ಹೊಸದಿಲ್ಲಿ: ಡೀಸೆಲ್ ವಾಹನಗಳ (Diesel vehicles) ಮಾರಾಟದ ಮೇಲೆ ಹೆಚ್ಚುವರಿ 10% ಮಾಲಿನ್ಯ ತೆರಿಗೆಯನ್ನು (Pollution tax) ಹೇರುವ ಯಾವುದೇ ಪ್ರಸ್ತಾಪ ಕೇಂದ್ರದ ಮುಂದೆ ಇಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ.
ನಿನ್ನೆ ಅವರು ದೆಹಲಿಯಲ್ಲಿ ನಡೆದ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) 63ನೇ ವಾರ್ಷಿಕ ಸಮಾವೇಶದಲ್ಲಿ ಮಾತನಾಡುತ್ತ, ಡೀಸೆಲ್ ವಾಹನಗಳ ಮಾರಾಟದ ಮೇಲೆ ಹೆಚ್ಚುವರಿ 10% ಮಾಲಿನ್ಯ ತೆರಿಗೆ ವಿಧಿಸುವ ಪ್ರಸ್ತಾಪ ಮಾಡುವುದಾಗಿ ಹೇಳಿದ್ದರು ಎಂದು ವರದಿಯಾಗಿತ್ತು. ಇಂದು ಎಕ್ಸ್ (ಟ್ವಿಟ್ಟರ್)ನಲ್ಲಿ ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ.
There is an urgent need to clarify media reports suggesting an additional 10% GST on the sale of diesel vehicles. It is essential to clarify that there is no such proposal currently under active consideration by the government. In line with our commitments to achieve Carbon Net…
— Nitin Gadkari (@nitin_gadkari) September 12, 2023
ʼʼಡೀಸೆಲ್ ವಾಹನಗಳ ಮಾರಾಟದ ಮೇಲೆ ಹೆಚ್ಚುವರಿ 10% ಜಿಎಸ್‌ಟಿಯನ್ನು ಸೂಚಿಸುವ ಕುರಿತ ಮಾಧ್ಯಮ ವರದಿಗಳಿಗೆ ಸ್ಪಷ್ಟನೆ ನೀಡುವ ತುರ್ತು ಅಗತ್ಯವಿದೆ. ಅಂತಹ ಯಾವುದೇ ಪ್ರಸ್ತಾವನೆಯು ಪ್ರಸ್ತುತ ಸರ್ಕಾರದ ಸಕ್ರಿಯ ಪರಿಗಣನೆಯಲ್ಲಿಲ್ಲ. 2070ರ ವೇಳೆಗೆ ಕಾರ್ಬನ್ ಹೊರಸೂಸುವಿಕೆಯಲ್ಲಿ ಶೂನ್ಯವನ್ನು ಸಾಧಿಸಲು, ಡೀಸೆಲ್‌ನಂತಹ ಅಪಾಯಕಾರಿ ಇಂಧನಗಳಿಂದ ಉಂಟಾಗುವ ವಾಯು ಮಾಲಿನ್ಯದ ಮಟ್ಟವನ್ನು ಕಡಿಮೆ ಮಾಡಲು ಮತ್ತು ಆಟೋಮೊಬೈಲ್ ಮಾರಾಟದಲ್ಲಿನ ತ್ವರಿತ ಬೆಳವಣಿಗೆಗೆ ಅನುಗುಣವಾಗಿ, ಸ್ವಚ್ಛ ಮತ್ತು ಹಸಿರು ಪರ್ಯಾಯ ಇಂಧನಗಳನ್ನು ಸಕ್ರಿಯವಾಗಿ ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ. ಈ ಇಂಧನಗಳು ಆಮದಾಗಿರಬಾರದು; ಕಡಿಮೆ ವೆಚ್ಚದ್ದಾಗಿರಬೇಕು; ಸ್ಥಳೀಯವಾಗಿರಬೇಕು ಮತ್ತು ಮಾಲಿನ್ಯ-ಮುಕ್ತವಾಗಿರಬೇಕುʼʼ ಎಂದು ಗಡ್ಕರಿ ಟ್ವೀಟ್ ಮಾಡಿದ್ದಾರೆ.
2014ರಿಂದ ಡೀಸೆಲ್ ಕಾರುಗಳ ಉತ್ಪಾದನೆಯಲ್ಲಿ ಇಳಿಕೆ ಕಂಡುಬಂದಿದೆ. ಅವುಗಳ ಉತ್ಪಾದನೆ ಒಟ್ಟು ಉತ್ಪಾದನೆಯಲ್ಲಿ 52 ಪ್ರತಿಶತ ಇತ್ತು. ಈಗ ಅವು ಕೇವಲ 18 ಪ್ರತಿಶತದಷ್ಟು ಇವೆ. ಡೀಸೆಲ್ ವಾಹನಗಳನ್ನು ಕಡಿಮೆ ಬಳಸಬೇಕು ಎಂದು ಗಡ್ಕರಿ ನಿನ್ನೆ ಸಮಾರಂಭದಲ್ಲಿ ಹೇಳಿದ್ದರು.
ಡೀಸೆಲ್ ಮತ್ತು ಪೆಟ್ರೋಲ್‌ನಿಂದ ಜೈವಿಕ ಇಂಧನಗಳು, ಪರ್ಯಾಯ ಇಂಧನಗಳು ಮತ್ತು ಮೊಬಿಲಿಟಿಗೆ ಇಂಧನ ಮೂಲಗಳಿಗೆ ಪರಿವರ್ತನೆ ಮಾಡಲು ಇದು ಸರಿಯಾದ ಸಮಯ. ನಾವು ವಿಶ್ವದ ನಂ. 1 ಆಟೋಮೊಬೈಲ್ ತಯಾರಕರಾಗುವ ಗುರಿಯನ್ನು ಹೊಂದಿರಬೇಕು. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಈ ಗುರಿಯನ್ನು ಸಾಧಿಸುವ ವಿಶ್ವಾಸವಿದೆ. ಆದರೆ ಒಂದು ಅಡಚಣೆಯಿದೆ; ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ರೂಪುಗೊಳ್ಳಲು ನಾವು ನಮ್ಮ ಸಾಗಣೆ ವೆಚ್ಚಗಳನ್ನು ಕಡಿತಗೊಳಿಸಬೇಕಾಗುತ್ತದೆ ಎಂದು ಗಡ್ಕರಿ ಹೇಳಿದ್ದರು.
ಇದನ್ನೂ ಓದಿ: Nitin Gadkari: ದ್ವಾರಕಾ ಎಕ್ಸ್‌ಪ್ರೆಸ್‌ವೇ ವಿಡಿಯೊ ಹಂಚಿಕೊಂಡ ಗಡ್ಕರಿ; ಭೂಮಿ ಮೇಲೆ ರಂಗೋಲಿ ಬಿಡಿಸಿದಂತೆ ಇದೆ ರಸ್ತೆ