Site icon Vistara News

PM Modi Speech In Rajya Sabha: ನೆಹರು, ಇಂದಿರಾ, ಖರ್ಗೆ, ಅಭಿವೃದ್ಧಿ; ಮೇಲ್ಮನೆಯಲ್ಲಿ ಮೋದಿ ಮಾತಿನ ಚಾಟಿ

PM Modi Speech

#image_title

ನವದೆಹಲಿ: ಲೋಕಸಭೆಯಲ್ಲಿ ಬುಧವಾರ (ಜನವರಿ ೮) ಗೌತಮ್‌ ಅದಾನಿ, ರಾಹುಲ್‌ ಗಾಂಧಿ ಅವರ ಹೆಸರನ್ನೇ ಉಲ್ಲೇಖಿಸದೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳ ವಿರುದ್ಧ ಚಾಟಿ ಬೀಸಿದ್ದರು. ಆದರೆ, ಗುರುವಾರ (ಜನವರಿ ೯) ರಾಜ್ಯಸಭೆಯಲ್ಲಿ (PM Modi Speech In Rajya Sabha) ಜವಾಹರ ಲಾಲ್‌ ನೆಹರು, ಇಂದಿರಾ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಸ್ತಾಪಿಸಿಯೇ ಮೋದಿ ಅವರು ಪ್ರತಿಪಕ್ಷಗಳಿಗೆ ಚಾಟಿಯೇಟು ನೀಡಿದರು.

ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ದೇಶದ ಅಭಿವೃದ್ಧಿ, ಜನರಿಗೆ ನೀಡಿದ ಮೂಲ ಸೌಕರ್ಯಗಳು, ಯೋಜನೆಗಳನ್ನು ತಿಳಿಸುವ ಜತೆಗೆ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಅಂಕಿ-ಅಂಶಗಳನ್ನು ನೀಡಿ ಬಡವರಿಗೆ ನೀಡಿದ ಯೋಜನೆಗಳ ಮಾಹಿತಿ ನೀಡಿದರೆ, ನೆಹರು ಅವರ ಹೆಸರು ಹೇಳಲು ಕಾಂಗ್ರೆಸ್‌ಗೇಕೆ ಹಿಂಜರಿಕೆ ಎಂದು ಪ್ರಶ್ನಿಸಿದರು. ಇಂದಿರಾ ಗಾಂಧಿ ಅವರು ಹೇಗೆ ಚುನಾಯಿತ ಸರ್ಕಾರಗಳ ವಿರುದ್ಧ ಗುರಾಣಿ ಬಳಸಿದರು, ಕರ್ನಾಟಕಕ್ಕೆ ಹೋದರೆ ಖರ್ಗೆ ಅವರು ನನ್ನನ್ನು ಟೀಕಿಸುತ್ತಾರೆ… ಹೀಗೆ ಹಲವು ವಿಷಯಗಳನ್ನು ಪ್ರಸ್ತಾಪಿಸಿ ಪ್ರತಿಪಕ್ಷಗಳ ನಾಯಕರ ಬಾಯಿ ಮುಚ್ಚಿಸಿದರು.

