Site icon Vistara News

Nitin Gadkari: ಡೀಸೆಲ್ ವಾಹನಗಳ ಮೇಲೆ 10% ಹೆಚ್ಚುವರಿ ಮಾಲಿನ್ಯ ತೆರಿಗೆ: ನಿತಿನ್‌ ಗಡ್ಕರಿ ಪ್ರಸ್ತಾಪ

nitin gadkari

ಹೊಸದಿಲ್ಲಿ: ದೇಶದಲ್ಲಿ ಡೀಸೆಲ್ ವಾಹನಗಳ (Diesel Vehicles) ಮೇಲೆ ಮಾಲಿನ್ಯ ತೆರಿಗೆಯಾಗಿ (Pollution Tax) ಶೇಕಡಾ 10ರಷ್ಟು ಹೆಚ್ಚುವರಿ ಜಿಎಸ್‌ಟಿಯನ್ನು ವಿಧಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಪ್ರಸ್ತಾಪಿಸಿದ್ದಾರೆ.

ದೆಹಲಿಯಲ್ಲಿ ನಡೆದ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ (SIAM) 63ನೇ ವಾರ್ಷಿಕ ಸಮಾವೇಶದಲ್ಲಿ ಗಡ್ಕರಿ ಮಾತನಾಡುತ್ತಿದ್ದರು. ಡೀಸೆಲ್ ವಾಹನಗಳಿಂದ ಹೆಚ್ಚುತ್ತಿರುವ ಮಾಲಿನ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ರಸ್ತೆಯಲ್ಲಿ ಡೀಸೆಲ್ ಕಾರುಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು ಎಂದು ಹೇಳಿದರು.

2014ರಿಂದ ಡೀಸೆಲ್ ಕಾರುಗಳ ಉತ್ಪಾದನೆಯಲ್ಲಿ ಇಳಿಕೆ ಕಂಡುಬಂದಿದೆ. ಅವುಗಳ ಉತ್ಪಾದನೆ ಒಟ್ಟು ಉತ್ಪಾದನೆಯಲ್ಲಿ 52 ಪ್ರತಿಶತ ಇತ್ತು. ಈಗ ಅವು ಕೇವಲ 18 ಪ್ರತಿಶತದಷ್ಟು ಇವೆ. ಡೀಸೆಲ್ ವಾಹನಗಳನ್ನು ಕಡಿಮೆ ಬಳಸಬೇಕು. ಡೀಸೆಲ್ ಕಾರುಗಳ ಬಳಕೆಯನ್ನು ನಿರುತ್ಸಾಹಗೊಳಿಸಲು ಡೀಸೆಲ್ ವಾಹನಗಳ ಮೇಲೆ ಹೆಚ್ಚುವರಿ ಶೇಕಡಾ 10ರಷ್ಟು ತೆರಿಗೆಯನ್ನು ವಿಧಿಸಲು ನಾನು ಹಣಕಾಸು ಸಚಿವರಿಗೆ ಪತ್ರ ಬರೆಯುತ್ತೇನೆ ಎಂದು ಗಡ್ಕರಿ ಹೇಳಿದರು.

ಡೀಸೆಲ್ ಮತ್ತು ಪೆಟ್ರೋಲ್‌ನಿಂದ ಜೈವಿಕ ಇಂಧನಗಳು, ಪರ್ಯಾಯ ಇಂಧನಗಳು ಮತ್ತು ಮೊಬಿಲಿಟಿಗೆ ಇಂಧನ ಮೂಲಗಳಿಗೆ ಪರಿವರ್ತನೆ ಮಾಡಲು ಇದು ಸರಿಯಾದ ಸಮಯ. ನಾವು ವಿಶ್ವದ ನಂ. 1 ಆಟೋಮೊಬೈಲ್ ತಯಾರಕರಾಗುವ ಗುರಿಯನ್ನು ಹೊಂದಿರಬೇಕು. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಈ ಗುರಿಯನ್ನು ಸಾಧಿಸುವ ವಿಶ್ವಾಸವಿದೆ. ಆದರೆ ಒಂದು ಅಡಚಣೆಯಿದೆ; ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕವಾಗಿ ರೂಪುಗೊಳ್ಳಲು ನಾವು ನಮ್ಮ ಸಾಗಣೆ ವೆಚ್ಚಗಳನ್ನು ಕಡಿತಗೊಳಿಸಬೇಕಾಗುತ್ತದೆ ಎಂದು ಗಡ್ಕರಿ ಹೇಳಿದರು.

ಇದನ್ನೂ ಓದಿ: Nitin Gadkari: ‘ರಾಜಕೀಯದಿಂದಲೇ ನಿವೃತ್ತನಾಗುವೆ’; ಚುನಾವಣೆ ಮೊದಲೇ ನಿತಿನ್‌ ಗಡ್ಕರಿ ಹೀಗೆ ಹೇಳಿದ್ದೇಕೆ?

Exit mobile version