Site icon Vistara News

IT Rules | ಮಸ್ಕ್‌ ಟ್ವಿಟರ್‌ ಖರೀದಿಗೂ, ಐಟಿ ನಿಯಮಗಳ ತಿದ್ದುಪಡಿಗೂ ಸಂಬಂಧವೇನು? ಕೇಂದ್ರ ಹೇಳುವುದೇನು?

Rajiv Chandrashekhar

ನವದೆಹಲಿ: ಜಾಗತಿಕ ಕಾರು ಉತ್ಪಾದನಾ ಕಂಪನಿ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಅವರು ಟ್ವಿಟರ್‌ಅನ್ನು ಖರೀದಿಸಿದ ದಿನವೇ ಕೇಂದ್ರ ಸರ್ಕಾರವು ನೂತನ ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ (IT Rules) ತಿದ್ದುಪಡಿ ತಂದಿದೆ. ಟ್ವಿಟರ್‌ ಮ್ಯಾನೇಜ್‌ಮೆಂಟ್‌ ಬದಲಾಗುತ್ತಿರುವ ವೇಳೆ ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿಯೇ ನಿಯಮಗಳಿಗೆ ಬದಲಾವಣೆ ತಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಇದನ್ನು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರಾಜೀವ್‌ ಚಂದ್ರಶೇಖರ್‌ ಅಲ್ಲಗಳೆದಿದ್ದಾರೆ.

“ಟ್ವಿಟರ್‌ ಮ್ಯಾನೇಜ್‌ಮೆಂಟ್‌ ಬದಲಾಗುತ್ತಿರುವುದಕ್ಕೂ, ಕೇಂದ್ರ ಸರ್ಕಾರವು ಐಟಿ ನಿಯಮಗಳಿಗೆ ತಿದ್ದುಪಡಿ ತಂದಿರುವುದಕ್ಕೂ ಸಂಬಂಧವೇ ಇಲ್ಲ. ದೇಶದ ʼಡಿಜಿಟಲ್‌ ನಾಗರಿಕರʼ (Netizens) ಹಿತರಕ್ಷಣೆಗಾಗಿ ನಿಯಮಗಳನ್ನು ಬದಲಾಯಿಸಲಾಗಿದೆ. ಅಷ್ಟಕ್ಕೂ, ಏಕಾಏಕಿ ಕೇಂದ್ರ ಸರ್ಕಾರ ನಿಯಮ ಬದಲಾಯಿಸಿಲ್ಲ. ಕಳೆದ ಮಾರ್ಚ್‌ನಿಂದಲೇ ತಜ್ಞರ ಜತೆ ಚರ್ಚಿಸಿ, ಅವರ ಅಭಿಪ್ರಾಯ ಪಡೆದು, ಕೊನೆಗೆ ನಿಯಮಗಳನ್ನು ಬದಲಾಯಿಸಲಾಗಿದೆ” ಎಂದು ಮಾಧ್ಯಮವೊಂದಕ್ಕೆ ರಾಜೀವ್‌ ಚಂದ್ರಶೇಖರ್‌ ಸ್ಪಷ್ಟಪಡಿಸಿದ್ದಾರೆ.

“ಸಾಮಾಜಿಕ ಜಾಲತಾಣಗಳನ್ನು ಬಳಸುವ ದೇಶದ ನಾಗರಿಕರ ರಕ್ಷಣೆಯು ಪ್ರಧಾನಿ ನರೇಂದ್ರ ಮೋದಿ ಅವರ ಆದ್ಯತೆಯಾಗಿದೆ. ದೇಶದಲ್ಲಿ ಕಾರ್ಯನಿರ್ವಹಿಸುವ ಬೃಹತ್‌ ಜಾಲತಾಣ ಕಂಪನಿಗಳು ನಮ್ಮ ನಾಗರಿಕರಿಗೆ ತಾರತಮ್ಯ ರಹಿತವಾದ ಹಕ್ಕುಗಳು, ಅಭಿವ್ಯಕ್ತಿ ಸ್ವಾತಂತ್ರ್ಯ, ಗೌಪ್ಯತೆಯ ಹಕ್ಕು ಸೇರಿ ಎಲ್ಲ ಹಕ್ಕುಗಳು ನೀಡಬೇಕು. ಇದರ ದಿಸೆಯಲ್ಲಿ ನಿಯಮಗಳಿಗೆ ಬದಲಾವಣೆ ತರಲಾಗಿದೆ. ಮ್ಯಾನೇಜ್‌ಮೆಂಟ್‌ ಬದಲಾದರೂ ದೇಶದ ನಾಗರಿಕರ ಹಕ್ಕುಗಳನ್ನು ಟ್ವಿಟರ್‌ ಗೌರವಿಸಲಿ” ಎಂದು ಹೇಳಿದ್ದಾರೆ.

ಐಟಿ ರೂಲ್ಸ್‌ಗಳಿಗೆ ತರಲಾಗಿರುವ ತಿದ್ದುಪಡಿಗಳ ಪ್ರಕಾರ, ಮೂರು ತಿಂಗಳಲ್ಲಿ ನೂತನ ಐಟಿ ನಿಯಮಗಳ ಪ್ರಕಾರ ಮೂವರು ಸದಸ್ಯರ ಕುಂದುಕೊರತೆ ಮೇಲ್ಮನವಿ ಸಮಿತಿ ರಚಿಸಲಾಗುತ್ತದೆ. ಸಮಿತಿಯಲ್ಲಿ ಒಬ್ಬ ಅಧ್ಯಕ್ಷ ಹಾಗೂ ಇಬ್ಬರು ಸದಸ್ಯರು ಇರಲಿದ್ದಾರೆ. ಜಾಲತಾಣಗಳನ್ನು ಬಳಸುವ ಗ್ರಾಹಕರು ದೂರು ನೀಡಿದ 30 ದಿನಗಳ ಒಳಗಾಗಿ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಫೇಸ್‌ಬುಕ್‌, ಟ್ವಿಟರ್‌, ಯುಟ್ಯೂಬ್‌, ಇನ್‌ಸ್ಟಾಗ್ರಾಂ ಸೇರಿ ಎಲ್ಲ ಜಾಲತಾಣಗಳು ಬಳಕೆದಾರರು ಕಂಟೆಂಟ್‌ ಸೇರಿ ಯಾವುದೇ ವಿಷಯದ ಕುರಿತು ಕುಂದುಕೊರತೆಗಳ ಸಮಿತಿಗಳಿಗೆ ದೂರು ನೀಡಬಹುದಾಗಿದೆ. ಕೇಂದ್ರ ಸರ್ಕಾರವೇ ಸಮಿತಿ ರಚಿಸುವುದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ, ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವ ಅಂಶಗಳನ್ನು ನಿರ್ಬಂಧಿಸಬಹುದಾಗಿದೆ.

ಇದನ್ನೂ ಓದಿ | ವಿಸ್ತಾರ Explainer | ಸೋಷಿಯಲ್ ಮೀಡಿಯಾಗೆ ಮೂಗುದಾರ, ಯಾವೆಲ್ಲ ನಿಯಮ ತಿದ್ದಿದೆ ಸರ್ಕಾರ?

Exit mobile version