ನವದೆಹಲಿ: ಚೀನಾ ಪರ ಪ್ರಚಾರಾಂದೋಲನ ನಡೆಸಲು, ವರದಿಗಳನ್ನು ಪ್ರಕಟಿಸಲು ಚೀನಾದಿಂದ ಹಣ ಪಡೆದಿರುವ ಪ್ರಕರಣದಲ್ಲಿ ಸಿಲುಕಿರುವ ನ್ಯೂಸ್‌ಕ್ಲಿಕ್ ವೆಬ್‌ಸೈಟ್ (NewsClick Case) ಕುರಿತು ಬಗೆದಷ್ಟೂ ಮಾಹಿತಿ ಲಭ್ಯವಾಗುತ್ತಿದೆ. ನ್ಯೂಸ್‌ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥ (Prabir Purkayastha) ಹಾಗೂ ಸಂಸ್ಥೆಯ ಎಚ್‌ಆರ್ ವಿಭಾಗದ ಮುಖ್ಯಸ್ಥರೊಬ್ಬರನ್ನು ಬಂಧಿಸಿದ ಬೆನ್ನಲ್ಲೇ, “ಚೀನಾ ಪರ ವರದಿ ಪ್ರಕಟಿಸಲು ಅಮೆರಿಕ ಉದ್ಯಮಿಯಿಂದ ನ್ಯೂಸ್‌ಕ್ಲಿಕ್ ವೆಬ್‌ಸೈಟ್ 28 ಕೋಟಿ ರೂ. ಪಡೆದಿದೆ” ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಚೀನಾ ಪರವಾಗಿ ಕಾರ್ಯನಿರ್ವಹಿಸುತ್ತಿರುವ, ಚೀನಾ ನಡೆಗಳ ಪರ ಪ್ರಚಾರ ನಡೆಸುವ ಅಮೆರಿಕ ಉದ್ಯಮಿ ನೆವಿಲ್ಲೆ ರಾಯ್ ಸಿಂಘಂ ಅವರಿಗೆ ಸಂಬಂಧಿಸಿದ ಹಲವು ಕಂಪನಿಗಳಿಂದ 2018ರಿಂದ 2021ರ ಅವಧಿಯಲ್ಲಿ 28.29 ಕೋಟಿ ರೂ. ಪಡೆದಿರುವುದಕ್ಕೆ ದೆಹಲಿ ಪೊಲೀಸ್ ಇಲಾಖೆಯ ಸ್ಪೆಷಲ್ ಸೆಲ್‌ಗೆ ಸಾಕ್ಷ್ಯಗಳು ದೊರೆತಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನ್ಯೂಸ್‌ಕ್ಲಿಕ್ ಪಡೆದುಕೊಂಡಿರುವ 28.29 ಕೋಟಿ ರೂಪಾಯಿಯಲ್ಲಿ ಅಮೆರಿಕದ ಜಸ್ಟಿಸ್ ಆ್ಯಂಡ್ ಎಜುಕೇಷನ್ ಫಂಡ್ ಸಂಸ್ಥೆಯಿಂದ 27.51 ಕೋಟಿ ರೂ., ಜಿಎಸ್‌ಪಿಎಎನ್ ಎಲ್‌ಎಲ್‌ಸಿ ಕಂಪನಿಯಿಂದ 26.98 ಲಕ್ಷ ರೂ., ಟ್ರೈಕಾಂಟಿನೆಂಟಲ್ ಲಿಮಿಟೆಡ್ ಐಎನ್‌ಸಿಯಿಂದ 49.31 ಲಕ್ಷ ರೂ. ಹಾಗೂ ಬ್ರೆಜಿಲ್ ಮೂಲದ ಸೆಂಟ್ರೋ ಪಾಪ್ಯುಲರ್ ಡೆ ಮಿಡಾಸ್ ಕಂಪನಿಯಿಂದ 2.03 ಲಕ್ಷ ರೂ. ಪಡೆದಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಏನಿದು ಚೀನಾ ಫಂಡಿಂಗ್ ಕೇಸ್?
ನ್ಯೂಸ್‌ಕ್ಲಿಕ್ ಸಂಸ್ಥೆಯಲ್ಲಿ ಚೀನಾ ಹೂಡಿಕೆ ಮಾಡಿದೆ. ಅಕ್ರಮವಾಗಿ ಹಣ ವರ್ಗಾವಣೆ ಹಾಗೂ ಚೀನಾ ಪರವಾಗಿ ಸುದ್ದಿಗಳನ್ನು ಪ್ರಕಟಿಸಿದ ಆರೋಪದ ಹಿನ್ನೆಲೆಯಲ್ಲಿ ಇ.ಡಿ ತನಿಖೆ ನಡೆಸುತ್ತಿದೆ. 2021ರಲ್ಲಿ ನ್ಯೂಸ್‌ಕ್ಲಿಕ್ ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕೂಡ ದಾಳಿ ನಡೆಸಿ, ಪರಿಶೀಲನೆ ಮಾಡಿದ್ದರು. ಇದಾದ ಬಳಿಕ ಜಾರಿ ನಿರ್ದೇಶನಾಲಯವು ನ್ಯೂಸ್‌ಕ್ಲಿಕ್‌ಗೆ ಸಂಬಂಧಿಸಿದ ಕೆಲವು ಆಸ್ತಿಗಳನ್ನು ಕೂಡ ಜಪ್ತಿ ಮಾಡಿದೆ.
ಇದನ್ನೂ ಓದಿ: NewsClick Case: ಚೀನಾದಿಂದ ಹಣ ಪಡೆದು ವರದಿ; ನ್ಯೂಸ್‌ಕ್ಲಿಕ್ ಸಂಪಾದಕ ಪ್ರಬೀರ್ ಪುರಕಾಯಸ್ಥ ಬಂಧನ
ಗಮನ ಸೆಳೆದ ನ್ಯೂಯಾರ್ಕ್ ಟೈಮ್ಸ್ ವರದಿ
ನ್ಯೂಸ್‌ಕ್ಲಿಕ್‌ನಲ್ಲಿ ಚೀನಾ ಹೂಡಿಕೆ ಕುರಿತು ಕಳೆದ ಆಗಸ್ಟ್‌ನಲ್ಲಿ ಅಮೆರಿಕದ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತ್ತು. “ಚೀನಾದ ಪರವಾಗಿ ನಿಲುವು ಹೊಂದಿರುವ, ಚೀನಾ ನಿರ್ಧಾರಗಳನ್ನು ಬೆಂಬಲಿಸುವ ಅಮೆರಿಕದ ಉದ್ಯಮಿ ನೆವಿಲ್ಲೆ ರಾಯ್ ಸಿಂಘಂ ಎಂಬುವರು ಹಲವು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದು, ಇವುಗಳಲ್ಲಿ ನ್ಯೂಸ್‌ಕ್ಲಿಕ್ ಕೂಡ ಇದೆ” ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಿತ್ತು. ಚೀನಾ ಹೂಡಿಕೆ, ಅಕ್ರಮವಾಗಿ ಹಣ ವರ್ಗಾವಣೆ ಸೇರಿ ಹಲವು ಆರೋಪಗಳನ್ನು ನ್ಯೂಸ್‌ಕ್ಲಿಕ್ ಸಂಪಾದಕ ಪ್ರಬೀರ್ ಪುರಕಾಯಸ್ಥ (Prabir Purakayastha) ಅಲ್ಲಗಳೆದಿದ್ದಾರೆ. ಇದೆಲ್ಲ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.