ಹೊಸ ದಿಲ್ಲಿ: ನೂತನ ಸಂಸತ್ ಭವನದ ಉದ್ಘಾಟನೆಯನ್ನು (New Parliament Building) ಬಹಿಷ್ಕರಿಸಲು 20 ಪ್ರತಿಪಕ್ಷಗಳು ನಿರ್ಧರಿಸಿದ್ದರೆ, 17 ಪಕ್ಷಗಳು ಬೆಂಬಲಿಸಿವೆ. ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟಿಸುತ್ತಿರುವುದರಿಂದಾಗಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ನೇಪಥ್ಯಕ್ಕೆ ಸರಿಸಿದಂತಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾಡುವ ಅಪಚಾರ ಎಂದು ಕಾಂಗ್ರೆಸ್ ನೇತೃತ್ವದಲ್ಲಿ 20 ಪ್ರತಿಪಕ್ಷಗಳ ಒಕ್ಕೂಟವು ಆರೋಪಿಸಿವೆ.
ಈ ಬಗ್ಗೆ ಪ್ರತಿಪಕ್ಷಗಳ ಒಕ್ಕೂಟವು ಜಂಟಿ ಹೇಳಿಕೆ ನೀಡಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿವೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪ್ರತ್ಯೇಕವಾಗಿ ಬಹಿಷ್ಕಾರ ಘೋಷಿಸಿದ್ದಾರೆ. ಕೆಸಿಆರ್ ಅವರ ಭಾರತ್ ರಾಷ್ಟ್ರ ಸಮಿತಿ ಇದೇ ಮಾರ್ಗ ಅನುಸರಿಸುವ ಸುಳಿವು ನೀಡಿದೆ.
ಸಂವಿಧಾನದ 79ನೇ ವಿಧಿಯ ಪ್ರಕಾರ ಪಾರ್ಲಿಮೆಂಟ್ ಎಂದರೆ ರಾಷ್ಟ್ರಪತಿ ಹಾಗೂ ಸಂಸತ್ತಿನ ಎರಡು ಸದನಗಳನ್ನು ಒಳಗೊಂಡಿದೆ. ರಾಷ್ಟ್ರಪತಿಯವರು ಸರ್ಕಾರದ ಮುಖ್ಯಸ್ಥರು ಮಾತ್ರವಲ್ಲದೆ ಪಾರ್ಲಿಮೆಂಟ್‌ನ ಅವಿಭಾಜ್ಯ ಅಂಗ ಎಂದು ಜಂಟಿ ಹೇಳಿಕೆ ವಿವರಿಸಿದೆ.
ಆದರೆ ಬಹಿಷ್ಕಾರದ ನಡೆ ನೈಜ ಪ್ರಜಾಪ್ರಭುತ್ವೀಯ ಆಶಯಗಳಿಗೆ ವಿರುದ್ಧವಾದುದು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ, ವೈಎಸ್‌ಆರ್ ಕಾಂಗ್ರೆಸ್ ಮುಖಂಡ ಜಗನ್ ಮೋಹನ ರೆಡ್ಡಿ (Jagan Mohan Reddy) ಹೇಳಿದ್ದಾರೆ.
ಎಲ್ಲ ಪಕ್ಷಗಳೂ ಈ ವೈಭವಯುತವಾದ, ಐತಿಹಾಸಿಕವಾದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದಿರುವ ಅವರು, ತಾವು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ. ಇಂಥದೊಂದು ವಿಸ್ತಾರವಾದ, ವೈಭವಯುತವಾದ ಭವನವನ್ನು ದೇಶಕ್ಕೆ ನೀಡುತ್ತಿರುವುದಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಅವರನ್ನು ಶ್ಲಾಘಿಸಿ ಜಗನ್ ಟ್ವೀಟ್ ಮಾಡಿದ್ದಾರೆ.
ಪ್ರಜಾಪ್ರಭುತ್ವದ ದೇವಾಲಯವಾಗಿರುವ ಸಂಸತ್ತು, ನಮ್ಮ ದೇಶದ ಆತ್ಮವನ್ನು ಪ್ರತಿನಿಧಿಸುತ್ತದೆ. ನಮ್ಮ ದೇಶದ ಜನತೆ ಹಾಗೂ ಪಕ್ಷಗಳಿಗೆ ಅದು ಸೇರಿದೆ. ಇದನ್ನು ಬಹಿಷ್ಕರಿಸುವುದು ಪ್ರಜಾಪ್ರಭುತ್ವದ ನೈಜ ಆಶಯಗಳಿಗೆ ವಿರುದ್ಧವಾದುದು ಎಂದಿದ್ದಾರೆ ಅವರು.
