ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ (NEET UG 2024) ಅಕ್ರಮ ನಡೆದಿದ್ದು, ಪರೀಕ್ಷೆಯನ್ನು ರದ್ದುಗೊಳಿಸಿ, ಮರು ಪರೀಕ್ಷೆಯ ಮನವಿಯನ್ನು ಸುಪ್ರೀಂ ಕೋರ್ಟ್(Supreme Court) ತಿರಸ್ಕರಿಸಿತ್ತು. ಈ ಬಗ್ಗೆ ಸೂಕ್ತ ಕಾರಣ ನೀಡಿ ಸವಿಸ್ತಾರವಾದ ತೀರ್ಪನ್ನು ಸುಪ್ರೀಂಕೋರ್ಟ್ ಇಂದು ನೀಡಲಿದೆ.
ಪರೀಕ್ಷೆ ರದ್ದುಗೊಳಿಸಿ ಮರುಪರೀಕ್ಷೆ ನಡೆಸುವುದರಿಂದ ಬರೋಬ್ಬರಿ 24 ಲಕ್ಷ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಇದ್ದ ನ್ಯಾಯಪೀಠ, ಪರೀಕ್ಷೆ ರದ್ದುಗೊಳಿಸಲು ಸಾಧ್ಯವಿಲ್ಲ. ಇದಕ್ಕೆ ಕಾರಣ ಏನೆಂಬುದನ್ನು ಮುಂದಿನ ದಿನಗಳಲ್ಲಿ ಸವಿಸ್ತಾರವಾಗಿ ವಿವರಿಸಲಾಗುತ್ತದೆ ಎಂದು ಜು.23ರಂದು ಹೇಳಿತ್ತು.
ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಬಯಲಾಗಿರುವ ಹಿನ್ನೆಲೆ ಮೇ 5 ರಂದು ನಡೆಸಲಾಗಿದ್ದ ನೀಟ್ ಪರೀಕ್ಷೆಯನ್ನು ಅಮಾನ್ಯ ಎಂದು ಘೋಷಿಸಿ ಮರು ಪರೀಕ್ಷೆಗೆ ಆದೇಶ ನೀಡುವಂತೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿದ್ದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು. ಹೊಸದಾಗಿ ಮತ್ತೆ ಪರೀಕ್ಷೆ ನಡೆಸುವುದು 20ಲಕ್ಷ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಕ್ರಮ ದೇಶವ್ಯಾಪಿ ನಡೆದಿಲ್ಲ. ಮರು ಪರೀಕ್ಷೆಗೆ ಆದೇಶಿಸಲು ಪೂರಕವಾದ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ಹೇಳಿದೆ.
ಸಿಬಿಐ ಮೊದಲ ಚಾರ್ಜ್‌ಶೀಟ್ ಸಲ್ಲಿಕೆ
ಏತನ್ಮಧ್ಯೆ, NEET-UG 2024 ಪರೀಕ್ಷೆಯಲ್ಲಿನ ಆಪಾದಿತ ಅಕ್ರಮಗಳಲ್ಲಿ 120-B, 201, 409, 380, 411, 420 ಮತ್ತು 109 IPC ಅಡಿಯಲ್ಲಿ ಕೇಂದ್ರೀಯ ತನಿಖಾ ದಳ (CBI) ಗುರುವಾರ ತನ್ನ ಮೊದಲ ಚಾರ್ಜ್‌ಶೀಟ್ ಅನ್ನು ಸಲ್ಲಿಸಿದೆ. ತನಿಖಾ ಸಂಸ್ಥೆಯು 13 ಆರೋಪಿಗಳಾದ ನಿತೀಶ್ ಕುಮಾರ್, ಅಮಿತ್ ಆನಂದ್, ಸಿಕಂದರ್ ಯಡ್ವೆಂದು, ಅಶುತೋಷ್ ಕುಮಾರ್-1, ರೋಷನ್ ಕುಮಾರ್, ಮನೀಶ್ ಪ್ರಕಾಶ್, ಅಶುತೋಷ್ ಕುಮಾರ್-2, ಅಖಿಲೇಶ್ ಕುಮಾರ್, ಅವದೇಶ್ ಕುಮಾರ್, ಅನುರಾಗ್ ಯಾದವ್, ಅಭಿಷೇಕ್ ಕುಮಾರ್, ಶಿವಾನಂದ್ ಕುಮಾರ್ ಮತ್ತು ಆಯುಷ್ ರಾಜ್ ಅವರ ವಿರುದ್ಧ ಅಪರಾಧಗಳನ್ನು ದಾಖಲಿಸಿದೆ. .