ನೆಹರು ಶ್ರೇಷ್ಠರಾದರೆ ಅವರ ಹೆಸರನ್ನೇಕೆ ಬಳಸುತ್ತಿಲ್ಲ

“ಒಂದು ವೇಳೆ ಜವಾಹರ್ ಲಾಲ್ ನೆಹರು ಅವರು ಅಷ್ಟು ದೊಡ್ಡ ವ್ಯಕ್ತಿಯೇ ಆಗಿದ್ದರೆ, ನೆಹರು ಅಡ್ಡಹೆಸರನ್ನು ಅವರ ಕುಟುಂಬವೇಕೆ ಬಳಸುತ್ತಿಲ್ಲ” ಎಂದು ಪ್ರಧಾನಿ ಪ್ರಶ್ನಿಸಿದರು. “ದೇಶದಲ್ಲಿ ನೆಹರು ಮತ್ತ ಗಾಂಧಿ ಹೆಸರಿನಲ್ಲಿ 600ಕ್ಕೂ ಹೆಚ್ಚು ಯೋಜನೆಗಳಿವೆ. ಆದರೂ, ಕುಟುಂಬದವರು ನೆಹರು ಹೆಸರನ್ನು ಬಳಸುತ್ತಿಲ್ಲ. ನಾವು 60 ವರ್ಷಗಳಿಂದ ಏನೆಲ್ಲ ಕೆಲಸ ಮಾಡಿದ್ದೇವೆ. ಅದರ ಕ್ರೆಡಿಟ್ಅ​ನ್ನು ಪ್ರಧಾನಿ ಮೋದಿ ತೆಗೆದುಕೊಳ್ಳುತ್ತಿದ್ದಾರೆ ಎಂದೂ ಮಲ್ಲಿಕಾರ್ಜುನ್ ಖರ್ಗೆಯವರು ಹೇಳಿದ್ದಾರೆ. ನಾನು 2014ರಲ್ಲಿ ನಾನು ನೋಡಿದ್ದಾಗ ಎಲ್ಲ ಕಡೆ ಗುಂಡಿಗಳೆ ಬಿದ್ದಿದ್ದವು. ಪ್ರಪಂಚದ ಸಣ್ಣ ಸಣ್ಣ ದೇಶಗಳು ಉತ್ತುಂಗಕ್ಕೆ ಏರುತ್ತಿದ್ದರೆ, ಭಾರತ ಇಲ್ಲೇ ಉಳಿದುಕೊಂಡಿತ್ತು. ಪಂಚಾಯತ್​​ನಿಂದ ಮೇಲಿನವರೆಗೆ ಎಲ್ಲರೂ ಕಾಂಗ್ರೆಸ್ಸಿಗರಿಗೆ ಜೀ ಹುಜೂರ್ ಎನ್ನುತ್ತಿದ್ದರು. ಟೋಕನ್​ ತೆಗೆದುಕೊಳ್ಳುವುರು ಕೆಲಸ ಮಾಡುವುದು ಆಗಿತ್ತು. ನಾವು ಒಂದೊಂದೇ ವಿಚಾರವನ್ನು ಇಟ್ಟುಕೊಂಡು ಶಾಶ್ವತ ಪರಿಹಾರ ಹುಡುಕುತ್ತಿದ್ದೇವೆ. ನಾವು ಬಂದಮೇಲೆ ಮೂರು ಕೋಟಿ ಮನೆಗೆ ನಲ್ಲಿ ಮೂಲಕ ನೀರು ನೀಡಿದ್ದೇವೆ” ಎಂದು ಮೋದಿ ಹೇಳಿದರು.

ಇಂದಿರಾ ಗಾಂಧಿಯಿಂದ 356ನೇ ವಿಧಿ 50 ಬಾರಿ ಬಳಕೆ

ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್, ಸಂವಿಧಾನದ 356 ಆರ್ಟಿಕಲ್ ಬಳಸಿಕೊಂಡು 90 ರಾಜ್ಯ ಸರ್ಕಾರಗಳನ್ನು ವಿಸರ್ಜಿಸಿತು. ಸಂವಿಧಾನದ ಈ ವಿಧಿಯನ್ನು ಇಂದಿರಾ ಗಾಂಧಿ ಅವರು 50 ಬಾರಿ ಬಳಸಿದ್ದಾರೆಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಪಕ್ಷವನ್ನು ತಿವಿದರು.

