Site icon Vistara News

Corona Virus : ಬ್ರಿಟನ್​ನಲ್ಲಿ ಅಪಾಯಕಾರಿಯಾಗಿ ಪರಿಣಮಿಸಿದೆ ಹೊಸ ಕೋವಿಡ್ ತಳಿ ಎರಿಸ್

Covid 19

ನವ ದೆಹಲಿ: ಕೊರೊನಾ ವೈರಸ್​ (Corona Virus) ಮತ್ತೆ ಸುದ್ದಿಯಲ್ಲಿದೆ. ಮತ್ತೆ ಜನರನ್ನು ಬಾಧಿಸಲಿದೆಯೇ ಎಂಬ ಆತಂಕವೂ ಶುರವಾಗಿದೆ. ಅತ್ಯಂತ ವೇಗವಾಗಿ ಹರಡುತ್ತಿದ್ದ ಒಮೈಕ್ರಾನ್​ನಿಂದ ರೂಪಾಂತರಗೊಂಡಿರುವ ತಳಿಯೊಂದು ಬ್ರಿಟನ್​ಗೆ ಲಗ್ಗೆ ಇಟ್ಟಿದ್ದು ಆತಂಕ ಸೃಷ್ಟಿಸಿದೆ. ಹೊಸ ರೂಪಾಂತಕ್ಕೆ ಇಜಿ .5.1 ಎಂದು ಕರೆಯಲಾಗುತ್ತಿದ್ದು ಬ್ರಿಟನ್​ನ ಆರೋಗ್ಯ ಅಧಿಕಾರಿಗಳಿಗೆ ಆತಂಕ ತಂದೊಡ್ಡಿದೆ. ಎರಿಸ್ ಎಂಬ ಉಪನಾಮದಿಂದ ಕರೆಯುವ ಈ ಇಜಿ.5.1 ಅನ್ನು ಕಳೆದ ತಿಂಗಳು ಮೊದಲ ಬಾರಿಗೆ ಪತ್ತೆ ಮಾಡಲಾಗಿತ್ತು. ಇದೀಗ ದೇಶದಲ್ಲಿ ವೇಗವಾಗಿ ಹರಡುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ಎರಿಸ್ ಎಂಬ ಅಡ್ಡಹೆಸರು ಹೊಂದಿರುವ ಇಜಿ .5.1 ಬ್ರಿಟನ್​ನಲ್ಲಿ ಹೊಸದಾಗಿ ಆಸ್ಪತ್ರೆಗೆ ದಾಖಲಾಗುವ ಏಳು ರೋಗಿಗಳಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳುತ್ತಿದೆ. ಯುಕೆ ಆರೋಗ್ಯ ಭದ್ರತಾ ಸಂಸ್ಥೆ (ಯುಕೆಎಚ್ಎಸ್ಎ) ತಿಳಿಸಿದೆ. ಇತ್ತೀಚಿನ ಮಾಹಿತಿ ಪ್ರಕಾರ ಒಟ್ಟು ಪ್ರಕರಣಗಳಲ್ಲಿ ಇದು ಈಗ ಶೇಕಾಡ 14.6 ಪಾಲು ಪಡೆದಿದೆ. ಈ ಮೂಲಕ ಬ್ರಿಟನ್​ನಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿದೆ ಎಂದು ಸ್ಕೈ ನ್ಯೂಸ್ ವರದಿ ಮಾಡಿದೆ.

“ನಮ್ಮ ಹಿಂದಿನ ವರದಿಗೆ ಹೋಲಿಸಿದರೆ ಈ ವಾರ ಕೋವಿಡ್ -19 ಪ್ರಕರಣಗಳ ಪ್ರಮಾಣವು ಹೆಚ್ಚಾಗುತ್ತಲೇ ಇದೆ. ರೆಸ್ಪಿರೇಟರಿ ಡೇಟಾಮಾರ್ಟ್ ಸಿಸ್ಟಮ್ ಮೂಲಕ ವರದಿಯಾದ 4,396 ಉಸಿರಾಟದ ಮಾದರಿಗಳಲ್ಲಿ 5.4% ಅನ್ನು ಕೋವಿಡ್ -19 ಎಂದು ಗುರುತಿಸಲಾಗಿದೆ. ಇದು ಹಿಂದಿನ ವರದಿಯ 4,403 ಕ್ಕೆ ಹೋಲಿಸಿದರೆ 3.7% ರಷ್ಟು ಹೆಚ್ಚಳ ಎಂದು ಎಂದು ಯುಕೆಎಚ್ಎಸ್ಎ ವರದಿಯಲ್ಲಿ ತಿಳಿಸಿದೆ.

ಈ ರೂಪಾಂತರವು ಏಷ್ಯಾದ ದೇಶಗಳಿಗೂ ಹರಡಿದೆ. ಬ್ರಿಟ್​ನಲ್ಲಿ ಅದರ ಹರಡುವಿಕೆ ದಾಖಲಾದ ನಂತರ ಜುಲೈ 31 ರಂದು ಎರಿಸ್ ಅನ್ನು ವೇರಿಯೆಂಟ್​ ಎಂದು ವರ್ಗೀಕರಿಸಲಾಗಿದೆ.

