Site icon Vistara News

NEET UG 2024 Re-Test Result: ನೀಟ್‌ ಮರುಪರೀಕ್ಷೆಯ ಫಲಿತಾಂಶ ಪ್ರಕಟ; ಹೀಗೆ ಚೆಕ್‌ ಮಾಡಿ

NEET UG 2024 Re-Test Result

NEET UG 2024 Re-Test Result

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ ಮರು ಪರೀಕ್ಷೆ (Re-Test) ಫಲಿತಾಂಶವನ್ನು ಸೋಮವಾರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪ್ರಕಟಿಸಿದೆ (NEET UG 2024 Re-Test Result). ಮೇಯಲ್ಲಿ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಲ್ಲಿ ಕೃಪಾಂಕ ಪಡೆದ 1,563 ವಿದ್ಯಾರ್ಥಿಗಳಿಗೆ ಜೂನ್ 23ರಂದು ಮರುಪರೀಕ್ಷೆ ನಡೆಲಾಗಿತ್ತು. ಈ ಪೈಕಿ 813 ಅಭ್ಯರ್ಥಿಗಳು ಮಾತ್ರ ಹಾಜರಾಗಿದ್ದರು. ಶನಿವಾರ ಆನ್ಸರ್‌ ಕೀ ಪ್ರಕಟಿಸಲಾಗಿತ್ತು.

ಚಂಡೀಗಢ, ಗುಜರಾತ್‌, ಹರಿಯಾಣ, ಮೇಘಾಲಯ ಸೇರಿ ಆರು ರಾಜ್ಯಗಳ ನಗರಗಳಲ್ಲಿ ಮರು ಪರೀಕ್ಷೆ ನಡೆದಿತ್ತು. ಈ ಪೈಕಿ ಛತ್ತೀಸ್‌ಗಢದಲ್ಲಿ 602 ಅಭ್ಯರ್ಥಿಗಳ ಪೈಕಿ 291 ವಿದ್ಯಾರ್ಥಿಗಳು ಹಾಜರಾದರೆ, ಹರಿಯಾಣದಲ್ಲಿ 494 ಅಭ್ಯರ್ಥಿಗಳ ಪೈಕಿ 287, ಮೇಘಾಲಯದಲ್ಲಿ 464 ವಿದ್ಯಾರ್ಥಿಗಳ ಪೈಕಿ 234 ಅಭ್ಯರ್ಥಿಗಳು ಮಾತ್ರ ಹಾಜರಾಗಿದ್ದರು. ಗುಜರಾತ್‌ ಕೇಂದ್ರದಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಮರು ಪರೀಕ್ಷೆ ಬರೆದಿದ್ದರು.

“ಜೂನ್ 23ರಂದು ಮರು ಪರೀಕ್ಷೆಗೆ ಹಾಜರಾದ ನೀಟ್ (ಯುಜಿ) 2024ರ ಎಲ್ಲ ಅಭ್ಯರ್ಥಿಗಳ ಪರಿಷ್ಕೃತ ಸ್ಕೋರ್‌ ಕಾರ್ಡ್‌ಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ವೆಬ್‌ಸೈಟ್‌ಗೆ ಲಾಗಿನ್‌ ಆಗಿ ಪರಿಷ್ಕೃತ ಸ್ಕೋರ್‌ ಕಾರ್ಡ್‌ಗಳನ್ನು ಡೌನ್‌ಲೋಡ್‌ ಮಾಡಬಹುದು” ಎಂದು ಎನ್‌ಟಿಎ ತಿಳಿಸಿದೆ.

ಫಲಿತಾಂಶ ಹೀಗೆ ಚೆಕ್‌ ಮಾಡಿ

ನೀಟ್‌ ಪರೀಕ್ಷೆ ವೇಳೆ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಮತ್ತು ಕೇಂದ್ರ ಶಿಕ್ಷಣ ಸಚಿವಾಲಯದ ಅಧಿಕಾರಿಗಳು ಹಾಜರಿದ್ದು, ಮರುಪರೀಕ್ಷೆಯ ಮೇಲ್ವಿಚಾರಣೆ ನಡೆಸಿದರು.

ಯಾಕಾಗಿ ಮರು ಪರೀಕ್ಷೆ?

2024ರ ಮೇ 5ರಂದು 14 ಅಂತಾರಾಷ್ಟ್ರೀಯ ಸ್ಥಳಗಳು ಸೇರಿದಂತೆ 571 ನಗರಗಳಲ್ಲಿ, 4,750 ಕೇಂದ್ರಗಳಲ್ಲಿ 24 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗೆ ಹಾಜರಾಗಿದ್ದರು. ಜೂನ್ 4ರಂದು ಫಲಿತಾಂಶವನ್ನು ಪ್ರಕಟಿಸಲಾಯಿತು. ಬಳಿಕ 1,563 ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳು ದೊರೆತಿರುವುದು ಭಾರಿ ಸುದ್ದಿ ಆಯಿತು. ಸದ್ಯ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.

ಗ್ರೇಸ್ ಅಂಕದ ವಿವಾದ ದೇಶಾದ್ಯಂತ ಹರಡುತ್ತಿದ್ದಂತೆ ಕೇಂದ್ರ ಸರ್ಕಾರ ಗ್ರೇಸ್ ಅಂಕಗಳನ್ನು ಪಡೆದ 1,563 ವಿದ್ಯಾರ್ಥಿಗಳಿಗೆ ಮರುಪರೀಕ್ಷೆ ನಡೆಸುವುದಾಗಿ ಸುಪ್ರೀಂ ಕೋರ್ಟ್‌ಗೆ ಹೇಳಿತ್ತು. 1,563 ಅಭ್ಯರ್ಥಿಗಳಲ್ಲಿ ಯಾರಾದರೂ ಮರುಪರೀಕ್ಷೆಯಿಂದ ಹೊರಗುಳಿದಿದ್ದರೆ ಗ್ರೇಸ್ ಅಂಕಗಳಿಲ್ಲದ ಅವರ ಹಿಂದಿನ ಅಂಕಗಳನ್ನು ಫಲಿತಾಂಶಗಳಿಗಾಗಿ ಬಳಸಲಾಗುತ್ತದೆ ಎಂದೂ ಕೇಂದ್ರ ಕೋರ್ಟ್‌ಗೆ ತಿಳಿಸಿತ್ತು. ಅದರಂತೆ ಮರುಪರೀಕ್ಷೆ ನಡೆಸಲಾಗಿತ್ತು.

Exit mobile version