ನವದೆಹಲಿ: ಚೀನಾದ ಹಣ ಪಡೆದು ಭಾರತದಲ್ಲಿ ಚೀನಾ ಪರ ಪ್ರಚಾರಾಂದೋಲನ ನಡೆಸಿದ ಪ್ರಕರಣದಲ್ಲಿ ನ್ಯೂಸ್‌ಕ್ಲಿಕ್ ವೆಬ್‌ಸೈಟ್ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಹಾಗೆಯೇ, ನ್ಯೂಸ್‌ಕ್ಲಿಕ್ ಸಂಪಾದಕರೂ ಆದ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ ಅವರು 2019ರ ಲೋಕಸಭೆ ಚುನಾವಣೆಗೆ ಅಡ್ಡಿಯುಂಟು ಮಾಡಲು ಪಿತೂರಿ ನಡೆಸಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಚೀನಾದಿಂದ ಕೋಟ್ಯಂತರ ರೂ. ಪಡೆದ ಆರೋಪದ ಬೆನ್ನಲ್ಲೇ ಪೊಲೀಸರ ಎಫ್‌ಐಆರ್ ಸಂಚಲನ ಮೂಡಿಸಿದೆ.
“2019ರ ಲೋಕಸಭೆ ಚುನಾವಣೆಗೆ ಅಡ್ಡಿಪಡಿಸುವ ದೃಷ್ಟಿಯಿಂದ ಪ್ರಬೀರ್ ಪುರಕಾಯಸ್ಥ ಅವರು ಪೀಪಲ್ಸ್ ಅಲಯನ್ಸ್ ಫಾರ್ ಡೆಮಾಕ್ರಸಿ ಆ್ಯಂಡ್ ಸೆಕ್ಯುಲರಿಸಂ ಎಂಬ ಸಂಸ್ಥೆಯ ಹಲವರ ಜತೆಗೂಡಿದ್ದರು. ಅವರ ಜತೆಗೂಡಿ ಚುನಾವಣೆಗೆ ಅಡ್ಡಿಪಡಿಸಲು ಸಂಚು ರೂಪಿಸಿದ್ದರು. ಹಾಗೆಯೇ, ಚೀನಾದ ನಕಲಿ ಕಂಪನಿಗಳ ಮೂಲಕ ಇದಕ್ಕಾಗಿ ಹಣ ಪಡೆದಿದ್ದಾರೆ” ಎಂದು ದೆಹಲಿ ಪೊಲೀಸರು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.
ಭಾರತದ ವಿರುದ್ಧ ಷಡ್ಯಂತ್ರ
ಅಮೆರಿಕದ ಉದ್ಯಮಿ ನೆವಿಲ್ಲೆ ರಾಯ್ ಸಿಂಘಂ ಹಾಗೂ ಪ್ರಬೀರ್ ಪುರಕಾಯಸ್ಥ ಅವರು ಇ-ಮೇಲ್ ಮೂಲಕ ಸಂವಹನ ಸಾಧಿಸಿರುವುದನ್ನೂ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. “ಜಮ್ಮು-ಕಾಶ್ಮೀರ ಅರುಣಾಚಲ ಪ್ರದೇಶ ಭಾರತದ ಭಾಗವಲ್ಲ ಎಂಬುದಾಗಿ ಬಿಂಬಿಸುವುದು. 2020-21ರಲ್ಲಿ ರೈತರ ಪ್ರತಿಭಟನೆಯ ಲಾಭ ಪಡೆಯುವುದು, ಭಾರತದ ಆರ್ಥಿಕತೆಗೆ ನಷ್ಟವಾಗುವ ಚಟುವಟಿಕೆಗಳಲ್ಲಿ ತೊಡಗುವುದು, ಕೊರೊನಾ ನಿಗ್ರಹಿಸುವಲ್ಲಿ ಭಾರತ ಸರ್ಕಾರ ದಿಟ್ಟ ಕ್ರಮ ತೆಗೆದುಕೊಂಡಿಲ್ಲ ಎಂಬಂತೆ ಬಿಂಬಿಸುವುದು ನ್ಯೂಸ್‌ಕ್ಲಿಕ್ ಪಿತೂರಿಯಾಗಿತ್ತು” ಎಂದು ತಿಳಿಸಲಾಗಿದೆ.