ಇದನ್ನೂ ಓದಿ : Viral News: ಎಕಾನಮಿ ಸೀಟನ್ನು ವಿಐಪಿ ಸೀಟಾಗಿ ಬದಲಿಸಿಕೊಂಡ ಪ್ರಯಾಣಿಕ! ಹೇಗಿದೆ ನೋಡಿ ಈ ಐಡಿಯಾ

ಹೆಚ್ಚುತ್ತಿರುವ ಜೀನೋಮ್​​ಗಳ ಸಂಖ್ಯೆ ಮತ್ತು ಅಂತಾರರಾಷ್ಟ್ರೀಯ ಮಟ್ಟದಲ್ಲಿ ನಿರಂತರ ಹರಡುತ್ತಿರುವ ಕಾರಣ ಇದನ್ನು ಜುಲೈ 31, 2023ರಂದು ವಿ -23 ಜೆಯುಎಲ್ -01 ರೂಪಾಂತರಕ್ಕೆ ಹೆಚ್ಚಿಸಲಾಯಿತು. ಈ ವಂಶಾವಳಿಯನ್ನು ರೂಪಾಂತರವೆಂದು ಘೋಷಿಸುವ ಮೂಲಕ ಮತ್ತಷ್ಟು ಸಂಶೋಧನೆ ಮಾಡಲಾಗುತ್ತಿದೆ.

“ಈ ವಾರದ ವರದಿಯಲ್ಲಿ ನಾವು ಕೋವಿಡ್ -19 ಪ್ರಕರಣಗಳಲ್ಲಿ ಏರಿಕೆಯನ್ನು ನೋಡುತ್ತಿದ್ದೇವೆ. ವಯಸ್ಸಾದವರು ಆಸ್ಪತ್ರೆ ಸೇರುವ ಪ್ರಮಾಣದಲ್ಲಿ ಸಣ್ಣ ಏರಿಕೆ ಕಂಡಿದ್ದೇವೆ. ಆದರೂ ಗಂಭೀರ ಸ್ಥಿತಿ ಮುಟ್ಟಿಲ್ಲ. ರೋಗಿಗಳು ಐಸಿಯು ಸೇರುವ ಪ್ರಕರಣಗೂ ಕಂಡು ಬಂದಿಲ್ಲ. ನಮ್ಮ ಮೇಲ್ವಿಚಾರಣೆ ಮುಂದುವರಿಸುತ್ತೇವೆ ” ಎಂದು ಯುಕೆಎಚ್ಎಸ್ಎ ರೋಗನಿರೋಧಕ ಮುಖ್ಯಸ್ಥ ಡಾ.ಮೇರಿ ರಾಮ್ಸೆ ಈ ಕುರಿತು ಮಾಹಿತಿ ನೀಡಿದ್ದಾರೆ.

“ನಿಯಮಿತವಾಗಿ ಮತ್ತು ಸಂಪೂರ್ಣವಾಗಿ ಕೈ ತೊಳೆಯುವುದು ಕೋವಿಡ್ -19 ಮತ್ತು ಇತರ ದೋಷಗಳು ಮತ್ತು ವೈರಸ್​ಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ನೀವು ಉಸಿರಾಟದ ಕಾಯಿಲೆಯ ಲಕ್ಷಣಗಳನ್ನು ಹೊಂದಿದ್ದರೆ, ಸಾಧ್ಯವಾದಷ್ಟು ಇತರರಿಂದ ದೂರವಿರಿ” ಎಂದು ಅವರು ಸಲಹೆ ನೀಡಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಕೇವಲ ಎರಡು ವಾರಗಳ ಹಿಂದೆ ಇಜಿ .5.1 ರೂಪಾಂತರವನ್ನು ಪತ್ತೆಹಚ್ಚಲು ಪ್ರಾರಂಭಿಸಿತ್ತು. ಡಬ್ಲ್ಯುಎಚ್ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಮಾತನಾಡಿ ಲಸಿಕೆಗಳು ಸೋಂಕಿನಿಂದ ಜನರನ್ನು ಪಾರು ಮಾಡಿದ್ದರೂ ಜನ ಎಚ್ಚರಿಕೆ ಕಳೆದುಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.

ಎರಿಸ್ ರೂಪಾಂತರದ ತ್ವರಿತವಾಗಿ ಹರಡುತ್ತಿರುವ ಕಾರಣ ಬ್ರಿಟನ್​ ಆರೋಗ್ಯ ಇಲಾಖೆ ಆತಂಕ ಎದುರಿಸುತ್ತಿದೆ. ಸೋಂಕು ಹರಡುವುದನ್ನು ಕಡಿಮೆಗೊಳಿಸಲು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

Exit mobile version