Site icon Vistara News

India Canada Row: ಉಗ್ರನಿಗೆ ಕೆನಡಾ ಬೆಂಬಲದ ಬೆನ್ನಲ್ಲೇ ಖಲಿಸ್ತಾನಿ ಪನ್ನುನ್ ಆಸ್ತಿ ಜಪ್ತಿ ಮಾಡಿದ ಎನ್‌ಐಎ

Gurpatwant Singh Pannun

Gurpatwant Singh Pannun

ಚಂಡೀಗಢ: ನಿಷೇಧಿತ ಸಿಖ್ಸ್‌ ಫಾರ್‌ ಜಸ್ಟಿಸ್‌ (Sikhs For Justice) ಸಂಘಟನೆಯ ಉಗ್ರ, ಕೆನಡಾದಲ್ಲಿ ಕುಳಿತು ಭಾರತ ವಿರೋಧಿ ಕೃತ್ಯಗಳಲ್ಲಿ ತೊಡಗಿರುವ ಗುರುಪತ್ವಂತ್‌ ಸಿಂಗ್‌ ಪನ್ನುನ್‌ (Gurpatwant Singh Pannun) ಆಸ್ತಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಜಪ್ತಿ ಮಾಡಿದೆ. ಇದರೊಂದಿಗೆ ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ (Hardeep Singh Nijjar) ಹತ್ಯೆ ವಿಚಾರದಲ್ಲಿ ಭಾರತದ ವಿರುದ್ಧ ಆರೋಪ ಮಾಡಿದ ಕೆನಡಾಗೆ ಪರೋಕ್ಷವಾಗಿ ತಿರುಗೇಟು ನೀಡಿದಂತಾಗಿದೆ.

ಚಂಡಿಗಢದಲ್ಲಿರುವ ಒಂದು ನಿವಾಸ, ಅಮೃತಸರದ ಖಾನ್‌ಕೋಟ್‌ನಲ್ಲಿರುವ ಕೃಷಿ ಜಮೀನು ಹಾಗೂ ಪನ್ನು ಗ್ರಾಮದಲ್ಲಿರುವ ಕೃಷಿ ಜಮೀನನ್ನು ಕೂಡ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸಾರ್ವಜನಿಕ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ಗುರುಪತ್ವಂತ್‌ ಸಿಂಗ್‌ ಪನ್ನುನ್‌ ನಿವಾಸಕ್ಕೆ ಎನ್‌ಐಎ ನೋಟಿಸ್‌ ಅಂಟಿಸಿದೆ. ಜಮೀನಿನಲ್ಲೂ ಜಪ್ತಿ ಕುರಿತು ನೋಟಿಸ್‌ ಅಂಟಿಸಲಾಗಿದೆ.

ಕೆನಡಾ, ಬ್ರಿಟನ್‌, ಅಮೆರಿಕದಲ್ಲಿ ಪ್ರತ್ಯೇಕವಾದದ ವಿಷ ಬೀಜ ಬಿತ್ತುತ್ತಿರುವ ಸಿಖ್ಸ್‌ ಫಾರ್‌ ಜಸ್ಟಿಸ್‌ ಉಗ್ರ ಸಂಘಟನೆಯ ಸಂಸ್ಥಾಪಕರಲ್ಲಿ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಕೂಡ ಒಬ್ಬನಾಗಿದ್ದಾನೆ. ಭಾರತದಲ್ಲಿ ಕೂಡ ಸಿಖ್ಸ್‌ ಫಾರ್‌ ಜಸ್ಟಿಸ್‌ ಸಂಘಟನೆಯು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ ಕಾರಣ 2019ರಲ್ಲಿ ಕೇಂದ್ರ ಸರ್ಕಾರವು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ಇದನ್ನು ನಿಷೇಧಿಸಲಾಗಿದೆ. ಈಗ ಅದರ ಸಂಘಟನೆಯ ಉಗ್ರನ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಕೆನಡಾದಲ್ಲಿ ಕಳೆದ ಜೂನ್‌ 18ರಂದು ಹತ್ಯೆಗೀಡಾದ ಹರ್ದೀಪ್‌ ಸಿಂಗ್‌ ನಿಜ್ಜರ್‌ನನ್ನು ಜಸ್ಟಿನ್‌ ಟ್ರುಡೋ ಮಹಾನ್‌ ವ್ಯಕ್ತಿಯಂತೆ ಬಿಂಬಿಸುತ್ತಿದ್ದಾರೆ. ಅಷ್ಟೇ ಅಲ್ಲ, ಈತನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ, ಹತ್ಯೆ ಕುರಿತು ಯಾವುದೇ ಸಾಕ್ಷ್ಯ ಕೊಡದೆ ಆರೋಪದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇದರ ಬೆನ್ನಲ್ಲೇ ಭಾರತವು ಮತ್ತೊಬ್ಬ ಖಲಿಸ್ತಾನಿಯ ಆಸ್ತಿ ಜಪ್ತಿ ಮಾಡುವ ಮೂಲಕ ಪರೋಕ್ಷವಾಗಿ ಕೆನಡಾಗೆ ಟಾಂಗ್‌ ಕೊಟ್ಟಿದೆ.

ಇದನ್ನೂ ಓದಿ: India Canada Row: ಭಾರತದಿಂದಲೇ G20 ಶೃಂಗಸಭೆ ಯಶಸ್ವಿ ಎಂದ ಬ್ರೆಜಿಲ್;‌ ಕೆನಡಾ ಪಿಎಂ ಆರೋಪಕ್ಕೆ ಏನೆಂದಿತು?

ಜಿ20 ಶೃಂಗಸಭೆಗೆ ಬೆದರಿಕೆ ಹಾಕಿದ್ದ ಪನ್ನುನ್‌

ವಿದೇಶದಲ್ಲಿ ಕುಳಿತೇ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಭಾರತದ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾನೆ. ಕೆಲ ದಿನಗಳ ಹಿಂದಷ್ಟೇ ದೆಹಲಿಯಲ್ಲಿ ನಡೆದ ಜಿ20 ಶೃಂಗಸಭೆಗೆ ಅಡ್ಡಿಪಡಿಸಬೇಕು ಎಂದು ಭಾರತದ ಮುಸ್ಲಿಮರಿಗೆ ಈತ ಕರೆ ನೀಡಿದ್ದ. “ಕಾಶ್ಮೀರದ ಮುಸ್ಲಿಮರು ದೆಹಲಿಯಲ್ಲಿ ನಡೆಯುವ ಜಿ20 ಶೃಂಗಸಭೆಗೆ ಅಡ್ಡಿಪಡಿಸಬೇಕು. ಶುಕ್ರವಾರದ ಪ್ರಾರ್ಥನೆ ಬಳಿಕ ದೆಹಲಿಯಲ್ಲಿರುವ ಪ್ರಗತಿ ಮೈದಾನಕ್ಕೆ (ಶೃಂಗಸಭೆ ನಡೆಯುವ ಸ್ಥಳ) ಪರೇಡ್‌ ನಡೆಸಬೇಕು. ದೆಹಲಿಯಲ್ಲಿರುವ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಖಲಿಸ್ತಾನ ಧ್ವಜ ಹಾರಿಸಲಾಗುತ್ತದೆ” ಎಂದು ಗುರ್‌ಪತ್ವಂತ್‌ ಸಿಂಗ್‌ ಪನ್ನುನ್‌ ಎಚ್ಚರಿಕೆ ನೀಡಿದ್ದ.

Exit mobile version