ಬೆಂಗಳೂರು: ಹಿಂದಿನ ವರ್ಷಕ್ಕೆ (2022) ಹೋಲಿಸಿದರೆ ಪ್ರಸಕ್ತ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ (2023) ಅದಾನಿ ಪವರ್ ಕಂಪನಿಯ (Adani Power) ಏಕೀಕೃತ ಲಾಭವು ಒಂಬತ್ತು ಪಟ್ಟು ಏರಿಕೆಯಾಗಿ 6,594 ಕೋಟಿ ರೂ.ಗೆ ತಲುಪಿದೆ. 2023- 2024ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ (ಜುಲೈ-ಸೆಪ್ಟೆಂಬರ್) ತೆರಿಗೆ ನಂತರದ ಏಕೀಕೃತ ಲಾಭವು ಶೇಕಡಾ 848ರಷ್ಟು ಏರಿಕೆಯಾಗಿ 6,594 ಕೋಟಿ ರೂ.ಗೆ ತಲುಪಿದೆ. ಸುಧಾರಿತ EBITDA . ವೃದ್ಧಿಗೊಂಡಿರುವ ಏಕ ಆದಾಯ ಮತ್ತು ಮುಂದೂಡಲ್ಪಟ್ಟ ತೆರಿಗೆ ಆಸ್ತಿಯ ಮಾನ್ಯತೆಯಿಂದಾಗಿ ಗಳಿಕೆ ಹೆಚ್ಚಾಗಿದೆ ಎಂದು ಕಂಪನಿಯ ಹೇಳಿಕೆ ತಿಳಿಸಿದೆ.
ಹಾಲಿ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಒಟ್ಟು ಆದಾಯವು ಶೇಕಡಾ 61 ರಷ್ಟು ಏರಿಕೆಯಾಗಿ 12,155 ಕೋಟಿ ರೂ.ಗೆ ತಲುಪಿದೆ. ಇದು ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ 7,534 ಕೋಟಿ ರೂ.ಗೆ ಹೋಲಿಸಿದರೆ ದೊಡ್ಡ ಪ್ರಮಾಣದಲ್ಲಿ ವೃದ್ಧಿಯಾಗಿದೆ. ಗೊಡ್ಡಾ ವಿದ್ಯುತ್ ಸ್ಥಾವರದ ಕೊಡುಗೆ ಮತ್ತು ಹೆಚ್ಚಿನ ವಿದ್ಯುತ್ ಮಾರಾಟದಿಂದಾಗಿ ಆದಾಯದಲ್ಲಿ ಈ ಹೆಚ್ಚಳವಾಗಿದೆ ಎಂದು ಸಂಸ್ಥೆಯು ವಿವರಿಸಿದೆ. ಕಲ್ಲಿದ್ದಲು ಆಮದು ಬೆಲೆಗಳ ಇಳಿಕೆ, ಮುಂದ್ರಾ ಮತ್ತು ಉಡುಪಿ ಸ್ಥಾವರಗಳಲ್ಲಿ ಆಗಿರುವ ಹೊಸ ವಿದ್ಯುತ್ ಖರೀದಿ ಒಪ್ಪಂದಗಳ (ಪಿಪಿಎ) ಹಿನ್ನೆಲೆಯಲ್ಲಿ ಹೆಚ್ಚಿನ ಲಾಭ ಗಳಿಸಲಾಗಿದೆ ಎಂದು ಕಂಪನಿಯು ಮಾಹಿತಿ ನೀಡಿದೆ.
ಕಲ್ಲಿದ್ದಲು ಬೆಲೆ ಟ್ರ್ಯಾಕ್
ಸುಂಕಗಳನ್ನು ಪಿಪಿಎಗಳ ಅಡಿಯಲ್ಲಿ ಅನುಮೋದಿತ ನಿಯಂತ್ರಕ ಪ್ರಕ್ರಿಯೆಗಳ ಪ್ರಕಾರ ನಿರ್ಧರಿಸಲಾಗುತ್ತದೆ ಮತ್ತು ಅಂತಾರಾಷ್ಟ್ರೀಯ ಕಲ್ಲಿದ್ದಲು ಬೆಲೆಗಳನ್ನು ಟ್ರ್ಯಾಕ್ ಮಾಡುತ್ತಿದ್ದೇವೆ ಎಂದು ಕಂಪನಿ ಹೇಳಿದೆ. ಸುಧಾರಿತ ವಿದ್ಯುತ್ ಬೇಡಿಕೆ ಮತ್ತು ಹೆಚ್ಚಿನ ಕಾರ್ಯಾಚರಣಾ ಸಾಮರ್ಥ್ಯದಿಂದಾಗಿ 2024ರ ಎರಡನೇ ತ್ರೈಮಾಸಿಕದಲ್ಲಿ ಏಕೀಕೃತ ವಿದ್ಯುತ್ ಮಾರಾಟ ಪ್ರಮಾಣವು 18.1 ಬಿಲಿಯನ್ ಯುನಿಟ್ (ಬಿಯು) ಆಗಿದೆ. ಒಂದು ವರ್ಷದ ಹಿಂದಿನ 11 ಬಿಯುಗೆ ಹೋಲಿಸಿದರೆ ಶೇಕಡಾ 65 ರಷ್ಟು ಹೆಚ್ಚಾಗಿದೆ ಎಂದು ಅದು ಅದಾನಿ ಪವರ್ ಹೇಳಿದೆ.