ಪ್ರತಿಪಕ್ಷಗಳ ನಡೆಗೆ ಎನ್‌ಡಿಎ ಟೀಕೆ
ನೂತನ ಸಂಸತ್ ಭವನದ ಉದ್ಘಾಟನೆಯನ್ನು ಬಹಿಷ್ಕರಿಸುವ ಕಾಂಗ್ರೆಸ್ ನೇತೃತ್ವದ 19 ವಿರೋಧ ಪಕ್ಷಗಳ ನಿರ್ಧಾರವನ್ನು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಬುಧವಾರ ಖಂಡಿಸಿದೆ. “ಈ ಕೃತ್ಯ ಕೇವಲ ಅಗೌರವವಲ್ಲ; ಇದು ನಮ್ಮ ಮಹಾನ್ ರಾಷ್ಟ್ರದ ಪ್ರಜಾಸತ್ತಾತ್ಮಕ ನೀತಿ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಘೋರವಾದ ಅವಮಾನವಾಗಿದೆʼʼ ಎಂದು ಎನ್‌ಡಿಎ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.
ಆಡಳಿತಾರೂಢ ಮೈತ್ರಿಕೂಟದ 14 ಪಕ್ಷಗಳ ನಾಯಕರು ಒಟ್ಟಾಗಿ ಈ ಬಗ್ಗೆ ಹೇಳಿಕೆ ನೀಡಿದ್ದು, ನಿರ್ಧಾರವನ್ನು ಮರುಪರಿಶೀಲಿಸುವಂತೆ ವಿರೋಧ ಪಕ್ಷಗಳಿಗೆ ಮನವಿ ಮಾಡಿದ್ದಾರೆ. ಪ್ರತಿಪಕ್ಷಗಳು ತಮ್ಮ ನಿಲುವನ್ನು ಮುಂದುವರಿಸಿದರೆ, ನೀವು ನಮ್ಮ ಪ್ರಜಾಪ್ರಭುತ್ವ ಮತ್ತು ಅವರ ಚುನಾಯಿತ ಪ್ರತಿನಿಧಿಗಳಿಗೆ ಮಾಡಿದ ಘೋರ ಅವಮಾನ ಭಾರತದ ಜನತೆ ಮರೆಯುವುದಿಲ್ಲ ಎಂದಿದ್ದಾರೆ.
“ಸಂಸತ್ತಿನ ಬಗೆಗಿನ ಇಂತಹ ಅಗೌರವವು ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ. ಇದು ಪ್ರಜಾಪ್ರಭುತ್ವದ ಮೂಲತತ್ವಕ್ಕೆ ತೋರುವ ತಿರಸ್ಕಾರ. ಇದು ಇಂತಹ ಮೊದಲ ನಿದರ್ಶನವಲ್ಲ. ಕಳೆದ ಒಂಬತ್ತು ವರ್ಷಗಳಲ್ಲಿ ಈ ವಿರೋಧ ಪಕ್ಷಗಳು ಸಂಸತ್ತಿನ ಕಾರ್ಯವಿಧಾನದ ಬಗ್ಗೆ ಪದೇ ಪದೆ ಅಗೌರವ ತೋರಿಸಿವೆ. ಅಧಿವೇಶನಗಳಿಗೆ ಅಡ್ಡಿಪಡಿಸಿವೆ. ನಿರ್ಣಾಯಕ ಶಾಸನಗಳ ಸಮಯದಲ್ಲಿ ಸಭಾತ್ಯಾಗ ಮಾಡಿವೆ. ತಮ್ಮ ಸಂಸದೀಯ ಕರ್ತವ್ಯಗಳ ಬಗ್ಗೆ ಉಡಾಫೆ ಪ್ರದರ್ಶಿಸಿವೆ. ಇತ್ತೀಚಿನ ಈ ಬಹಿಷ್ಕಾರವು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ಕಡೆಗಣಿಸುವಿಕೆಯ ಮತ್ತೊಂದು ಉದಾಹರಣೆʼʼ ಎಂದು ಎನ್‌ಡಿಎ ಹೇಳಿಕೆ ತಿಳಿಸಿದೆ.
ಇದನ್ನೂ ಓದಿ: New Parliament Building : ಸಂಸತ್ ಭವನ ನಿರ್ಮಿಸಿದ 60,000 ಕಾರ್ಮಿಕರನ್ನು ಸನ್ಮಾನಿಸಲಿದ್ದಾರೆ ಮೋದಿ