ನವದೆಹಲಿ: ಚೀನಾದಿಂದ ಹಣ ಪಡೆದು, ಆ ರಾಷ್ಟ್ರದ ಪರ ಪ್ರಚಾರಾಂದೋಲನ ನಡೆಸಿದ, ಭಾರತದ ವಿರುದ್ಧ ವರದಿ ಪ್ರಕಟಿಸಿದ ಆರೋಪದಲ್ಲಿ ನ್ಯೂಸ್‌ಕ್ಲಿಕ್ ವೆಬ್‌ಸೈಟ್ (NewsClick Case) ಸಂಸ್ಥಾಪಕರೂ ಆದ ಸಂಪಾದಕ ಪ್ರಬೀರ್ ಪುರಕಾಯಸ್ಥ (Prabir Purkayastha) ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಹಾಗೆಯೇ, ನ್ಯೂಸ್‌ಕ್ಲಿಕ್ ಮಾನವ ಸಂಪನ್ಮೂಲ ವಿಭಾಗದ (HR) ಮುಖ್ಯಸ್ಥ ಅಮಿತ್ ಚಕ್ರವರ್ತಿ ಎಂಬುವರನ್ನೂ ಬಂಧಿಸಲಾಗಿದೆ. ಬಂಧನದ ಬಳಿಕ ಪ್ರಬೀರ್ ಪುರಕಾಯಸ್ಥ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಏಳು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ದೆಹಲಿ, ರಾಷ್ಟ್ರ ರಾಜಧಾನಿ ವ್ಯಾಪ್ತಿ ಹಾಗೂ ಮುಂಬೈ ಸೇರಿ 20 ಕಡೆ ಮಂಗಳವಾರ (ಅಕ್ಟೋಬರ್ 3) ದೆಹಲಿ ಪೊಲೀಸರು ದಾಳಿ ನಡೆಸಿ, ಪರಿಶೀಲನೆ ಮಾಡಿದ್ದರು. ”ನ್ಯೂಸ್‌ಕ್ಲಿಕ್‌ನ 37 ಪುರುಷರು ಹಾಗೂ 9 ಮಹಿಳೆಯರನ್ನು ವಿಚಾರಣೆ ನಡೆಸಲಾಗಿದೆ. ಡಿಜಿಟಲ್ ಡಿವೈಸ್‌ಗಳು, ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದುವರೆಗೆ ಪ್ರಬೀರ್ ಪುರಕಾಯಸ್ಥ ಹಾಗೂ ಅಮಿತ್ ಚಕ್ರವರ್ತಿ ಅವರನ್ನು ಬಂಧಿಸಲಾಗಿದೆ” ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ, ಪ್ರಬೀರ್ ಪುರಕಾಯಸ್ಥ ಬಂಧನ ಕುರಿತು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದು, “ಇದು ಮಾಧ್ಯಮ ಸ್ವಾತಂತ್ರ್ಯದ ಹರಣ” ಎಂದಿವೆ.
Delhi Police arrests NewsClick founder and editor-in-chief Prabir Purkayastha under UAPA
— ANI Digital (@ani_digital) October 3, 2023
Read @ANI Story | https://t.co/bs3Hu2FIh1#DelhiPolice #NewsClick #PrabirPurkayastha pic.twitter.com/CgRSZqUghI
ಏನಿದು ಪ್ರಕರಣ?
ನ್ಯೂಸ್‌ಕ್ಲಿಕ್ ಸಂಸ್ಥೆಯಲ್ಲಿ ಚೀನಾ ಹೂಡಿಕೆ ಮಾಡಿದೆ. ಅಕ್ರಮವಾಗಿ ಹಣ ವರ್ಗಾವಣೆ ಹಾಗೂ ಚೀನಾ ಪರವಾಗಿ ಸುದ್ದಿಗಳನ್ನು ಪ್ರಕಟಿಸಿದ ಆರೋಪದ ಹಿನ್ನೆಲೆಯಲ್ಲಿ ಇ.ಡಿ ತನಿಖೆ ನಡೆಸುತ್ತಿದೆ. 2021ರಲ್ಲಿ ನ್ಯೂಸ್‌ಕ್ಲಿಕ್ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೂಡ ದಾಳಿ ನಡೆಸಿ, ಪರಿಶೀಲನೆ ಮಾಡಿದ್ದರು. ಇದಾದ ಬಳಿಕ ಜಾರಿ ನಿರ್ದೇಶನಾಲಯವು ನ್ಯೂಸ್‌ಕ್ಲಿಕ್‌ಗೆ ಸಂಬಂಧಿಸಿದ ಕೆಲವು ಆಸ್ತಿಗಳನ್ನು ಕೂಡ ಜಪ್ತಿ ಮಾಡಿದೆ. ಮೂಲಗಳ ಪ್ರಕಾರ, ನ್ಯೂಸ್‌ಕ್ಲಿಕ್ ಸಂಸ್ಥೆಯು ಚೀನಾದಿಂದ 29 ಕೋಟಿ ರೂ. ಪಡೆದಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Raid On NewsClick: ನ್ಯೂಸ್‌ಕ್ಲಿಕ್‌ನ 30 ಪತ್ರಕರ್ತರ ಮನೆಗಳ ಮೇಲೆ ಪೊಲೀಸರ ದಾಳಿ, ಏನಿದು ಕೇಸ್?
ನ್ಯೂಯಾರ್ಕ್ ಟೈಮ್ಸ್ ವರದಿ ಏನು?
ನ್ಯೂಸ್‌ಕ್ಲಿಕ್‌ನಲ್ಲಿ ಚೀನಾ ಹೂಡಿಕೆ ಕುರಿತು ಕಳೆದ ಆಗಸ್ಟ್‌ನಲ್ಲಿ ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. “ಚೀನಾದ ಪರವಾಗಿ ನಿಲುವು ಹೊಂದಿರುವ, ಚೀನಾ ನಿರ್ಧಾರಗಳನ್ನು ಬೆಂಬಲಿಸುವ ಅಮೆರಿಕದ ಉದ್ಯಮಿ ನೆವಿಲ್ಲೆ ರಾಯ್ ಸಿಂಘಂ ಎಂಬುವರು ಹಲವು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದು, ಇವುಗಳಲ್ಲಿ ನ್ಯೂಸ್‌ಕ್ಲಿಕ್ ಕೂಡ ಇದೆ” ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಿತ್ತು. ಚೀನಾ ಹೂಡಿಕೆ, ಅಕ್ರಮವಾಗಿ ಹಣ ವರ್ಗಾವಣೆ ಸೇರಿ ಹಲವು ಆರೋಪಗಳನ್ನು ನ್ಯೂಸ್‌ಕ್ಲಿಕ್ ಸಂಪಾದಕ ಪ್ರಬೀರ್ ಪುರಕಾಯಸ್ಥ (Prabir Purakayastha) ಅಲ್ಲಗಳೆದಿದ್ದಾರೆ. ಇದೆಲ್ಲ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.