ಈ ಪ್ರಕರಣವನ್ನು ಆರಂಭದಲ್ಲಿ ಪಾಟ್ನಾದ ಶಾಸ್ತ್ರಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಯಿತು ಮತ್ತು ನಂತರ ಜೂನ್ 23 ರಂದು ಸಿಬಿಐಗೆ ವರ್ಗಾಯಿಸಲಾಯಿತು. ತನಿಖಾ ಸಂಸ್ಥೆಯು ಈ ಪ್ರಕರಣದಲ್ಲಿ ಇದುವರೆಗೆ 40 ಆರೋಪಿಗಳನ್ನು ಬಂಧಿಸಿದೆ, ಬಿಹಾರ ಪೊಲೀಸರು 15 ಮಂದಿಯನ್ನು ಬಂಧಿಸಿದ್ದಾರೆ ಮತ್ತು 58 ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ.
ಏನಿದು ಪ್ರಕರಣ?
ನೀಟ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ 67 ವಿದ್ಯಾರ್ಥಿಗಳಲ್ಲಿ 44 ವಿದ್ಯಾರ್ಥಿಗಳು ಗ್ರೇಸ್ ಮಾರ್ಕ್ಸ್ ಆಧಾರದ ಮೇಲೆ ಟಾಪರ್‌ಗಳಾಗಿದ್ದರು. ಇನ್ನು, ಹರಿಯಾಣದಲ್ಲಿ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ ಆರು ವಿದ್ಯಾರ್ಥಿಗಳು ಜಂಟಿಯಾಗಿ ಟಾಪ್ ಸ್ಥಾನ ಪಡೆದಿದ್ದಾರೆ. ಇದರಿಂದಾಗಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ, ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿದೆ ಎಂಬುದಾಗಿ ಕೆಲವು ಪೋಷಕರು ಆರೋಪ ಮಾಡಿದ್ದಾರೆ. ಗ್ರೇಸ್ ಮಾರ್ಕ್ಸ್ ಪಡೆದ 1,500 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯನ್ನೂ ನಡೆಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಮಾಸ್ಟರ್ ಮೈಂಡ್ ಅಮಿತ್ ಆನಂದ್ ಸೇರಿ ಹಲವರನ್ನು ಬಂಧಿಸಲಾಗಿದ್ದು, ಕ್ಷಿಪ್ರವಾಗಿ ತನಿಖೆ ನಡೆಯುತ್ತಿದೆ.
ದೇಶಾದ್ಯಂತ 571 ನಗರಗಳಲ್ಲಿ ಹಾಗೂ ಹೊರಗಿನ 14 ನಗರಗಳು ಸೇರಿದಂತೆ 4750 ವಿವಿಧ ಕೇಂದ್ರಗಳಲ್ಲಿ 05 ಮೇ 2024 ರಂದು ನೀಟ್ ಯುಜಿ ಪರೀಕ್ಷೆಯನ್ನು ನಡೆಸಲಾಗಿತ್ತು. ಪರೀಕ್ಷೆಯನ್ನು 13 ಭಾಷೆಗಳಲ್ಲಿ (ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಮತ್ತು ಉರ್ದು) ನಡೆಸಲಾಗಿತ್ತು. ನೀಟ್ ಪರೀಕ್ಷೆಗೆ 24,06,079 ಅಭ್ಯರ್ಥಿಗಳ ನೋಂದಾಯಿಸಿಕೊಂಡಿದ್ದರು. ಅದರಲ್ಲಿ 23,33,297 ಪರೀಕ್ಷೆ ಹಾಜರಾಗಿದ್ದು, 72782 ಗೈರು ಹಾಜರಾಗಿದ್ದರು. ಇದರಲ್ಲಿ ಬಾಲಕರು 10,29,154 ಹಾಗೂ ಬಾಲಕಿಯರು 13,76,831, ತೃತೀಯ ಲಿಂಗಿಗಳು 18 ಮಂದಿ ಪರೀಕ್ಷೆಯನ್ನು ಬರೆದಿದ್ದರು.
ಇದನ್ನೂ ಓದಿ: NEET UG 2024: ಕೊನೆಗೂ ನೀಟ್ ಫೈನಲ್ ಫಲಿತಾಂಶ ಪ್ರಕಟ; ಟಾಪರ್‌ಗಳ ಸಂಖ್ಯೆ 17ಕ್ಕೆ ಇಳಿಕೆ, ಇಲ್ಲಿದೆ ಪಟ್ಟಿ