ನವದೆಹಲಿ: ರಾಷ್ಟ್ರ ರಾಜಧಾನಿಯಿಂದ ಹರಿಯಾಣಕ್ಕೆ ಸಂಪರ್ಕ ಕಲ್ಪಿಸುವ, ದೇಶದ ಮೊದಲ ಎಲೆವೇಟೆಡ್ ಎಂಟು ಪಥಗಳ ಹೆದ್ದಾರಿ ಎಂದೇ ಖ್ಯಾತಿಯಾಗಿರುವ ದ್ವಾರಕಾ ಎಕ್ಸ್‌ಪ್ರೆಸ್‌ವೇ (Dwarka Expressway) ವಿಡಿಯೊವನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ (Nitin Gadkari) ಹಂಚಿಕೊಂಡಿದ್ದಾರೆ. ರಸ್ತೆಯ ಉದ್ದ, ವಿಸ್ತೀರ್ಣ, ಸುರಂಗ, ಸೇತುವೆ, ಎಂಜಿನಿಯರಿಂಗ್ ಕೌಶಲ ಸೇರಿ ಹಲವು ದೃಶ್ಯಗಳನ್ನು ವಿಡಿಯೊ ಒಳಗೊಂಡಿದೆ.
ವಿಡಿಯೊವನ್ನು ಹಂಚಿಕೊಂಡ ನಿತಿನ್ ಗಡ್ಕರಿ, “ಎಂಜಿನಿಯರಿಂಗ್‌ನ ಅದ್ಭುತ ಎಂದರೆ ಅದು ದ್ವಾರಕಾ ಎಕ್ಸ್‌ಪ್ರೆಸ್ ವೇ. ಇದು ಅತ್ಯಾಧುನಿಕ ತಂತ್ರಜ್ಞಾನ, ಭವಿಷ್ಯದ ಏಳಿಗೆಯ ದ್ಯೋತಕ” ಎಂದು ಅವರು ಬರೆದುಕೊಂಡಿದ್ದಾರೆ. ವಿಡಿಯೊವನ್ನು 7 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, ನೂರಾರು ಜನ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಹಾಗೆಯೇ, ಮೂರ್ನಾಲ್ಕು ತಿಂಗಳಲ್ಲಿ ರಸ್ತೆಯನ್ನು ಲೋಕಾರ್ಪಣೆಗೊಳಿಸಲಾಗುತ್ತದೆ ಎಂದು ಗಡ್ಕರಿ ತಿಳಿಸಿದ್ದಾರೆ.
ದೇಶದಲ್ಲಿ ಸುಮಾರು 5 ಸಾವಿರ ಕಿಲೋಮೀಟರ್ ಹೆದ್ದಾರಿ ನಿರ್ಮಿಸುವ ಗುರಿಯೊಂದಿಗೆ ಜಾರಿಗೆ ತರಲಾಗುತ್ತಿರುವ ಭಾರತ್ ಮಾಲಾ ಯೋಜನೆಯ ಮೊದಲ ಹಂತದಲ್ಲಿ 91 ಸಾವಿರ ಕೋಟಿ ರೂ. ಮೀಸಲಿಡಲಾಗಿದೆ. ಈ ಯೋಜನೆ ಅಡಿಯಲ್ಲಿ ದ್ವಾರಕಾ ಎಕ್ಸ್‌ಪ್ರೆಸ್ ವೇ ನಿರ್ಮಿಸಲಾಗಿದೆ. 27.6 ಕಿಲೋಮೀಟರ್ ಉದ್ದದ ರಸ್ತೆಯನ್ನು 9 ಸಾವಿರ ಕೋಟಿ ರೂ. ವ್ಯಯಿಸಿ ನಿರ್ಮಿಸಲಾಗಿದೆ.
ಇದನ್ನೂ ಓದಿ: Nitin Gadkari: ಹೆದ್ದಾರಿಗಳ ಡೇಂಜರ್ ಸ್ಪಾಟ್ ನಿವಾರಣೆಗೆ ನಿತಿನ್ ಗಡ್ಕರಿ ಕಠಿಣ ಸೂಚನೆ
ದ್ವಾರಕಾ ಎಕ್ಸ್‌ಪ್ರೆಸ್ ವೇ ಲೋಕಾರ್ಪಣೆಗೊಂಡರೆ ದೆಹಲಿಯಿಂದ ಹರಿಯಾಣಕ್ಕೆ ಸುಲಭವಾಗಿ ಸಂಪರ್ಕ ಸಾಧಿಸುವ ಜತೆಗೆ ದ್ವಾರಕಾದಿಂದ ಮಾಣೆಸರ್‌ಗೆ 15 ನಿಮಿಷ, ಮಾಣೆಸರ್‌ನಿಂದ ಇಂದಿರಾ ಗಾಂಧಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ಗೆ 20 ನಿಮಿಷ, ದ್ವಾರಕಾದಿಂದ ಸಿಂಘು ಗಡಿಗೆ 25 ನಿಮಿಷ ಹಾಗೂ ಮಾಣೆಸರ್‌ನಿಂದ ಸಿಂಘು ಗಡಿಗೆ 45 ನಿಮಿಷದಲ್ಲಿ ತೆರಳಬಹುದಾಗಿದೆ ಎಂದು ಸರ್ಕಾರ ತಿಳಿಸಿದೆ.