Site icon Vistara News

Neha Singh: ಐಐಟಿಯಲ್ಲಿ ಓದಿ, ಐದಂಕಿ ಸಂಬಳದ ಕೆಲಸ ಬಿಟ್ಟು ಉದ್ಯಮಿಯಾದ ಯುವತಿ; ಈಕೆಗೆ ರತನ್‌ ಟಾಟಾ ಫಿದಾ

Neha Singh Success Story

Neha Singh: IIT Bombay topper left job, got Ratan Tata to invest in her Rs 100 crore startup

ಮುಂಬೈ: ಒಳ್ಳೆಯ ಶಿಕ್ಷಣ ಸಂಸ್ಥೆಯಲ್ಲಿ ಓದುವುದು, ಅಲ್ಲಿ ಟಾಪರ್‌ ಆಗಿ ಐದಂಕಿ ಸಂಬಳ ಪಡೆಯುವ ಉದ್ಯೋಗ ಹಿಡಿಯುವುದು ಬಹುತೇಕ ಯುವಕ-ಯುವತಿಯರ ಕನಸಾಗಿರುತ್ತದೆ. ಅದರಲ್ಲೂ, ದೇಶದಲ್ಲಿ ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿ, ಬಹುರಾಷ್ಟ್ರೀಯ ಕಂಪನಿಗಳ ಸ್ಥಾಪನೆ ಹಿನ್ನೆಲೆಯಲ್ಲಿ ಐದರಿಂದ ಆರಂಕಿ ಸಂಬಳ ಪಡೆಯುವುದು ಹೆಚ್ಚಾಗಿದೆ. ಹಾಗಾಗಿ, ಯುವಕರು ಇಂತಹ ಕನಸು ಕಾಣುತ್ತಾರೆ. ಆ ಮೂಲಕ ಜೀವನದಲ್ಲಿ ಸೆಟಲ್‌ ಆಗಲು ಬಯಸುತ್ತಾರೆ. ಆದರೆ, ಐಐಟಿಯಲ್ಲಿ ಟಾಪರ್‌ ಆಗಿ, ಕೈತುಂಬ ಸಂಬಳ ಬರುತ್ತಿದ್ದ ಕೆಲಸ ಹಿಡಿದು, ಆದರೆ, ಆ ಕೆಲಸವನ್ನೂ ಬಿಟ್ಟು ಯಶಸ್ವಿಯಾಗಿ (Success Story) ಉದ್ಯಮ ನಡೆಸುತ್ತಿರುವ ನೇಹಾ ಸಿಂಗ್‌‌ (Neha Singh) ಎಂಬ ದಿಟ್ಟ ಯುವತಿ ಮಾದರಿ ಎನಿಸುತ್ತಾರೆ.

ಐಐಟಿ ಬಾಂಬೆಯಲ್ಲಿ ಅಧ್ಯಯನ ಮಾಡಿದ ನೇಹಾ ಸಿಂಗ್‌ ಟಾಪರ್‌ ಆಗಿ ಹೊರಹೊಮ್ಮಿದರು. ವಿದ್ಯೆಯಲ್ಲಿ ಮುಂದಿರುವ ಜತೆಗೆ ಚಾಣಾಕ್ಷತನವೂ ಆಕೆಯಲ್ಲಿದ್ದ ಕಾರಣ ಬಹುರಾಷ್ಟ್ರೀಯ ಕಂಪನಿಯು ಅವರನ್ನು ಕೈಬೀಸಿ ಕರೆಯಿತು. ಆದರೆ, ನಿತ್ಯ ಅದೇ ಕೆಲಸ ಮಾಡುವುದು, ಮನೆ ಬಂದು ಮಲಗುವುದು, ಮತ್ತೆ ಎದ್ದು ಕಚೇರಿಗೆ ಹೋಗುವುದರಲ್ಲಿ ಆಸಕ್ತಿ ಕಳೆದುಕೊಂಡ ಅವರು 2013ರಲ್ಲಿ Tracxn ಎಂಬ ಡೇಟಾ ಟ್ರ್ಯಾಕಿಂಗ್‌ ಕಂಪನಿ ಶುರು ಮಾಡಿದರು. ಅಲ್ಲಿಂದ ನೇಹಾ ಸಿಂಗ್‌ ಹಿಂತಿರುಗಿ ನೋಡಲಿಲ್ಲ.

ರತನ್‌ ಟಾಟಾರಿಂದ ಹೂಡಿಕೆ ಸೆಳೆದ ನೇಹಾ

ಓದು, ಅಧ್ಯಯನ, ಕೆಲಸ ಮಾಡುವ ಮನೋಭಾವ, ಚಾಣಾಕ್ಷತನವನ್ನು ಮೈಗೂಡಿಸಿಕೊಂಡು ಕಂಪನಿ ಶುರು ಮಾಡಿದ ನೇಹಾ ಸಿಂಗ್‌ ಜೀವನದಲ್ಲಿ 10 ವರ್ಷದಲ್ಲಿ ಮಹತ್ತರ ಬದಲಾವಣೆಯಾಗಿದೆ. ಇವರ ಕಂಪನಿಯಲ್ಲಿ ರತನ್‌ ಟಾಟಾ, ಫ್ಲಿಪ್‌ ಕಾರ್ಟ್‌ ಸಂಸ್ಥಾಪಕರಾದ ಸಚಿನ್‌ ಹಾಗೂ ಬಿನ್ನಿ ಬನ್ಸಾಲ್‌ ಅವರು ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದ್ದಾರೆ. ಈಗ ನೇಹಾ ಸಿಂಗ್‌ ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ.

ಇದನ್ನೂ ಓದಿ: UPSC Result 2022: ಯುಪಿಎಸ್ಸಿ ಪಾಸಾದವರಿಗೆ ಮೋದಿ ಅಭಿನಂದನೆ; ತೇರ್ಗಡೆ ಆಗದಿರುವವರಿಗೂ ಸಂದೇಶ

ಪತಿ ಅಭಿಷೇಕ್‌ ಗೋಯಲ್‌ ಸಹಕಾರದೊಂದಿಗೆ ನೇಹಾ ಸಿಂಗ್‌ ಸ್ಥಾಪಿಸಿದ ಉದ್ಯಮದ ವಹಿವಾಟು 100 ಕೋಟಿ ರೂಪಾಯಿ ದಾಟಿದೆ. ನೇಹಾ ಸಿಂಗ್‌ ಈಗ ಸುಮಾರು 25 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಒಡತಿಯಾಗಿದ್ದಾರೆ. ಒಟ್ಟಿನಲ್ಲಿ, ಸಂಬಳ ಬರುವ ಕೆಲಸ ಹಿಡಿಯುವುದೊಂದೇ ಗುರಿ ಅಲ್ಲ, ಜೀವನದಲ್ಲಿ ನಂಬಿಕೆ, ಆತ್ಮವಿಶ್ವಾಸ, ಶ್ರಮವೊಂದಿದ್ದರೆ ಹೆಣ್ಣುಮಕ್ಕಳು ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ನೇಹಾ ಸಿಂಗ್‌ ನಿದರ್ಶನವಾಗಿದ್ದಾರೆ.

Exit mobile version