ಫಲಾನುಭವಿಗಳಿಗೆ ಯೋಜನೆ ತಲುಪಿಸುವುದೇ ನಿಜವಾದ ಜಾತ್ಯತೀತ

ಅರ್ಹ ಎಲ್ಲ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವುದೇ ನಿಜವಾದ ಜಾತ್ಯತೀತ ಎಂದು ಮೋದಿ ಪ್ರತಿಪಾದಿಸಿದರು. “ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಗಳಿಂದ 3 ಕೋಟಿ ಬುಡಕಟ್ಟು ಜನರಿಗೆ ಲಾಭವಾಗಿದೆ. ನಾವು ದೇಶದಲ್ಲಿ 110 ಮಹತ್ವಾಕಾಂಕ್ಷೆಯ ಜಿಲ್ಲೆಗಳನ್ನು ಗುರುತಿಸಿದ್ದೇವೆ. ನಿರಂತರ ಗಮನ ಮತ್ತು ಕಾರ್ಯಕ್ಷಮತೆಯ ವಿಮರ್ಶೆಗಳಿಂದಾಗಿ ಈ ಜಿಲ್ಲೆಗಳಲ್ಲಿ ಶಿಕ್ಷಣ, ಮೂಲಸೌಕರ್ಯ ಮತ್ತು ಆರೋಗ್ಯ ಕ್ಷೇತ್ರಗಳನ್ನು ಗಣನೀಯವಾಗಿ ಸುಧಾರಿಸುತ್ತಿದ್ದೇವೆ. ನಮ್ಮ ಈ ಪ್ರಯತ್ನದಿಂದಾಗಿ 3 ಕೋಟಿಗೂ ಹೆಚ್ಚು ಬುಡಕಟ್ಟು ಜನಾಂಗದವರಿಗೆ ಲಾಭವಾಗಿದೆ” ಎಂದರು. ”ನಾಲ್ಕು ದಶಕಗಳ ಹಿಂದೆಯೇ ಕಾಂಗ್ರೆಸ್‌ ಗರೀಬಿ ಹಠಾವೋ ಘೋಷಣೆ ಮಾಡಿತು. ಆದರೆ, ಬಡವರಿಗಾಗಿ ಸ್ವಲ್ಪವೂ ಕೆಲಸ ಮಾಡಲಿಲ್ಲ” ಎಂದು ಟೀಕಿಸಿದರು.

ಜನ ಆಯ್ಕೆ ಮಾಡಿದ್ದು ಮತ್ತೊಬ್ಬ ದಲಿತನನ್ನೇ

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಸೋಲನುಭವಿಸಿದ್ದಕ್ಕೆ, ದಲಿತರನ್ನು ಸೋಲಿಸಿದರು, ದಲಿತರಿಗೆ ಅನ್ಯಾಯವಾಯಿತು ಎಂದು ಮಾಡುತ್ತಿದ್ದ ಟೀಕೆಗೆ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿಯೇ ಪ್ರತ್ಯುತ್ತರ ನೀಡಿದರು. “ಖರ್ಗೆ ಅವರು ಸೋತಿದ್ದಕ್ಕೆ ದಲಿತರನ್ನು ಸೋಲಿಸಿದರು ಎನ್ನುವುದು ಸರಿಯಲ್ಲ. ಅಲ್ಲಿನ ಜನ ಆಯ್ಕೆ ಮಾಡಿದ್ದು ಮತ್ತೊಬ್ಬ ದಲಿತನನ್ನೇ” ಎಂದು ಹೇಳಿದರು.

