Site icon Vistara News

New Railway Projects: 24,657 ಕೋಟಿ ರೂ. ಮೊತ್ತದ 8 ರೈಲು ಯೋಜನೆಗಳಿಗೆ ಅನುಮೋದನೆ

New Railway Projects

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯು ಸುಮಾರು 24,657 ಕೋಟಿ ರೂ.ಗಳ ರೈಲ್ವೆ ಸಚಿವಾಲಯದ 8 ಯೋಜನೆಗಳಿಗೆ ಅನುಮೋದನೆ ನೀಡಿದೆ (New Railway Projects). ಒಡಿಶಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ಜಾರ್ಖಂಡ್, ಬಿಹಾರ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಏಳು ರಾಜ್ಯಗಳ 14 ಜಿಲ್ಲೆಗಳನ್ನು ಈ ಯೋಜನೆಗಳು ಒಳಗೊಳ್ಳಲಿವೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ತಿಳಿಸಿದ್ದಾರೆ.

ʼʼಗುನುಪುರ್-ತೇರುಬಲಿ (ಹೊಸ ಮಾರ್ಗ), ಜುನಾಗಢ್-ನಬರಂಗ್‌ಪುರ, ಬಾದಂಪಹಾರ್-ಕಂದುಜಾರ್ಗಢ, ಬಂಗ್ರಿಪೊಸಿ-ಗೊರುಮಹಿಸಾನಿ, ಮಲ್ಕನ್ಗಿರಿ-ಪಾಂಡುರಂಗಪುರಂ (ಭದ್ರಾಚಲಂ ಮೂಲಕ), ಬುರಮರ-ಚಕುಲಿಯಾ, ಜಲ್ನಾ-ಜಲ್ಗಾಂವ್ ಮತ್ತು ಬಿಕ್ರಮಶಿಲಾ-ಕಟಾರಿಯಾ- ಇವು ಕೇಂದ್ರ ಸಚಿವ ಸಂಪುಟ ಅನುಮೋದಿಸಿದ ಎಂಟು ಪ್ರಮುಖ ಹೊಸ ರೈಲ್ವೆ ಮಾರ್ಗ ಯೋಜನೆಗಳುʼʼ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ʼʼಹೊಸ ಮಾರ್ಗದ ಪ್ರಸ್ತಾಪಗಳು ನೇರ ಸಂಪರ್ಕವನ್ನು ಒದಗಿಸುತ್ತವೆ ಮತ್ತು ಪ್ರಯಾಣವನ್ನು ಸುಗಮಗೊಳಿಸುತ್ತದೆ. ಈ ಹೊಸ ಯೋಜನೆಗಳು ಪ್ರಧಾನಿ ನರೇಂದ್ರ ಮೋದಿ ಅವರ ನವ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿವೆ. ಇವು ಈ ಪ್ರದೇಶಗಳಲ್ಲಿ ಸಮಗ್ರ ಅಭಿವೃದ್ಧಿಯ ಮೂಲಕ ಸ್ಥಳೀಯರನ್ನು ʼಆತ್ಮ ನಿರ್ಭರʼವನ್ನಾಗಿ ಮಾಡುತ್ತದೆ. ಅವರ ಉದ್ಯೋಗ / ಸ್ವಯಂ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆʼʼ ಎಂದು ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.

