Site icon Vistara News

ISIS Terror | ನೂಪುರ್‌ ಶರ್ಮಾ ಹತ್ಯೆಗೆ ಸ್ಕೆಚ್‌ ಹಾಕಿದ್ದವನಿಗಾಗಿ ರಷ್ಯಾಗೆ ತೆರಳಲಿವೆ ಐಬಿ, ಎನ್‌ಐಎ ತಂಡಗಳು!

ISIS

ನವದೆಹಲಿ: ರಷ್ಯಾದಲ್ಲಿ ಸೆರೆಸಿಕ್ಕಿರುವ ಐಸಿಸ್‌ ಉಗ್ರನ (ISIS Terror) ಕುರಿತು ಹೆಚ್ಚಿನ ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಆಂತರಿಕ ಗುಪ್ತಚರ ಇಲಾಖೆ (ಐಬಿ)ಯ ತಂಡಗಳು ಶೀಘ್ರದಲ್ಲಿಯೇ ರಷ್ಯಾಗೆ ತೆರಳಲಿವೆ ಎಂದು ತಿಳಿದುಬಂದಿದೆ. ಆತ್ಮಾಹುತಿ ಬಾಂಬ್‌ ದಾಳಿ ಮೂಲಕ ಬಿಜೆಪಿ ಉಚ್ಚಾಟಿತ ವಕ್ತಾರೆ ನೂಪುರ್‌ ಶರ್ಮಾರನ್ನು ಹತ್ಯೆಗೈಯಲು ಉಗ್ರ ಸಂಚು ರೂಪಿಸಿದ್ದ ಎಂದು ತಿಳಿದುಬಂದಿರುವ ಹಿನ್ನೆಲೆಯಲ್ಲಿ ರಷ್ಯಾಗೆ ತೆರಳಲಿವೆ ಎಂದು ಮೂಲಗಳು ತಿಳಿಸಿವೆ.

ಪ್ರವಾದಿ ಮೊಹಮ್ಮದ್‌ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ನೂಪುರ್‌ ಶರ್ಮಾ ಅವರನ್ನು ಹತ್ಯೆಗೈಯಬೇಕು ಎಂಬ ಏಕೈಕ ಕಾರಣಕ್ಕೆ ಐಸಿಸ್‌ ಉಗ್ರ ಅಜಮೋವ್‌, ಭಾರತದ ಕಡೆ ಹೊರಟಿದ್ದ ಎಂದು ತಿಳಿದುಬಂದಿದೆ. ಹಾಗಾಗಿ, ಭಾರತದ ತನಿಖಾ ಸಂಸ್ಥೆಗಳು ರಷ್ಯಾಗೆ ತೆರಳಿ ಅಲ್ಲಿನ ಗುಪ್ತಚರ ಇಲಾಖೆ, ಫೆಡರಲ್‌ ಸೆಕ್ಯುರಿಟಿ ಸರ್ವಿಸ್‌ ಅಧಿಕಾರಿಗಳ ಜತೆ ಚರ್ಚಿಸಲಿದ್ದಾರೆ. ಹಾಗೆಯೇ, ಉಗ್ರನ ಕುರಿತು ಸಂಪೂರ್ಣ ಮಾಹಿತಿ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

ಪ್ರಾಥಮಿಕ ತನಿಖೆ ಪ್ರಕಾರ ಭಾರತದತ್ತ ಹೊರಟಿದ್ದ ಅಜಮೋವ್‌ಗೆ ನೂಪುರ್‌ ಶರ್ಮಾ ಒಬ್ಬರನ್ನು ಮಾತ್ರ ಹತ್ಯೆಗೈಯುವ ಉದ್ದೇಶವಿತ್ತು ಎನ್ನಲಾಗಿದೆ. ಆದರೆ, ಈತ ಭಾರತದಲ್ಲಿ ಯಾರ ಕೊಲೆಗೆ ಸಂಚು ರೂಪಿಸಿದ್ದ, ಈತನ ಹಿನ್ನೆಲೆ ಏನು, ಉಗ್ರರ ಜಾಲದ ಹಿಂದಿರುವವರು ಯಾರು ಸೇರಿ ಹಲವು ವಿಷಯಗಳ ಕುರಿತು ತನಿಖೆ ನಡೆಸುವುದು ಭಾರತದ ತನಿಖಾ ಸಂಸ್ಥೆಗಳ ಉದ್ದೇಶವಾಗಿದೆ.

ಬಂಧಿತನಾಗಿರುವ ಉಗ್ರ ಮೂಲತಃ ಮಧ್ಯ ಏಷ್ಯಾದವನು ಎಂದು ತಿಳಿದುಬಂದಿದೆ. ಅವನು ಕಳೆದ ಏಪ್ರಿಲ್‌ನಿಂದ ಜೂನ್‌ ನಡುವೆ ಟರ್ಕಿಯಲ್ಲಿ ನಡೆದ ನೇಮಕಾತಿ ವೇಳೆ ಬಾಂಬರ್‌ ಆಗಲು ಆಯ್ಕೆಯಾಗಿದ್ದ. ಆರಂಭದಲ್ಲಿ ಐಸಿಸ್‌ ನೇಮಕಾತಿ ವಿಭಾಗದವರು ಟೆಲಿಗ್ರಾಂ ಮೂಲಕ ಈ ವ್ಯಕ್ತಿಯನ್ನು ಸಂಪರ್ಕಿಸಿದ್ದರು. ಇದಾದ ಬಳಿಕ ಇಸ್ತಾಂಬುಲ್‌ನಲ್ಲಿ ವೈಯಕ್ತಿಕ ಸಂದರ್ಶನ ನಡೆದಿತ್ತು ಎಂದು ಪ್ರಾಥಮಿಕ ತನಿಖಾ ವರದಿ ತಿಳಿಸಿದೆ.

ಇದನ್ನೂ ಓದಿ | ISIS terror | ರಷ್ಯದಲ್ಲಿ ಸಿಕ್ಕಿಬಿದ್ದ ಐಸಿಸ್‌ ಉಗ್ರನಿಗೆ ಆನ್‌ಲೈನ್‌ನಲ್ಲೇ ತರಬೇತಿ, ನೂಪುರ್‌ ಶರ್ಮಾ ಕೊಲ್ಲಲು ಸ್ಕೆಚ್‌

Exit mobile version