹತಾ ಪ್ರಮಾಣಪತ್ರದ ಅರ್ಜಿಗಳನ್ನು ಈ ಕಾರಣಕ್ಕಾಗಿ ಈ ಹಿಂದೆ ತಿರಸ್ಕರಿಸಿದ್ದ ಅಭ್ಯರ್ಥಿಗಳಿಗೆ ಕೂಡ ಈ ನಿರ್ಧಾರವು ಪೂರ್ವಾನ್ವಯವಾಗುತ್ತದೆ.
ಇದನ್ನೂ ಓದಿ: NEET Eligibility : NEET ಅರ್ಹತಾ ಅಂಕ ಶೂನ್ಯಕ್ಕೆ ಇಳಿಕೆ ; ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್