ಖರ್ಗೆ ನಾಡಲ್ಲಿ 1.7 ಕೋಟಿ ಜನ ಧನ್‌ ಖಾತೆ ಓಪನ್‌

“ನಾನು ಕರ್ನಾಟಕಕ್ಕೆ ತೆರಳಿದಾಗಲೆಲ್ಲ ಮಲ್ಲಿಕಾರ್ಜುನ ಖರ್ಗೆ ಅವರು ಟೀಕಿಸುತ್ತಾರೆ. ಕಲಬುರಗಿಗೆ ಭೇಟಿ ನೀಡಿದಾಗಲೂ ಅವರು ದೂರುತ್ತಾರೆ. ಆದರೆ, ಖರ್ಗೆ ನಾಡಾದ ಕರ್ನಾಟಕದಲ್ಲಿ ೧.೭ ಕೋಟಿ ಜನ ಧನ್‌ ಖಾತೆಗಳನ್ನು ತರೆಯಲಾಗಿದೆ. ಅಷ್ಟೇ ಏಕೆ, ಕಲಬುರಗಿಯಲ್ಲೇ ೮ ಲಕ್ಷ ಖಾತೆಗಳನ್ನು ತೆರೆಯಲಾಗಿದೆ. ಜನರ ಅಭಿವೃದ್ಧಿಯಾದರೆ ತುಂಬ ಜನರಿಗೆ ಖುಷಿಯಾಗುತ್ತದೆ. ಆದರೆ, ಕೆಲವರಿಗೆ ಅದೇ ನೋವುಂಟು ಮಾಡುತ್ತದೆ” ಎಂದು ಮೋದಿ ಕಟಕಿಯಾಡಿದರು.

ಕೆಸರೆರಚಿದಷ್ಟು ಕಮಲ ಅರಳುತ್ತಲೇ ಇರುತ್ತದೆ

“ಸದನದಲ್ಲಿರುವ ಸದಸ್ಯರಿಗೆ ಒಂದು ಮಾತು ಹೇಳಲು ಇಷ್ಟಪಡುತ್ತೇನೆ. ನಮ್ಮನ್ನು ಎಷ್ಟು ಬೇಕಾದರೂ ಟೀಕಿಸಿ, ಎಷ್ಟಾದರೂ ಹೀಯಾಳಿಸಿ. ಆದರೆ, ನೀವು ಕೆಸರೆರಚಿದಷ್ಟೂ ಕಮಲ ಅರಳುತ್ತದೆ ಎಂದಷ್ಟೇ ಹೇಳಲು ಇಷ್ಟಪಡುತ್ತೇನೆ” ಎಂದು ಹೇಳುವ ಮೂಲಕ, ನೀವು ಎಷ್ಟಾದರೂ ಟೀಕಿಸಿ, ಜನಬೆಂಬಲ ನಮ್ಮ ಪರವಾಗಿದೆ ಎಂಬುದನ್ನು ಮೋದಿ ಸೂಚ್ಯವಾಗಿ ತಿಳಿಸಿದರು.

ಮೋದಿ ಅದಾನಿ ಭಾಯಿ ಭಾಯಿ ಘೋಷಣೆ

ಗೌತಮ್‌ ಅದಾನಿ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರಿಸು-ಮುರಿಸು ತಂದಿವೆ. ರಾಜ್ಯಸಭೆಯಲ್ಲಿ ನರೇಂದ್ರ ಮೋದಿ ಅವರು ಭಾಷಣ ಆರಂಭಿಸುತ್ತಲೇ ಪ್ರತಿಪಕ್ಷಗಳ ಸದಸ್ಯರು, “ಮೋದಿ ಅದಾನಿ ಭಾಯಿ ಭಾಯಿ” ಎಂದು ಘೊಷಣೆ ಕೂಗುವ ಮೂಲಕ ಅದಾನಿ ಪ್ರಕರಣವನ್ನು ಮೇಲ್ಮನೆಯಲ್ಲೂ ಉಲ್ಲೇಖಿಸಿವೆ.

ನವದೆಹಲಿ: Modi Adani Bhai Bhai: ಮೋದಿ ಅದಾನಿ ಭಾಯಿ ಭಾಯಿ, ಮೇಲ್ಮನೆಯಲ್ಲಿ ಮೋದಿಗೆ ತಿರುಗೇಟು ಕೊಟ್ಟ ಪ್ರತಿಪಕ್ಷಗಳು

Exit mobile version