ಪ್ರಬೀರ್ ಪುರಕಾಯಸ್ಥ, ಅಮಿತ್ ಸೇನ್‌ಗುಪ್ತ, ಡಿ. ರಘುನಂದನ್ ಬಪ್ಪಡಿತ್ಯ ಸಿನ್ಹಾ, ನವಲಖಾ, ಅಮಿತ್ ಚಕ್ರವರ್ತಿ, ವರ್ಲ್ಡ್‌ವೈಡ್ ಮೀಡಿಯಾ ಹೋಲ್ಡಿಂಗ್ ಎಲ್‌ಎಲ್‌ಸಿ ಸೇರಿ ಹಲವು ವ್ಯಕ್ತಿಗಳು ಹಾಗೂ ಸಂಸ್ಥೆಗಳನ್ನು ಎಫ್‌ಐಆರ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಈಗಾಗಲೇ ಪ್ರಬೀರ್ ಪುರಕಾಯಸ್ಥ ಹಾಗೂ ಎಚ್‌ಆರ್ ಮುಖ್ಯಸ್ಥ ಅಮಿತ್ ಚಕ್ರವರ್ತಿ ಅವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: NewsClick Case: ಚೀನಾ ಪರ ವರದಿ; ಅಮೆರಿಕ ಉದ್ಯಮಿಯಿಂದ ನ್ಯೂಸ್‌ಕ್ಲಿಕ್ 28 ಕೋಟಿ ರೂ. ವಸೂಲಿ
28.29 ಕೋಟಿ ರೂ. ವಸೂಲಿ
ಚೀನಾ ಪರವಾಗಿ ಕಾರ್ಯನಿರ್ವಹಿಸುತ್ತಿರುವ, ಚೀನಾ ನಡೆಗಳ ಪರ ಪ್ರಚಾರ ನಡೆಸುವ ಅಮೆರಿಕ ಉದ್ಯಮಿ ನೆವಿಲ್ಲೆ ರಾಯ್ ಸಿಂಘಂ ಅವರಿಗೆ ಸಂಬಂಧಿಸಿದ ಹಲವು ಕಂಪನಿಗಳಿಂದ 2018ರಿಂದ 2021ರ ಅವಧಿಯಲ್ಲಿ 28.29 ಕೋಟಿ ರೂ. ಪಡೆದಿರುವುದಕ್ಕೆ ದೆಹಲಿ ಪೊಲೀಸ್ ಇಲಾಖೆಯ ಸ್ಪೆಷಲ್ ಸೆಲ್‌ಗೆ ಸಾಕ್ಷ್ಯಗಳು ದೊರೆತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನ್ಯೂಸ್‌ಕ್ಲಿಕ್ ಪಡೆದುಕೊಂಡಿರುವ 28.29 ಕೋಟಿ ರೂಪಾಯಿಯಲ್ಲಿ ಅಮೆರಿಕದ ಜಸ್ಟಿಸ್ ಆ್ಯಂಡ್ ಎಜುಕೇಷನ್ ಫಂಡ್ ಸಂಸ್ಥೆಯಿಂದ 27.51 ಕೋಟಿ ರೂ., ಜಿಎಸ್‌ಪಿಎಎನ್ ಎಲ್‌ಎಲ್‌ಸಿ ಕಂಪನಿಯಿಂದ 26.98 ಲಕ್ಷ ರೂ., ಟ್ರೈಕಾಂಟಿನೆಂಟಲ್ ಲಿಮಿಟೆಡ್ ಐಎನ್‌ಸಿಯಿಂದ 49.31 ಲಕ್ಷ ರೂ. ಹಾಗೂ ಬ್ರೆಜಿಲ್ ಮೂಲದ ಸೆಂಟ್ರೋ ಪಾಪ್ಯುಲರ್ ಡೆ ಮಿಡಾಸ್ ಕಂಪನಿಯಿಂದ 2.03 ಲಕ್ಷ ರೂ. ಪಡೆದಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.