ನವದೆಹಲಿ: ತಂಬಾಕು ಉತ್ಪನ್ನಗಳು, ಪಾನ್ ಮಸಾಲ, ಗುಟ್ಕಾ ಉತ್ಪನ್ನಗಳನ್ನು (Tobacco Products) ಪ್ಯಾಕಿಂಗ್ ಮಾಡಿ, ಮಾರಾಟ ಮಾಡುವವರಿಗೆ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇನ್ನು ಮುಂದೆ, ಪಾನ್ ಮಸಾಲ, ಗುಟ್ಕಾ ಹಾಗೂ ತಂಬಾಕು ಉತ್ಪನ್ನಗಳ ಉತ್ಪಾದಕರು ಪ್ಯಾಕಿಂಗ್ ಮಷೀನ್‌ಗಳನ್ನು (Packing Machinery) ಜಿಎಸ್‌ಟಿ ಕಚೇರಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಬೇಕು. ಇಲ್ಲದಿದ್ದರೆ, ಒಂದು ಲಕ್ಷ ರೂ. ದಂಡ ವಿಧಿಸಲಾಗುತ್ತದೆ ಎಂಬ ನಿಯಮ ಜಾರಿಗೆ ತಂದಿದೆ. ಹೊಸ ನಿಯಮವು (New GST Norms) ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.
ಒಂದು ಲಕ್ಷ ರೂ. ದಂಡ ವಿಧಿಸುವ ಕುರಿತು ಕಂದಾಯ ಇಲಾಖೆ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಮಾಹಿತಿ ನೀಡಿದ್ದಾರೆ. “ತಂಬಾಕು ಉತ್ಪಾದನೆ ಕ್ಷೇತ್ರದಲ್ಲಿ ಆದಾಯ ಸೋರಿಕೆಯನ್ನು ತಡೆಯವ ದಿಸೆಯಲ್ಲಿ ಕೇಂದ್ರ ಸರ್ಕಾರವು ಹಣಕಾಸು ಮಸೂದೆ 2023ರ ಮೂಲಕ ಸೆಂಟ್ರಲ್ ಜಿಎಸ್‌ಟಿ ಆ್ಯಕ್ಟ್‌ಗೆ ತಿದ್ದುಪಡಿ ತಂದಿದೆ. ಹೊಸ ನಿಯಮವು 2024ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ವ್ಯಾಪಾರಿಗಳು ಪ್ರತಿಯೊಂದು ಪ್ಯಾಕಿಂಗ್ ಮಷೀನ್‌ಗಳನ್ನೂ ನೋಂದಣಿ ಮಾಡಬೇಕು. ಇಲ್ಲದಿದ್ದರೆ, ಒಂದು ಲಕ್ಷ ರೂ. ದಂಡ ತೆರಬೇಕಾಗುತ್ತದೆ” ಎಂದು ತಿಳಿಸಿದರು.
ತಂಬಾಕು ಉತ್ಪನ್ನಗಳ ಉತ್ಪಾದಕರು ಪ್ಯಾಕಿಂಗ್ ಮಷೀನ್‌ಗಳ ನೋಂದಣಿಗೆ ಸಂಬಂಧಿಸಿದಂತೆ ಕಳೆದ ವರ್ಷವೇ ಜಿಎಸ್‌ಟಿ ಅಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದಾರೆ. ತಂಬಾಕು ಪ್ಯಾಕಿಂಗ್ ಮಷೀನ್‌ಗಳನ್ನು ನೋಂದಣಿ ಮಾಡಿಸಿಕೊಳ್ಳದ ಕೆಲವೊಂದು ಪ್ರಕರಣಗಳಲ್ಲಿ ಒಂದು ಲಕ್ಷ ರೂ. ದಂಡದ ಜತೆಗೆ ಮಷೀನ್‌ಗಳನ್ನು ಜಪ್ತಿ ಮಾಡುವ ಹಾಗೂ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವೂ ಜಿಎಸ್‌ಟಿ ಅಧಿಕಾರಿಗಳಿಗೆ ಇರುತ್ತದೆ. ಹಾಗಾಗಿ, ಏಪ್ರಿಲ್ 1ರೊಳಗೆ ಎಲ್ಲ ವ್ಯಾಪಾರಿಗಳೂ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಜಿಎಸ್‌ಟಿ ಅಧಿಕಾರಿಗಳು ಸೂಚಿಸಿದ್ದಾರೆ.
ಇದನ್ನೂ ಓದಿ: CM Siddaramaiah : ಶಾಲೆ ಪಕ್ಕ ತಂಬಾಕು ಮಾರಾಟಕ್ಕೆ ಬ್ರೇಕ್; ಬಾಲಕಿ ಮನವಿಗೆ ತಕ್ಷಣ ಸ್ಪಂದಿಸಿದ ಸಿಎಂ
ಹೊಸ ನಿಯಮಗಳ ಜಾರಿ ಏಕೆ?
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ 2023ರಲ್ಲಿ ನಡೆದ ಜಿಎಸ್‌ಟಿ ಸಮಿತಿ ಸಭೆಯಲ್ಲಿ ಮೊದಲ ಬಾರಿಗೆ ತಂಬಾಕು ಉತ್ಪನ್ನಗಳ ಉತ್ಪಾದಕರ ಪ್ಯಾಕಿಂಗ್ ಮಷೀನ್‌ಗಳ ನೋಂದಣಿ ಕುರಿತು ಚರ್ಚಿಸಲಾಯಿತು. ಪ್ಯಾಕಿಂಗ್ ಮಷೀನ್‌ಗಳ ನೋಂದಣಿಯಾಗದ ಕಾರಣ ತಂಬಾಕು ಉತ್ಪನ್ನಗಳ ಉತ್ಪಾದನೆಯ ಮಿತಿ ಗೊತ್ತಾಗುತ್ತಿಲ್ಲ. ಇದರಿಂದ ಆದಾಯಕ್ಕೆ ಹೊಡೆತಕ್ಕೆ ಬೀಳುತ್ತಿದೆ. ಆದಾಯದ ಸೋರಿಕೆಯಾಗುತ್ತಿದೆ ಎಂದು ಚರ್ಚಿಸಲಾಗಿತ್ತು. ಹಾಗೆಯೇ, ನೋಂದಣಿ ಮಾಡಿಸಿಕೊಳ್ಳದವರಿಗೆ ದಂಡ ವಿಧಿಸುವ ನಿಯಮ ಇಲ್ಲದ ಕಾರಣ, ನಿಯಮ ರೂಪಿಸಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಅದರಂತೆ, ರಾಜ್ಯಗಳಿಗೂ ಜಿಎಸ್‌ಟಿ ಸಮಿತಿ ಈ ಕುರಿತು ವರದಿ ಕಳುಹಿಸಿತ್ತು. ಈಗ ನಿಯಮಗಳನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