ನವದೆಹಲಿ: ರಾಷ್ಟ್ರೀಯ ತನಿಖಾ ದಳ(NIA)ಭಾನುವಾರ 19 ದೇಶದ್ರೋಹಿ ಖಲಿಸ್ತಾನಿ ಭಯೋತ್ಪಾದಕರ (Khalistani Terrorist) ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇವರು ಯುಕೆ, ಯುಎಸ್, ಕೆನಡಾ, ದುಬೈ, ಪಾಕಿಸ್ತಾನ ಮತ್ತಿತರ ರಾಷ್ಟ್ರಗಳಲ್ಲಿ ನೆಲೆಸಿದ್ದು, ಅವರ ಆಸ್ತಿಯನ್ನು ಮುಟ್ಟುಗೋಲು ಹಾಕುವುದಾಗಿ ತಿಳಿಸಿದೆ.
ನಿಷೇಧಿತ ಖಲಿಸ್ತಾನಿ ಗುಂಪು ಸಿಖ್ ಫಾರ್ ಜಸ್ಟಿಸ್(SFJ)ನ ಸದಸ್ಯ, ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಅವರ ಆಸ್ತಿಯನ್ನು ಎನ್‌ಐಎ ಮುಟ್ಟುಗೋಲು ಹಾಕಿದ ಮಾರನೆಯ ದಿನ ಈ ಮಹತ್ವದ ಬೆಳವಣಿಗೆ ನಡೆದಿದೆ.ವರದಿಯ ಪ್ರಕಾರ ಈ 19 ಉಗ್ರರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ವಿದೇಶದಲ್ಲಿದ್ದುಕೊಂಡು ಭಾರತದ ವಿರುದ್ದ ಇವರು ಸಂಚು ರೂಪಿಸುತ್ತಿದ್ದಾರೆ ಎನ್ನುವ ಆರೋಪವಿದೆ.
ಇದನ್ನೂ ಓದಿ: India Canada Row: ಉಗ್ರನಿಗೆ ಕೆನಡಾ ಬೆಂಬಲದ ಬೆನ್ನಲ್ಲೇ ಖಲಿಸ್ತಾನಿ ಪನ್ನುನ್ ಆಸ್ತಿ ಜಪ್ತಿ ಮಾಡಿದ ಎನ್‌ಐಎ
19 ಉಗ್ರರ ಪಟ್ಟಿ
- ಬ್ರಿಟನ್ನಲ್ಲಿರುವ ಉಗ್ರರು: ಪಮ್ಮ, ಕುಲ್ವಂತ್ ಸಿಂಗ್ ಮುತ್ರ, ಸುಖ್ಪಾಲ್ ಸಿಂಗ್, ಸರಬ್ಜೀತ್ ಸಿಂಗ್ ಬೆನ್ನೂರ್, ಕುಲ್ವಂತ್ ಸಿಂಗ್ ಆಲಿಯಾಸ್ ಕಾಂತ, ಗುರುಪ್ರೀತ್ ಸಿಂಗ್ ಆಲಿಯಾಸ್ ಭಾಗಿ ಮತ್ತು ಜೀತ್
- ಪಾಕಿಸ್ತಾನದಲ್ಲಿರುವ ಉಗ್ರರು: ವಧ್ವ ಸಿಂಗ್ ಬದ್ದಾರ್ ಆಲಿಯಾಸ್ ಚಾಚಾ, ರಂಜಿತ್ ಸಿಂಗ್ ನೀತ
- ಅಮೆರಿಕದಲ್ಲಿರುವ ಉಗ್ರರು: ಜೈ ಧಲಿವಾಲ್, ಹರ್ಪ್ರೀತ್ ಸಿಂಗ್ ಆಲಿಯಾಸ್ ರಾಣ ಸಿಂಗ್, ಹರ್ಜಪ್ ಸಿಂಗ್ ಆಲಿಯಾಸ್ ಜಪ್ಪಿ ಸಿಂಗ್, ಅಮರ್ದೀಪ್ ಸಿಂಗ್ ಪೂರೆವಾಲ್ ಮತ್ತು ಎಸ್.ಹಿಮ್ಮತ್ ಸಿಂಗ್
- ದುಬೈನಲ್ಲಿರುವ ಉಗ್ರರು-ಜಸ್ಮೀತ್ ಸಿಂಗ್ ಹಕೀಮ್ಜಾದ
- ಆಸ್ಟ್ರೇಲಿಯಾದಲ್ಲಿರುವ ಉಗ್ರರು-ಗುರ್ಜಂತ್ ಸಿಂಗ್ ಧಿಲ್ಲಾನ್
- ಯುರೋಪ್ ಮತ್ತು ಕೆನಡಾದಲ್ಲಿರುವವರು-ಲಖ್ಬೀರ್ ಸಿಂಗ್ ರೋಡ್
- ಕೆನಡಾದಲ್ಲಿರುವ ಉಗ್ರ-ಜತೀಂದರ್ ಸಿಂಗ್ ಗ್ರೆವಾಲ್
ಮುಟ್ಟುಗೋಲು
ಶನಿವಾರ ಎನ್‌ಐಎ ಪನ್ನುನ್ ಅವರಿಗೆ ಸೇರಿದ ಪಂಜಾಬ್‌ನಲ್ಲಿದ್ದ ಮನೆ ಮತ್ತು ಅಮೃತಸರ್‌ನಲ್ಲಿರುವ ಜಾಗವನ್ನು ವಶ ಪಡಿಸಿಕೊಂಡಿತ್ತು. ಚಂಡಿಗಢದಲ್ಲಿರುವ ಒಂದು ನಿವಾಸ, ಅಮೃತಸರದ ಖಾನ್‌ಕೋಟ್‌ನಲ್ಲಿರುವ ಕೃಷಿ ಜಮೀನು ಹಾಗೂ ಪನ್ನು ಗ್ರಾಮದಲ್ಲಿರುವ ಕೃಷಿ ಜಮೀನನ್ನು ಕೂಡ ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ಮನೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸಾರ್ವಜನಿಕ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ಗುರುಪತ್ವಂತ್ ಸಿಂಗ್ ಪನ್ನುನ್ ನಿವಾಸಕ್ಕೆ ಎನ್‌ಐಎ ನೋಟಿಸ್ ಅಂಟಿಸಿತ್ತು. ಜಮೀನಿನಲ್ಲೂ ಜಪ್ತಿ ಕುರಿತು ನೋಟಿಸ್ ಅಂಟಿಸಲಾಗಿತ್ತು. ಕೆನಡಾ, ಬ್ರಿಟನ್, ಅಮೆರಿಕದಲ್ಲಿ ಪ್ರತ್ಯೇಕವಾದದ ವಿಷ ಬೀಜ ಬಿತ್ತುತ್ತಿರುವ ಸಿಖ್ಸ್ ಫಾರ್ ಜಸ್ಟಿಸ್ ಉಗ್ರ ಸಂಘಟನೆಯ ಸಂಸ್ಥಾಪಕರಲ್ಲಿ ಗುರುಪತ್ವಂತ್ ಸಿಂಗ್ ಪನ್ನುನ್ ಕೂಡ ಒಬ್ಬನಾಗಿದ್ದಾನೆ.