ನವದೆಹಲಿ: ದೇಶಕ್ಕೆ ದೇಶವೇ ಕುತೂಹಲದಿಂದ ಕಾಯುತ್ತಿದ್ದ ಲೋಕಸಭೆ ಚುನಾವಣೆ ಫಲಿತಾಂಶವು (Lok Sabha Election 2024) ಪ್ರಕಟವಾಗಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಬಹುಮತ ದೊರೆತಿದೆ. ಹಾಗಾಗಿ, ನರೇಂದ್ರ ಮೋದಿ (Narendra Modi) ಅವರು ದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದರು. “ದೇಶದ ಜನರೇ ಜನಾರ್ದನರು. ಅವರ ತೀರ್ಪನ್ನು ಸ್ವಾಗತಿಸುತ್ತ ಉತ್ತಮ ಆಡಳಿತ ನೀಡುವತ್ತ ಮುಂದೆ ಸಾಗೋಣ. ಮೂರನೇ ಅವಧಿಯಲ್ಲಿ ಹೊಸ ಅಧ್ಯಾಯ ಸೃಷ್ಟಿಸೋಣ” ಎಂದು ನರೇಂದ್ರ ಮೋದಿ ಹೇಳಿದರು.
“ದೇಶದ ನಾಗರಿಕರು ಬಿಜೆಪಿ ಹಾಗೂ ಎನ್‌ಡಿಎ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಇದು ದೇಶದ ಪ್ರಜಾಪ್ರಭುತ್ವದ ಗೆಲುವಾಗಿದೆ. ಇದು ಭಾರತದ ಸಂವಿಧಾನಕ್ಕೆ ಸಿಕ್ಕ ಗೆಲುವಾಗಿದೆ. ಇದು ವಿಕಸಿತ ಭಾರತದ ಉದ್ದೇಶದ ವಿಜಯವಾಗಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಮಂತ್ರದ ಜಯವಾಗಿದೆ. ದೇಶದ 140 ಕೋಟಿ ಜನರ ಗೆಲುವಾಗಿದೆ” ಎಂದು ತಿಳಿಸಿದರು.
Speaking from @BJP4India HQ. https://t.co/x2neIsArbi
— Narendra Modi (@narendramodi) June 4, 2024
“ದೇಶದಲ್ಲಿ ಎನ್‌ಡಿಎ ಸರ್ಕಾರವು ಎರಡು ಅವಧಿಗೆ ಆಡಳಿತ ನಡೆಸಿ, ಮೂರನೇ ಅವಧಿಗೆ ಆಡಳಿತ ನಡೆಸಲು ಸಜ್ಜಾಗಿದೆ. ದೇಶದೆಲ್ಲೆಡೆ ಎನ್‌ಡಿಎಗೆ ಜನರಿಂದ ಉತ್ತಮ ಸ್ಪಂದನೆ, ಬೆಂಬಲ ವ್ಯಕ್ತವಾಗಿದೆ. ಒಡಿಶಾ, ಸಿಕ್ಕಿಂ, ಅರುಣಾಚಲ ಪ್ರದೇಶ, ಆಂಧ್ರಪ್ರದೇಶದಲ್ಲಿ ನಮಗೆ ಭಾರಿ ಬೆಂಬಲ ವ್ಯಕ್ತವಾಗಿದ್ದು, ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಒಡಿಶಾದಲ್ಲಿ ಬಿಜೆಪಿ ಸರ್ಕಾರ ರಚಿಸಲು ಮುಂದಾಗಿದೆ. ಬಿಜೆಪಿಯ ಮುಖ್ಯಮಂತ್ರಿಯು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಲೋಕಸಭೆ ಚುನಾವಣೆಯಲ್ಲೂ ಒಡಿಶಾದಲ್ಲಿ ಹೆಚ್ಚಿನ ಕ್ಷೇತ್ರಗಳು ಸಿಕ್ಕಿವೆ. ಕೇರಳದಲ್ಲೂ ಬಿಜೆಪಿ ಗೆಲುವು ಸಿಕ್ಕಿದೆ. ಕೇರಳದ ಕಾರ್ಯಕರ್ತರು ಬಲಿದಾನ ನೀಡಿದ್ದಾರೆ. ಪೀಳಿಗೆಗಳವರೆಗೆ ಅವರು ಜನರ ಸೇವೆ ಜತೆಗೆ ಸಂಘರ್ಷ ಎದುರಿಸಿದ್ದಾರೆ. ಪೀಳಿಗೆಗಳವರೆಗೆ ಇಂತಹ ಕ್ಷಣಕ್ಕಾಗಿ ಅವರು ಕಾಯುತ್ತಿದ್ದರು. ಈಗ ಅವರು ಕನಸು ನನಸಾಗಿದೆ” ಎಂದು ಹೇಳಿದರು.
