Site icon Vistara News

Cash Reward: ಖಲಿಸ್ತಾನಿ ಉಗ್ರ ಲಾಂಡಾ, ರಿಂದಾರ ಮಾಹಿತಿ ನೀಡಿದವರಿಗೆ ಎನ್ಐಎ ಬಹುಮಾನ! ಎಷ್ಟು ಹಣ ಸಿಗುತ್ತೆ?

NIA Announces cash reward on Khalistani terrorists land and rinda

ನವದೆಹಲಿ: ಕೆನಡಾ ಮೂಲದ ನಾಯಕ ಲಖ್ಬೀರ್ ಸಿಂಗ್ ಲಾಂಡಾ (Lakhbir Singh Landa) ಮತ್ತು ಪಾಕಿಸ್ತಾನ ಮೂಲದ ಹರ್ವಿಂದರ್ ಸಿಂಗ್ ರಿಂದಾ (Harwinder Singh Rinda) ಸೇರಿದಂತೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ (BKI) ಸಂಘಟನೆಯ ಐವರು ಉಗ್ರರ ಬಗ್ಗೆ ಮಾಹಿತಿ ನೀಡಿದವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬುಧವಾರ ನಗದು ಬಹುಮಾನ(Cash reward) ಘೋಷಿಸಿದೆ. ಖಲಿಸ್ತಾನದ (Khalistan) ಪ್ರಮುಖ ನಾಯಕರಾದ ಲಾಂಡಾ ಮತ್ತು ರಿಂದಾ ಅವರ ಬಗ್ಗೆ ಮಾಹಿತಿ ನೀಡಿದವರಿಗೆ ತನಿಖಾ ಸಂಸ್ಥೆಯು ತಲಾ 10 ಲಕ್ಷ ರೂ. ಬಹುಮಾನ ಘೋಷಿಸಿದರೆ, ಪರ್ಮಿಂದರ್ ಸಿಂಗ್ ಕೈರಾ ಅಲಿಯಾಸ್ ಪತ್ತು, ಸತ್ನಾಮ್ ಸಿಂಗ್ ಅಲಿಯಾಸ್ ಸತ್ಬೀರ್ ಸಿಂಗ್ ಮತ್ತು ಯದ್ವಿಂದರ್ ಸಿಂಗ್ ಅಲಿಯಾಸ್‌ ಯಡ್ಡಾಗೆ ತಲಾ 5 ಲಕ್ಷ ರೂ. ಘೋಷಿಸಲಾಗಿದೆ ಎಂದು ಎನ್ಐಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದೇ ವೇಳೆ, ತನಿಖಾ ಸಂಸ್ಥೆಯು ಪಂಜಾಬ್‌ನಲ್ಲಿ ಕೊಲೆಗಳು, ಡ್ರಗ್ಸ್ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಸೇರಿದಂತೆ ವಿವಿಧ ಚಟುವಟಿಕೆಗಳ ಹಿಂದೆ ಇರುವ ಹಾಗೂ ಬ್ರಿಟನ್‌ನಲ್ಲಿ ಭಾರತ ವಿರೋಧಿ ಕೃತ್ಯಗಳಲ್ಲಿ ಭಾಗವಹಿಸಿದ ಖಲಿಸ್ತಾನಿ-ದರೋಡೆಕೋರರ 43 ಸದಸ್ಯರ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಬ್ರಿಟನ್ 19ರಲ್ಲಿ ನಡೆದ ಘಟನೆಯಲ್ಲಿ ಭಾಗವಹಿಸಿದವರ ಪೈಕಿ ಲಾಂಡ್, ಮೃತ ಕೆಟಿಎಫ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್, ಸಿಖ್ಸ್ ಫಾರ್ ಜಸ್ಟೀಸ್ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ ಸೇರಿದಂತೆ ಪ್ರೋ ಖಲಿಸ್ತಾನ ಎಲಿಮೆಂಟ್ಸ್(ಪಿಕೆಇಎಸ್)‌ನ ಅನೇಕರು ಇದ್ದಾರೆ ಎಂದು ಹೇಳಲಾಗುತ್ತಿದೆ.

ಎನ್‌ಐಎ ಬಿಡುಗಡೆ ಮಾಡಿರುವ 43 ಚಿತ್ರಗಳಲ್ಲಿ ಲಾರೆನ್ಸ್ ಬಿಷ್ಣೋಯ್, ಸತ್ವಿಂದರ್‌ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್, ದರೋಡೆಕೋರರಾದ ಕಲಾ ಜಥೇರಿ, ನವೀನ್ ದಬಾಸ್, ಸುನಿಲ್ ಬಲ್ಯಾನ್, ಅಮಿತ್ ದಾಗರ್ ಕೂಡ ಇದ್ದಾರೆ.

