Site icon Vistara News

ಏರ್ ಇಂಡಿಯಾ ಪ್ರಯಾಣಿಕರಿಗೆ ಬೆದರಿಕೆ! ಪನ್ನುನ್ ವಿರುದ್ಧ ಎನ್ಐಎ ಕೇಸ್

Gurpatwant Singh Pannun

Gurpatwant Singh Pannun

ನವದೆಹಲಿ: ನ.19 ರಂದು ಏರ್ ಇಂಡಿಯಾ (Air India) ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಬೆದರಿಕೆ ಹಾಕುವ ವಿಡಿಯೋ ಕುರಿತು ಖಲಿಸ್ತಾನ್ ಪರ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯ ಸಂಸ್ಥಾಪಕ ಗುರುಪತ್‌ವಂತ್ ಸಿಂಗ್ ಪನ್ನು(Gurpatwant Pannun) ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (NIA Case) ಸೋಮವಾರ ಪ್ರಕರಣ ದಾಖಲಿಸಿದೆ(Case Registered). ಏಜೆನ್ಸಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಪನ್ನುನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ, 153 ಎ ಮತ್ತು 506 ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ, 1967 ರ ಸೆಕ್ಷನ್ 10, 13, 16, 17, 18, 18 ಬಿ ಮತ್ತು 20 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನವೆಂಬರ್ 4ರಂದು ಬಿಡುಗಡೆ ಮಾಡಲಾದ ವಿಡಿಯೋದಲ್ಲಿ ಪನ್ನು, ನವೆಂಬರ್ 19ರಂದು ಸಿಖ್ಖರು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸದಂತೆ ಜೀವ ಬೆದರಿಗೆ ಹಾಕಿದ್ದ. ನವೆಂಬರ್ 19ರಂದು ಐಸಿಸಿ ವರ್ಲ್ಡ್ ಕಪ್‌ನ ಫೈನಲ್ ಪಂದ್ಯವನ್ನು ಗುಜರಾತ್‌ ಅಹಮದಾಬಾದ್‌ನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪನ್ನು ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಇಷ್ಟು ಮಾತ್ರವಲ್ಲದೇ, ಏರ್ ಇಂಡಿಯಾವನ್ನು ವಿಶ್ವದಲ್ಲಿ ಕಾರ್ಯನಿರ್ವಹಿಸಲು ಬಿಡುವುದಿಲ್ಲ ಎಂದು ಆತ ಬೆದರಿಕೆ ಹಾಕಿದ್ದ. ಈ ವಿಡಿಯೋ ಪ್ರಸಾರ ಬೆನ್ನಲ್ಲೇ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಕೆನಡಾ ಮತ್ತು ಇಂಡಿಯಾದಲ್ಲಿ ಭದ್ರತಾ ಸಂಸ್ಥೆಗಳು ವ್ಯಾಪಕ ತನಿಖೆಯನ್ನು ಕೈಗೊಂಡಿದ್ದವು. ಏರ್ ಇಂಡಿಯಾ ಪ್ರಯಾಣಿಸುವ ಇತರ ಕೆಲವು ನಿರ್ದಿಷ್ಟ ರಾಷ್ಟ್ರಗಳಲ್ಲೂ ತನಿಖೆಯನ್ನು ನಡೆಸಲಾಗಿತ್ತು ಎನ್ನಲಾಗಿದೆ.

ಜೀವ ಬೆದರಿಕೆ ಇರುವುದರಿಂದ ನವೆಂಬರ್ 19ರಂದು ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸದಂತೆ ಸಿಖ್ಖರಿಗೆ ಪನ್ನುನ್ ಎಚ್ಚರಿಸಿದ್ದ. ನವೆಂಬರ್ 19 ರಂದು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು (IGIA) ಮುಚ್ಚಲಾಗುವುದು ಎಂದು ಪನ್ನುನ್ ಭಾರತ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದ. ನವದೆಹಲಿಯಲ್ಲಿರುವ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಗತ್ತಿನ ಅತ್ಯಂತ ಜನನಿಬಿಡ ವಿಮಾನನಿಲ್ದಾಣಗಳಲ್ಲಿ ಒಂದಾಗಿದೆ.

ಪನ್ನುನ್ ಪಂಜಾಬ್‌ನಲ್ಲಿ ಚಾಲ್ತಿಯಲ್ಲಿರುವ ಸಮಸ್ಯೆಗಳ ಸುತ್ತ, ವಿಶೇಷವಾಗಿ ಸಿಖ್ ಧರ್ಮಕ್ಕೆ ಸಂಬಂಧಿಸಿದಂತೆ, ದೇಶದಲ್ಲಿ ಸಿಖ್ಖರು ಮತ್ತು ಇತರ ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಮೂಲಕ ಸುಳ್ಳು ನಿರೂಪಣೆಯನ್ನು ಸೃಷ್ಟಿಸುತ್ತಿದ್ದಾರೆ ಎಂದು ಎನ್ಐಎ ಹೇಳಿದೆ.

ಈ ಸುದ್ದಿಯನ್ನೂ ಓದಿ: Gurpatwant Singh Pannun: ದೆಹಲಿಯಲ್ಲಿ ಮತ್ತೆ ಖಲಿಸ್ತಾನಿ ಬರಹ; ಆಸ್ತಿ ಜಪ್ತಿ ಬೆನ್ನಲ್ಲೇ ಪನ್ನುನ್‌ ಕುತಂತ್ರ

Exit mobile version