“10 ವರ್ಷಕ್ಕೂ ಮೊದಲು ದೇಶವು ಬದಲಾವಣೆ ಬಯಸುತ್ತಿತ್ತು. 2014ರಲ್ಲಿ ನಾಗರಿಕರು ನಿರಾಸೆಯ ಕಡಲಲ್ಲಿ ಮುಳುಗಿದ್ದರು. ಯುವಕರು ತಮ್ಮ ಭವಿಷ್ಯವನ್ನು ನೆನೆದುಕೊಂಡು ಆತಂಕದಲ್ಲಿದ್ದರು. ಬಡವರು ಸಂಕಷ್ಟದಲ್ಲಿದ್ದರು. ಅಂತಹ ಕಾಲಘಟದಲ್ಲಿ ಬಿಜೆಪಿ ಎಂಬ ಆಶಾವಾದವನ್ನು ಜನ ಆಯ್ಕೆ ಮಾಡಿದರು. ನಾವು ಕೂಡ ಕಳೆದ 10 ವರ್ಷಗಳಿಂದ ಪರಿಶ್ರಮ ವಹಿಸಿದೆವು. ಜನರ ಪರವಾಗಿ ಕೆಲಸ ಮಾಡಿದೆವು. ಇದೇ ಕಾರಣಕ್ಕೆ 2019ರಲ್ಲಿ ಜನ ನಮ್ಮನ್ನು ಆಯ್ಕೆ ಮಾಡಿದರು. ಈಗ 2024ರಲ್ಲೂ ಜನರ ಆಶೀರ್ವಾದ ಪಡೆಯಲು ದೇಶದ ಮೂಲೆ ಮೂಲೆ ಸುತ್ತಿದೆ. ಜನರು ಕೂಡ ಮೂರನೇ ಬಾರಿಗೆ ಎನ್‌ಡಿಎಗೆ ಜನರ ಬೆಂಬಲ ಸಿಕ್ಕಿದೆ. ಹಾಗಾಗಿ, ಜನರಿಗೆ ನಾನು ವಿನಮ್ರವಾಗಿ ಧನ್ಯವಾದ ತಿಳಿಸಲು ಬಯಸುತ್ತೇನೆ” ಎಂದರು.
ತಾಯಿಯ ನೆನೆದ ಮೋದಿ
“ನನ್ನ ತಾಯಿ ಅಗಲಿದ ಬಳಿಕ ಇದು ನನ್ನ ಮೊದಲ ಚುನಾವಣೆಯಾಗಿತ್ತು. ಆದರೆ, ದೇಶದ ಮೂಲೆ ಮೂಲೆಯಲ್ಲಿ, ಕೋಟ್ಯಂತರ ತಾಯಂದಿರು ನನ್ನನ್ನು ಮಗನಂತೆ ಸ್ವೀಕರಿಸಿದರು. ಹೆಣ್ಣುಮಕ್ಕಳು ನನಗೆ ಆಶೀರ್ವಾದ ಮಾಡಿದರು. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಮಹಿಳೆಯರು ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡಿದರು. ಇಂತಹ ಅಭೂತಪೂರ್ವ ಬೆಳವಣಿಗೆಯನ್ನು ನಾನು ಎಂದಿಗೂ ಮರೆಯುವುದಿಲ್ಲ. ದೇಶದ ಕೋಟ್ಯಂತರ ಮಾತೆಯರು ನೀಡಿದ ಆಶೀರ್ವಾದ, ಪ್ರೇರಣೆಯು ನನ್ನ ಮನದಲ್ಲಿ ತುಂಬಿದೆ” ಎಂದು ಮೋದಿ ಹೇಳಿದರು.