ಉದ್ಯೋಗ ಸೃಷ್ಟಿ

ʼʼಈ ರೈಲ್ವೆ ಯೋಜನೆಗಳು ಆರ್ಥಿಕ ಅನುಕೂಲವನ್ನು ಒದಗಿಸುವುದಲ್ಲೇ ಸಾವಿರಾರು ಸಂಖ್ಯೆಯ ಉದ್ಯೋಗ ಸೃಷ್ಟಿಗೂ ಕಾರಣವಾಗಲಿವೆ. ಈ ಯೋಜನೆಗಳೊಂದಿಗೆ 64 ಹೊಸ ನಿಲ್ದಾಣಗಳನ್ನು ನಿರ್ಮಿಸಲಾಗುವುದು. ಸುಮಾರು 510 ಹಳ್ಳಿಗಳ 40 ಲಕ್ಷಕ್ಕೂ ಅಧಿಕ ಮಂದಿಗೆ ಅನುಕೂಲವಾಗಲಿದೆʼʼ ಮಾಹಿತಿ ನೀಡಿದ್ದಾರೆ. “ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಅಜಂತಾ ಗುಹೆಗಳನ್ನು ಭಾರತೀಯ ರೈಲ್ವೆ ಜಾಲದ ಮೂಲಕ ಸಂಪರ್ಕಿಸಲಾಗುವುದು. ಇದು ಹೆಚ್ಚಿನ ಸಂಖ್ಯೆಯ ಪ್ರವಾಸಿಗರಿಗೆ ಅನುಕೂಲವಾಗಲಿದೆ” ಎಂದಿದ್ದಾರೆ.

ಕೃಷಿ ಉತ್ಪನ್ನಗಳು, ರಸಗೊಬ್ಬರ, ಕಲ್ಲಿದ್ದಲು, ಕಬ್ಬಿಣದ ಅದಿರು, ಉಕ್ಕು, ಸಿಮೆಂಟ್, ಬಾಕ್ಸೈಟ್, ಸುಣ್ಣದ ಕಲ್ಲು, ಅಲ್ಯೂಮಿನಿಯಂ ಪುಡಿ, ಗ್ರಾನೈಟ್, ಬ್ಯಾಲಸ್ಟ್, ಕಂಟೇನರ್‌ ಮುಂತಾದ ಸರಕುಗಳ ಸಾಗಣೆಗೂ ಈ ಹೊಸ ಯೋಜನೆ ವೇಗ ನೀಡಲಿದೆ. ರೈಲ್ವೆಯು ಪರಿಸರ ಸ್ನೇಹಿ ಮತ್ತು ಇಂಧನ ದಕ್ಷ ಸಾರಿಗೆ ವಿಧಾನವಾಗಿರುವುದರಿಂದ ಪರಿಸರ ಮಾಲಿನ್ಯ ತಡೆಗಟ್ಟುವ ನಮ್ಮ ಗುರಿಯನ್ನು ಸಾಧಿಸಲು ಇದು ನೆರವಾಗಲಿದೆ. ಅಲ್ಲದೆ ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು, ತೈಲ ಆಮದನ್ನು ಕಡಿಮೆ ಮಾಡಲು (32.20 ಕೋಟಿ ಲೀಟರ್) ಮತ್ತು ಪರಿಸರಕ್ಕೆ ಹೊರ ಸೂಸುವ ಇಂಗಾಲದ ಡೈಆಕ್ಸೈಡ್ ಪ್ರಮಾಣವನ್ನು (0.87 ಮಿಲಿಯನ್ ಟನ್) ಕಡಿಮೆ ಮಾಡಲು ಈ ಯೋಜನೆಗಳು ದೊಡ್ಡ ಮಟ್ಟದ ಕೊಡುಗೆ ನೀಡಲಿವೆ. ಇದು 3.5 ಕೋಟಿ ಗಿಡಗಳ ನಾಟಿಗೆ ಸಮ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: Independence Day 2024: ಹೊಗೆ ಬಂಡಿಯಿಂದ ವಂದೇ ಭಾರತ್‌‌ವರೆಗೆ; ಭಾರತೀಯ ರೈಲ್ವೆಯ ಅದ್ಭುತ ಪಯಣ!

“ನಾವು 1,300 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡುತ್ತಿದ್ದೇವೆ ಮತ್ತು ಪ್ರತಿವರ್ಷ 5,000 ಕಿ.ಮೀ. ಹಳಿಗಳನ್ನು ನಿರ್ಮಿಸುತ್ತಿದ್ದೇವೆʼʼ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Exit mobile version