ಕೆನಡಾದ ಹಿಂದೂಗಳಿಗೆ ಖಲಿಸ್ತಾನ್‌ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಜೀವಬೆದರಿಕೆ

ಕೆನಡಾ- ಭಾರತದ ನಡುವೆ ಹಳಸುತ್ತಿರುವ ಸಂಬಂಧಗಳ (India Canada Row) ಹಿನ್ನೆಲೆಯಲ್ಲಿ, ಖಲಿಸ್ತಾನ್‌ ಉಗ್ರಗಾಮಿಗಳ ಗುಂಪಿನ (Khalistan terrorist) ನಾಯಕನೊಬ್ಬ ಕೆನಡಾದಲ್ಲಿರುವ ಹಿಂದೂಗಳಿಗೆ ಜೀವ ಬೆದರಿಕೆ ಒಡ್ಡಿದ್ದಾನೆ.

2019ರಲ್ಲಿ ಭಾರತದಲ್ಲಿ ನಿಷೇಧಿತವಾಗಿರುವ ಖಲಿಸ್ತಾನ್ ಪರ ಗುಂಪು ʼಸಿಖ್ಸ್‌ ಫಾರ್ ಜಸ್ಟೀಸ್ʼ (sikhs for justice- SFJ) ಕೆನಡಾದಲ್ಲಿ ವಾಸಿಸುವ ಹಿಂದೂಗಳಿಗೆ ಜೀವಬೆದರಿಕೆ ಹಾಕಿದೆ. SFJ ನಾಯಕ ಗುರುಪತ್‌ವಂತ್ ಸಿಂಗ್ ಪನ್ನುನ್ (Gurpatwant singh pannun), ಭಾರತವನ್ನು ಬೆಂಬಲಿಸುವವರು ಕೆನಡಾ ತೊರೆಯುವಂತೆ ಹೇಳಿದ್ದಾನೆ. ಅಂತರ್ಜಾಲದಲ್ಲಿ ರೌಂಡ್ ಹೊಡೆಯುತ್ತಿರುವ ಈತನ ವೀಡಿಯೊದಲ್ಲಿ, ಅಕ್ಟೋಬರ್ 29ರಂದು ವ್ಯಾಂಕೋವರ್‌ನಲ್ಲಿ ನಡೆಯುವ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಖಲಿಸ್ತಾನ್‌ ಪರ ಮತ ಚಲಾಯಿಸುವಂತೆ ಕೆನಡಾದ ಸಿಖ್‌ಗಳಿಗೆ ಕರೆ ನೀಡಿದ್ದಾನೆ.

ಈ ಸುದ್ದಿಯನ್ನೂ ಓದಿ: ಪಾಕ್ ಮಾನವ ಹಕ್ಕು ಹೋರಾಟಗಾರ್ತಿ ಹತ್ಯೆಯಲ್ಲಿ ಕೆನಡಾ ಸರ್ಕಾರದ ಪಾತ್ರ?

“ಇಂಡೋ-ಹಿಂದೂಗಳೇ… ಕೆನಡಾವನ್ನು ತೊರೆಯಿರಿ, ಭಾರತಕ್ಕೆ ಹೋಗಿ” ಎಂದು ಪನ್ನುನ್ ಘೋಷಿಸಿದ್ದಾನೆ. ʼʼಖಲಿಸ್ತಾನ್ ಪರ ಸಿಖ್ಖರು ಯಾವಾಗಲೂ ಕೆನಡಾಕ್ಕೆ ನಿಷ್ಠರಾಗಿದ್ದಾರೆ ಮತ್ತು ಯಾವಾಗಲೂ ಕೆನಡಾದ ಪರವಾಗಿದ್ದಾರೆ” ಎಂದಿದ್ದಾನೆ ಪನ್ನುನ್. ಭಾರತದಲ್ಲಿ ನಡೆದ ವಿವಿಧ ಖಲಿಸ್ತಾನ್‌ ಭಯೋತ್ಪಾದಕ ಘಟನೆಗಳ ಹೊಣೆಯನ್ನು ಪನ್ನೂನ್ ಈ ಹಿಂದೆ ಹೊತ್ತುಕೊಂಡಿದ್ದ. ಏಪ್ರಿಲ್ 2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಸ್ಸಾಂಗೆ ಭೇಟಿ ನೀಡಿದ ಸಂದರ್ಭ, ಅವರಿಗೆ ವೀಡಿಯೊ ಮೂಲಕ ಜೀವಬೆದರಿಕೆ ಹಾಕಿದ್ದ. ಇದೇ ವರ್ಷ 2 ತಿಂಗಳಲ್ಲಿ ಮೂವರು ಪ್ರಮುಖ ಖಲಿಸ್ತಾನಿ ನಾಯಕರ ಮರಣದ ನಂತರ ತಲೆಮರೆಸಿಕೊಂಡಿದ್ದಾನೆ. ಇವನು ವಿದೇಶಗಳಲ್ಲಿ ಖಲಿಸ್ತಾನ್‌ ಪರ ಕಾರ್ಯಕ್ರಮಗಳ ಸಂಯೋಜನೆ, ಭಾರತೀಯ ಅಧಿಕಾರಿಗಳಿಗೆ ಬೆದರಿಕೆ ಹಾಕುವುದು ಇತ್ಯಾದಿ ಕೃತ್ಯಗಳಲ್ಲಿ ತೊಡಗಿಕೊಂಡ ಕುಖ್ಯಾತ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version