ಹೊಸದಿಲ್ಲಿ: ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾನುವಾರ ನಾಲ್ಕು ರಾಜ್ಯಗಳ ವಿವಿಧೆಡೆ ದಾಳಿ (NIA Raid) ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯಪ್ರದೇಶದ ದೇವಾಸ್ ಜಿಲ್ಲೆ, ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆ, ಉತ್ತರ ಪ್ರದೇಶದ ಅಜಂಗಢ ಜಿಲ್ಲೆ ಮತ್ತು ಕೇರಳದ ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ಶಂಕಿತರ ಮೇಲೆ ದಾಳಿ ನಡೆಸಲಾಗಿದೆ. ಮುಸ್ಲಿಂ ಉಗ್ರ ಸಂಘಟನೆ ಘಜ್ವಾ-ಎ-ಹಿಂದ್ (Ghazwa-e-Hind) ಹೆಡೆಮುರಿ ಕಟ್ಟಲು ಈ ದಾಳಿಗಳು ನಡೆದಿವೆ.
ಕಳೆದ ವರ್ಷ ಬಿಹಾರದ ಪಾಟ್ನಾ ಜಿಲ್ಲೆಯ ಫುಲ್ವಾರಿ ಶರೀಫ್ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಪಾಕಿಸ್ತಾನಿ ಪ್ರಜೆ ಝೈನ್ (pakistan terrorist) ಎಂಬಾತ ಸೃಷ್ಟಿಸಿದ ʼಘಜ್ವಾ-ಎ-ಹಿಂದ್’ ಎಂಬ ಮೂಲಭೂತವಾದಿ, ಪ್ರಚೋದನಕಾರಿ ಕಂಟೆಂಟ್‌ನ ವಾಟ್ಸ್ಯಾಪ್ ಗುಂಪಿನ ನಿರ್ವಾಹಕ ಮಾರ್ಗೂಬ್ ಅಹ್ಮದ್ ಡ್ಯಾನಿಶ್ ಅಲಿಯಾಸ್ ʼತಾಹಿರ್ʼನನ್ನು ಪೊಲೀಸರು ಬಂಧಿಸಿದ್ದರು. ನಂತರ ಈ ಪ್ರಕರಣವನ್ನು ಎನ್‌ಐಎಗೆ ವರ್ಗಾಯಿಸಲಾಯಿತು. ಎನ್‌ಐಎ ಈ ವರ್ಷದ ಆರಂಭದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಡಿಯಲ್ಲಿ ಮಾರ್ಗೂಬ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು.
ಎನ್‌ಐಎ ಅಧಿಕಾರಿಗಳ ಪ್ರಕಾರ, ನಿನ್ನೆಯ ಎನ್‌ಐಎ ದಾಳಿಗಳು ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳೊಂದಿಗೆ ಶಂಕಿತರು ಹೊಂದಿರುವ ಸಂಪರ್ಕವನ್ನು ಬಹಿರಂಗಪಡಿಸಿವೆ. “ಈ ಶಂಕಿತರು ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ಘಜ್ವಾ-ಎ-ಹಿಂದ್‌ನ ಆಮೂಲಾಗ್ರ, ಭಾರತ-ವಿರೋಧಿ ಕಲ್ಪನೆಯನ್ನು ಪ್ರಚಾರ ಮಾಡುವಲ್ಲಿ ತೊಡಗಿಸಿಕೊಂಡಿದ್ದಾರೆ” ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಾರ್ಗೂಬ್ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಯೆಮೆನ್ ದೇಶಗಳಿಂದ ಹಲವರನ್ನು ಗುಂಪಿಗೆ ಸೇರಿಸಿದ್ದ.
ವಾಟ್ಸ್ಯಾಪ್ ಗ್ರೂಪ್ ಅನ್ನು ಪಾಕಿಸ್ತಾನ ಮೂಲದ ಉಗ್ರರು ನಿರ್ವಹಿಸುತ್ತಿದ್ದಾರೆ. ಭಾರತದ ಭೂಪ್ರದೇಶದಲ್ಲಿ ಘಜ್ವಾ-ಎ-ಹಿಂದ್ ಸ್ಥಾಪಿಸಲು ಚುರುಕು, ಪ್ರಚೋದಿತ ಯುವಕರನ್ನು ಸೇರಿಸಿಕೊಳ್ಳುವ ಗುರಿಯನ್ನು ಹೊಂದಿದ್ದಾರೆ. “ಮಾರ್ಗೂಬ್ ಭಾರತದಾದ್ಯಂತ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸ್ಲೀಪರ್ ಸೆಲ್‌ಗಳನ್ನು ಹೆಚ್ಚಿಸುವ ಉದ್ದೇಶದಿಂದ ಗುಂಪಿನ ಸದಸ್ಯರನ್ನು ಪ್ರೇರೇಪಿಸಲು ಪ್ರಯತ್ನಿಸುತ್ತಿದ್ದ” ಎಂದು ಎನ್‌ಐಎ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: NIA Raids: ಪಂಜಾಬ್, ಹರ್ಯಾಣದ 14 ಕಡೆ ಎನ್ಐಎ ದಾಳಿ! ಕಾರಣ ಏನು?