ನವದೆಹಲಿ: ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು 5ನೇ ಬಾರಿಗೆ ಕೇಂದ್ರ ಬಜೆಟ್ (Union Budget 2023) ಮಂಡಿಸಿ ಸೈ ಎನಿಸಿಕೊಂಡಿದ್ದಾರೆ. ಈ ಬಾರಿ ಬಜೆಟ್ ಮಂಡನೆಗೂ ಕರ್ನಾಟಕಕ್ಕೂ ವಿಶೇಷವಾದ ನಂಟಿದೆ. ಏನೆಂದರೆ, ನಿರ್ಮಾಲಾ ಅವರು ಧರಿಸಿದ್ದ, ಕೈಯಿಂದ ನೇಯ್ದ ಇಳಕಲ್ ಸೀರೆ ಕರ್ನಾಟಕದ್ದು. ಇಷ್ಟೇ ಆಗಿದ್ದರೆ ಅದರಲ್ಲೇನೂ ವಿಶೇಷ ಇರಲಿಲ್ಲ. ಈ ಸೀರೆ ಮೇಲೆ ಚಿತ್ತಾರಗೊಂಡಿದ್ದ ಕಸೂತಿಯನ್ನು ಧಾರವಾಡದಲ್ಲಿ ಮಾಡಲಾಗಿದೆ. ರಾಜ್ಯಸಭೆಯಲ್ಲಿ ಕರ್ನಾಟಕವನ್ನು ಅವರು ಪ್ರತಿನಿಧಿಸುತ್ತಾರೆ.
ನಿರ್ಮಲಾ ಉಟ್ಟಿದ್ದ ಸೀರೆಯ ಮೇಲಿನ ಕಸೂತಿಯ ಪ್ರಾದೇಶಿಕ ಕರಕುಶಲತೆ, ಸಾಂಪ್ರದಾಯಿಕ ಕಲೆಯಾಗಿದ್ದು, ಅದಕ್ಕೆ ಭೌಗೋಳಿಕ ಹೆಗ್ಗುರುತು(GI Tag) ಕೂಡ ದೊರೆತಿದೆ. ಅಂದರೆ, ಈ ವಿಶೇಷ ಕಸೂತಿಯನ್ನು ಧಾರವಾಡ ಪ್ರದೇಶ ವ್ಯಾಪ್ತಿಯಲ್ಲಿ ಮಾತ್ರವೇ ಮಾಡಲಾಗುತ್ತದೆ. ಇದು ಧಾರವಾಡ ವಿಶೇಷ ಕಸೂತಿ ಎನಿಸಿಕೊಂಡಿದೆ.
ನಿರ್ಮಲಾ ಅವರು ಧರಿಸಿದ್ದ ಸೀರೆಯ ಮೇಲೆ ರಥ, ನವಿಲು ಮತ್ತು ಕಮಲಗಳು ಸಾಂಪ್ರದಾಯಿಕ ಕಸೂತಿಯ ಮೂಲಕ ಚಿತ್ತಾರ ಬಿಡಿಸಲಾಗಿದೆ. ಧಾರವಾಡದ ಆರತಿ ಕ್ರಾಫ್ಟ್‌ನ ಆರತಿ ಹಿರೇಮಠ್ ಅವರು ಈ ಕಸೂತಿಯ ಹಿಂದಿನ ಕಲಾವಿದೆ. ಈ ಸೀರೆಯನ್ನು ಧಾರವಾಡ ಲೋಕಸಭಾ ಸದಸ್ಯ ಪ್ರಹ್ಲಾದ್ ಜೋಶಿ ಅವರು ನಿರ್ಮಲಾ ಸೀತಾರಾಮನ್ ಅವರಿಗೆ ಗಿಫ್ಟ್ ನೀಡಿದ್ದರು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: Union Budget 2023: ಇದು ಮಿತ್ರ್ ಕಾಲ್ ಬಜೆಟ್: ರಾಹುಲ್ ಗಾಂಧಿ ವ್ಯಂಗ್ಯ
ಆದರೆ, ಪಿಟಿಐಯೊಂದಿಗೆ ಮಾತನಾಡಿರುವ ಆರತಿ ಹಿರೇಮಠ್ ಅವರು ಕಸೂತಿಯಿಂದ ಕೂಡಿದ ಎರಡು ಸೀರೆಗಳಿಗೆ ಕಳೆದ ಡಿಸೆಂಬರ್‌ನಲ್ಲಿ ಆರ್ಡರ್ ಬಂದಿತ್ತು. ಆದರೆ, ಯಾವ ಸಂದರ್ಭ ಎಂಬುದು ಗೊತ್ತಿರಲಿಲ್ಲ. ನಾವು ಸೀರೆಗಳನ್ನು ಕಳುಹಿಸಿ ಕೊಟ್ಟಿದ್ದೆವು. ನಾವು ವಿನ್ಯಾಸಗೊಳಿಸಿದ ಸೀರೆಯನ್ನು ಧರಿಸಿ ಅವರು ಬಜೆಟ್ ಮಂಡಿಸಲು ಸಂಸತ್ತಿಗೆ ಹೋಗುತ್ತಿರುವುದನ್ನು ನಾವು ಬುಧವಾರ ಬೆಳಗ್ಗೆ ಟಿವಿಯಲ್ಲಿ ನೋಡಿದೆವು. ತುಂಬಾ ಸಂತೋಷವಾಯಿತು ಎಂದು ಅವರು ತಿಳಿಸಿದ್ದಾರೆ.