Site icon Vistara News

Digitalization | ವೃತ್ತಪತ್ರಿಕೆ ನೋಂದಣಿ ಡಿಜಿಟಲೀಕರಣ, ಡಿಡಿಯ ಪ್ರೀಮಿಯಂ ಕಾರ್ಯಕ್ರಮ ಒಟಿಟಿಗೆ

Digitalization

ನವ ದೆಹಲಿ: ವೃತ್ತಪತ್ರಿಕೆ ನೋಂದಣಿಯನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲು ಸರ್ಕಾರ ಮುಂದಾಗಿದೆ. ಇದರ ಜತೆಗೆ ಪ್ರಸಾರ ಭಾರತಿಯು ತನ್ನಲ್ಲಿರುವ ಹಳೆಯ, ಪ್ರೀಮಿಯಂ ಕಾರ್ಯಕ್ರಮಗಳನ್ನು ಒಟಿಟಿಯಲ್ಲಿ ಪ್ರಸಾರಿಸಲೂ ಮುಂದಾಗಿದೆ.

ಡಿಜಿಟಲ್‌ ಇಂಡಿಯಾ ಉಪಕ್ರಮದ ಅಂಗವಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದ್ದು, ಮುಂದಿನ ವರ್ಷದ ಮಾರ್ಚ್‌ 31ರ ಒಳಗೆ ವೃತ್ತಪತ್ರಿಕೆ ರಿಜಿಸ್ಟ್ರಾರ್‌ ಕಚೇರಿಯನ್ನು ಕಾಗದಮುಕ್ತಗೊಳಿಸಲು ನಿರ್ಧರಿಸಲಾಗಿದೆ. ಈ ಮೊದಲು, ವೃತ್ತಪತ್ರಿಕೆಗಳ ನೋಂದಣಿ ಪ್ರಕ್ರಿಯೆ ಮೂರು- ನಾಲ್ಕು ತಿಂಗಳುಗಳ ಕಾಲ ತೆಗೆದುಕೊಳ್ಳುತ್ತಿತ್ತು. ಡಿಜಿಟಲೀಕರಣದ ಬಳಿಕ ಒಂದೇ ವಾರದಲ್ಲಿ ಆಗುವ ಸಂಭವವಿದೆ. ಡಿಜಿಟಲೀಕರಣದ ಅಂಗವಾಗಿ ಕಳೆದ ಅಕ್ಟೋಬರ್‌ನಲ್ಲಿ 21.9 ಲಕ್ಷ ಸರ್ಕಾರಿ ಕಡತಗಳನ್ನು ಕಚೇರಿಗಳಿಂದ ಹೊರಹಾಕಲಾಗಿದ್ದು, ಇವುಗಳನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗಿದೆ.

ಇನ್ನೊಂದು ಉಪಕ್ರಮದಲ್ಲಿ, ಪ್ರಸಾರ ಭಾರತಿಯು ತನ್ನಲ್ಲಿರುವ ಪ್ರೀಮಿಯಂ ಕಾರ್ಯಕ್ರಮಗಳನ್ನು ಒಟಿಟಿ ವೇದಿಕೆಗಳಿಗೆ ನೀಡಲು ನಿರ್ಧರಿಸಿದೆ. ಉತ್ತಮ ಬಿಡ್‌ ನೀಡುವ ಒಟಿಟಿ ವೇದಿಕೆಗಳಿಗೆ ತನ್ನಲ್ಲಿರುವ ಕಾರ್ಯಕ್ರಮಗಳನ್ನು ನೀಡುವ ಸಿಂಡಿಕೇಶನ್‌ ಪಾಲಿಸಿಯನ್ನು ಪ್ರಸಾರ ಭಾರತಿ ರೂಪಿಸಿದೆ. 1959ರಲ್ಲಿ ದೂರದರ್ಶನ ಪ್ರಸಾರ ಆರಂಭಿಸಿದ್ದು, ದೇಶದ ಸಂಸ್ಕೃತಿಗೆ ಸಂಬಂಧಿಸಿದ, ಐತಿಹಾಸಿಕ ಅನಿಸುವ ಮಹತ್ವದ ಕಾರ್ಯಕ್ರಮಗಳು ಅದರ ಬಳಿ ಇವೆ. ಹಣಕಾಸು ಸಂಗ್ರಹಕ್ಕೆ ಇದನ್ನು ಒಟಿಟಿ ವೇದಿಕೆಗಳಿಗೆ ನೀಡಲು ಬಳಸಬಹುದಾಗಿದೆ ಎಂದು ಪ್ರಸಾರ ಭಾರತಿಯ ಸಿಂಡಿಕೇಶನ್‌ ಪಾಲಿಸಿ ಹೇಳಿದೆ.

ಇದನ್ನೂ ಓದಿ | Strike On Pharma Firms | ಔಷಧ ಅವ್ಯವಹಾರ ಮಾಡುವ ಕಂಪನಿಗಳ ಮೇಲೆ ಕೇಂದ್ರ ಸರ್ಕಾರ ʼಸರ್ಜಿಕಲ್‌ ಸ್ಟ್ರೈಕ್ʼ‌

Exit mobile version