ಹೆಚ್ಚಿನ ಮಾರಾಟ ಪ್ರಮಾಣ ಕಡಿಮೆ ಇಂಧನ ವೆಚ್ಚ ಮತ್ತು ಹೆಚ್ಚಿನ ವ್ಯಾಪಾರಿ ಸುಂಕಗಳಿಂದಾಗಿ 2024 ರ ಎರಡನೇ ತ್ರೈಮಾಸಿಕದಲ್ಲಿ ಇಬಿಐಟಿಡಿಎ ಶೇಕಡಾ 202 ರಷ್ಟು ಏರಿಕೆಯಾಗಿ 4,336 ಕೋಟಿ ರೂ.ಗೆ ತಲುಪಿದೆ ಎಂದು ಹೇಳಿದೆ. ಅಂಗಸಂಸ್ಥೆ ಅದಾನಿ ಪವರ್ (ಜಾರ್ಖಂಡ್) ಲಿಮಿಟೆಡ್ (ಎಪಿಜೆಎಲ್) 1,600 ಮೆಗಾವ್ಯಾಟ್ ಗೊಡ್ಡಾ ಅಲ್ಟ್ರಾ-ಸೂಪರ್ ಕ್ರಿಟಿಕಲ್ ಥರ್ಮಲ್ ಪವರ್ ಪ್ಲಾಂಟ್ ಅನ್ನು 2023-24ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜೂನ್ 2023) ಸ್ಥಾಪಿಸಲಾಗಿದೆ.
ಕಾರ್ಯಕ್ಷಮತೆ ಸುಧಾರಣೆ
ಈ ತ್ರೈಮಾಸಿಕದಲ್ಲಿ, ಮುಂದ್ರಾ, ಉಡುಪಿ, ರಾಯ್ಪುರ ಮತ್ತು ಮಹಾನ್ ಸ್ಥಾವರಗಳಲ್ಲಿ ಕಾರ್ಯಕ್ಷಮತೆ ಸುಧಾರಿಸಿದೆ, ಜೊತೆಗೆ ಗೊಡ್ಡಾದ ಪ್ಲ್ಯಾಂಟ್ನ ಕೊಡುಗೆಯೂ ಹೆಚ್ಚಿದೆ. ಅಲ್ಪಾವಧಿಯಲ್ಲಿ ತನ್ನ ಕಾರ್ಯಾಚರಣೆ ತೃಪ್ತಿಕರವಾಗಿದೆ ಎಂದು ಕಂಪನಿ ಹೇಳಿದೆ. ಸೆಪ್ಟೆಂಬರ್ 30, 2023 ಕ್ಕೆ ಕೊನೆಗೊಂಡ ಆರು ತಿಂಗಳಲ್ಲಿ, ಅದಾನಿ ಪವರ್ ಮತ್ತು ಎಪಿಜೆಎಲ್ ಸೇರಿದಂತೆ ಅದರ ಅಂಗಸಂಸ್ಥೆಗಳು ಸರಾಸರಿ ಪಿಎಲ್ಎಫ್ (ಪ್ಲಾಂಟ್ ಲೋಡ್ ಫ್ಯಾಕ್ಟರ್) ಅಥವಾ ಸಾಮರ್ಥ್ಯದ ಬಳಕೆಯನ್ನು ಶೇಕಡಾ 59.2ರಷ್ಟು ಸಾಧಿಸಿದೆ.
ಅದಾನಿ ಪವರ್ ಸಿಇಒ ಎಸ್ ಬಿ ಖ್ಯಾಲಿಯಾ ಹೇಳಿಕೆ ಬಿಡುಗಡೆ ಮಾಡಿದ್ದು. ಭಾರತೀಯ ವಿದ್ಯುತ್ ಮಾರುಕಟ್ಟೆಯಲ್ಲಿ ಅವಕಾಶಗಳು ಹೆಚ್ಚಾದಂತೆ, ಪ್ರಮುಖ ಖಾಸಗಿ ವಿದ್ಯುತ್ ಉತ್ಪಾದಕರಾಗಿ ನಮ್ಮ ಕೊಡುಗೆಯನ್ನು ಹೆಚ್ಚಿಸಲು ಮತ್ತು ರಾಷ್ಟ್ರದ ಬೆಳೆಯುತ್ತಿರುವ ಇಂಧನ ಅಗತ್ಯಗಳನ್ನು ಪೂರೈಸಲು ನಾವು ಸಜ್ಜಾಗಿದ್ದೇವೆ” ಎಂದು ಹೇಳಿದರು.
ಅದಾನಿ ಗ್ರೂಪ್ನ ಭಾಗವಾಗಿರುವ ಅದಾನಿ ಪವರ್ ಭಾರತದ ಅತಿದೊಡ್ಡ ಖಾಸಗಿ ಥರ್ಮಲ್ ವಿದ್ಯುತ್ ಉತ್ಪಾದಕ ಕಂಪನಿಯಾಗಿದೆ. ಕಂಪನಿಯು ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ರಾಜಸ್ಥಾನ, ಛತ್ತೀಸ್ಗಢ , ಮಧ್ಯಪ್ರದೇಶ ಮತ್ತು ಜಾರ್ಖಂಡ್್ನ ಎಂಟು ವಿದ್ಯುತ್ ಸ್ಥಾವರಗಳಲ್ಲಿ 15,210 ಮೆಗಾವ್ಯಾಟ್ ಸ್ಥಾಪಿತ ಉಷ್ಣ ವಿದ್ಯುತ್ ಸಾಮರ್ಥ್ಯವನ್ನು ಹೊಂದಿದೆ.