ಪ್ರತಿಪಕ್ಷಗಳಿಗೆ ಮೋದಿ ಟಾಂಗ್
ಭಾಷಣದ ವೇಳೆ ನರೇಂದ್ರ ಮೋದಿ ಅವರು ಕಾಂಗ್ರೆಸ್ ಸೇರಿ ಎಲ್ಲ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು. “ಲೋಕಸಭೆ ಚುನಾವಣೆ ಫಲಿತಾಂಶದ ಕುರಿತು ಪ್ರತಿಪಕ್ಷಗಳು ಜೋರು ಧ್ವನಿಯಲ್ಲಿ ಮಾತನಾಡುತ್ತಿವೆ. ಆದರೆ, ಕಾಂಗ್ರೆಸ್ ಸೇರಿ ಎಲ್ಲ ಪ್ರತಿಪಕ್ಷಗಳಿಗೆ ಗೊತ್ತಿಲ್ಲ, ಬಿಜೆಪಿಯೊಂದೇ ಗಳಿಸಿರುವಷ್ಟು ಸ್ಥಾನಗಳನ್ನು ಎಲ್ಲ ಪ್ರತಿಕ್ಷಗಳು ಒಗ್ಗೂಡಿ ಜಯಿಸಿಲ್ಲ. ಆದರೆ, ಮೂರನೇ ಅವಧಿಯಲ್ಲೂ ಎನ್‌ಡಿಎ ಸರ್ಕಾರವು ಉತ್ತಮ ಆಡಳಿತ ನೀಡಲಿದೆ. ದೇಶದಲ್ಲಿ ಹೊಸ ಅಧ್ಯಾಯ ಸೃಷ್ಟಿಯಾಗಲಿದೆ. ಇದು ನರೇಂದ್ರ ಮೋದಿಯ ಗ್ಯಾರಂಟಿ” ಎಂದು ಹೇಳಿದರು.
“ತಂತ್ರಜ್ಞಾನ, ರಫ್ತು, ಮೂಲ ಸೌಕರ್ಯ, ಬಾಹ್ಯಾಕಾಶ, ದೇಶದ ರಕ್ಷಣಾ ವ್ಯವಸ್ಥೆ ಸೇರಿ ಸರ್ವ ಕ್ಷೇತ್ರಗಳ ಏಳಿಗೆಗೆ ಶ್ರಮಿಸುತ್ತೇವೆ. ನಮ್ಮ ಯುವಕರಿಗೆ ಶಿಕ್ಷಣ, ಉದ್ಯೋಗ, ಕೌಶಲ ಅಭಿವೃದ್ಧಿ, ರೈತರ ಆದಾಯ ಹೆಚ್ಚಿಸುವುದು, ಕೃಷಿ ಉತ್ಪನ್ನ ಹೆಚ್ಚಿಸುವುದು, ರೈತರು ಆತ್ಮನಿರ್ಭರರಾಗಲು ಏನು ಬೇಕೋ ಎಲ್ಲವನ್ನೂ ಮೂರನೇ ಅವಧಿಯ ಆಡಳಿತದ ವೇಳೆ ಮಾಡಲಿದ್ದೇವೆ” ಎಂದು ಭರವಸೆ ನೀಡಿದರು.
ಚುನಾವಣೆ ಆಯೋಗಕ್ಕೆ ಅಭಿನಂದನೆ
“ನನ್ನ ಸಹೋದರ, ಸಹೋದರಿಯರೇ, ಇಂದು ಚುನಾವಣಾ ಆಯೋಗಕ್ಕೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಚುನಾವಣೆ ಆಯೋಗವು ಜಗತ್ತಿನಲ್ಲೇ ಅತಿ ದೊಡ್ಡ ಚುನಾವಣೆಯನ್ನು ಯಶಸ್ವಿಯಾಗಿ ಕೈಗೊಂಡಿದೆ. ಸುಮಾರು 1 ಕೋಟಿ ಮತದಾರರು, 11 ಲಕ್ಷ ಮತಕೇಂದ್ರಗಳು, 1.5 ಕೋಟಿ ಸಬ್ಬಂದಿ ಸೇರಿ ಎಲ್ಲರೂ ಬೇಸಿಗೆಯ ಬಿಸಿಲಿನಲ್ಲೂ ಕಾರ್ಯನಿರ್ವಹಿಸಿದ್ದಾರೆ. ಇದರಿಂದಲೇ ಚುನಾವಣೆಯು ಯಶಸ್ವಿಯಾಗಿದೆ. ಚುನಾವಣೆ ಆಯೋಗವು ದಕ್ಷತೆಯಿಂದ ಕೆಲಸ ಮಾಡಿದ ಕಾರಣ ಬೃಹತ್ ಪ್ರಜಾಪ್ರಭುತ್ವದ ಬೃಹತ್ ಚುನಾವಣೆಯು ವಿಶ್ವಾಸಾರ್ಹತೆಯಿಂದ ಮುಗಿದಿದೆ. ಇದರ ಶ್ರೇಯಸ್ಸು ಆಯೋಗಕ್ಕೇ ಸಲ್ಲಬೇಕು” ಎಂಬುದಾಗಿ ನರೇಂದ್ರ ಮೋದಿ ಬಣ್ಣಿಸಿದರು.
ಇದನ್ನೂ ಓದಿ: Narendra Modi Election: 3ನೇ ಸಲ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ; ರಿಸಲ್ಟ್ ಬಳಿಕ ಮೋದಿ ಭಾವುಕ ಪೋಸ್ಟ್