Site icon Vistara News

Nitish Kumar: ನಿತೀಶ್‌ ಕುಮಾರ್‌ ಸರ್ಕಾರಕ್ಕೆ ಹಿನ್ನಡೆ; ಮೀಸಲಾತಿ ಪ್ರಮಾಣ ಶೇ. 65ಕ್ಕೆ ಏರಿಸಿದ್ದ ಆದೇಶಕ್ಕೆ ಹೈಕೋರ್ಟ್ ತಡೆ

Nitish Kumar

Nitish Kumar

ಪಾಟ್ನಾ: ಪ್ರಮುಖ ಬೆಳವಣಿಗೆಯೊಂದರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Nitish Kumar) ಸರ್ಕಾರಕ್ಕೆ ಹಿನ್ನಡೆಯಾಗಿದೆ. ಕಳೆದ ವರ್ಷ ಮೀಸಲಾತಿ (Reservation) ಪ್ರಮಾಣವನ್ನು ಶೇ. 50ರಿಂದ ಶೇ. 65ಕ್ಕೆ ಹೆಚ್ಚಿಸಿದ್ದ ಬಿಹಾರ ಸರ್ಕಾರದ ಆದೇಶವನ್ನು ಪಾಟ್ನಾ ಹೈಕೋರ್ಟ್ (Patna High Court)​ ರದ್ದುಗೊಳಿಸಿದೆ. ರಾಜ್ಯವ್ಯಾಪಿ ಜಾತಿ ಸಮೀಕ್ಷೆ ನಡೆಸಿ ಸರ್ಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಪ್ರಮಾಣವನ್ನು ಕಳೆದ ವರ್ಷ ಹೆಚ್ಚಿಸಲಾಗಿತ್ತು. ರಾಜ್ಯ ಸರ್ಕಾರದ ಈ ಕ್ರಮವು ಸುಪ್ರೀಂ ಕೋರ್ಟ್ ಆದೇಶಿಸಿದ ಮೀಸಲಾತಿಯ ಶೇ. 50 ರ ಮಿತಿಯನ್ನು ಮೀರಿದೆ. ಹೀಗಾಗಿ ಪಾಟ್ನಾ ಹೈಕೋರ್ಟ್‌ ಇದನ್ನು ಸಂವಿಧಾನ ಬಾಹಿರ ಎಂದು ಕರೆದಿದೆ.

2023ರ ನವೆಂಬರ್‌ನಲ್ಲಿ ನಿತೀಶ್ ಕುಮಾರ್ ನೇತೃತ್ವ ಸರ್ಕಾರ ಜಾರಿಗೆ ತಂದ ಕಾನೂನನ್ನು ವಿರೋಧಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಕೆ.ವಿನೋದ್ ಚಂದ್ರನ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶವನ್ನು ಹೊರಡಿಸಿದೆ.

ಅರ್ಜಿದಾರರ ಪರ ವಕೀಲರಲ್ಲಿ ಒಬ್ಬರಾದ ರಿತಿಕಾ ರಾಣಿ ಈ ಬಗ್ಗೆ ಮಾತನಾಡಿ, “ಮೀಸಲಾತಿ ಕಾನೂನುಗಳ ಈ ತಿದ್ದುಪಡಿ ಸಂವಿಧಾನವನ್ನು ಉಲ್ಲಂಘಿಸುತ್ತವೆ ಎಂದು ನಾವು ಅರ್ಜಿ ಸಲ್ಲಿಸಿದ್ದೇವೆ. ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ನ್ಯಾಯಾಲಯವು ಇಂದು ಆದೇಶ ಹೊರಡಿಸಿದೆʼʼ ಎಂದು ತಿಳಿಸಿದರು.

ಕಳೆದ ವರ್ಷ ನವೆಂಬರ್‌ನಲ್ಲಿ ಬಿಹಾರ ವಿಧಾನಸಭೆ ಮೀಸಲಾತಿ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿದ ಕೆಲವು ದಿನಗಳ ನಂತರ, ನಿತೀಶ್ ಕುಮಾರ್ ಸರ್ಕಾರವು ರಾಜ್ಯ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಮಿತಿಯನ್ನು ಶೇ. 50ರಿಂದ ಶೇ. 65 ಕ್ಕ ಹೆಚ್ಚಿಸಲು ಗೆಜೆಟ್ ಅಧಿಸೂಚನೆಗಳನ್ನು ಹೊರಡಿಸಿತ್ತು.

ಹೈಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಆರ್‌ಜೆಡಿಯ ರಾಜ್ಯಸಭಾ ಸಂಸದ ಮನೋಜ್ ಕುಮಾರ್ ಝಾ, ಇದು ದುರದೃಷ್ಟಕರ ಬೆಳವಣಿಗೆ ಎಂದು ಹೇಳಿದರು. ಮೀಸಲಾತಿಯನ್ನು ಸಂವಿಧಾನದ ಒಂಬತ್ತನೇ ಪರಿಚ್ಛೇದದಡಿ ಸೇರಿಸಿ ಮೀಸಲಾತಿ ಹೆಚ್ಚಳವನ್ನು ಮುಂದುವರಿಸಬೇಕು ಎಂದು ಅವರು ಆಗ್ರಹಿಸಿದರು. “ಕೇಂದ್ರದಲ್ಲಿ ಈಗ ಅಸ್ತಿತ್ವದಲ್ಲಿರುವ ಸರ್ಕಾರಕ್ಕೆ ನಿತೀಶ್‌ ಕುಮಾರ್‌ ಬೆಂಬಲ ನೀಡಿದ್ದಾರೆ. ಹೀಗಾಗಿ ಅವರು ಉನ್ನತ ನ್ಯಾಯಾಲಯವನ್ನು ಸಮೀಪಿಸಿ ಮೀಸಲಾತಿಉ ಈ ಹಕ್ಕನ್ನು ಸಂರಕ್ಷಿಸಬೇಕುʼʼ ಎಂದು ಹೇಳಿದರು.

ಮೀಸಲಾತಿ ಹೆಚ್ಚಳ

ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಅತ್ಯಂತ ಹಿಂದುಳಿದ ವರ್ಗಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಶೇ. 50ರಿಂದ ಶೇ. 65ಕ್ಕೆ ಹೆಚ್ಚಿಸಲು ಬಿಹಾರ ವಿಧಾನಸಭೆ 2023ರ ನವೆಂಬರ್‌ನಲ್ಲಿ ಮೀಸಲಾತಿ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿತು. ಪರಿಷ್ಕೃತ ಮೀಸಲಾತಿ ಕೋಟಾದಲ್ಲಿ ಎಸ್‌ಸಿ ವರ್ಗಕ್ಕೆ ಶೇ. 20, ಎಸ್‌ಟಿ ವರ್ಗಕ್ಕೆ ಶೇ. 2, ಒಬಿಸಿ ವರ್ಗಕ್ಕೆ ಶೇಕಡಾ 18 ಮತ್ತು ಇಬಿಸಿ ವರ್ಗಕ್ಕೆ ಶೇ. 25ರಷ್ಟು ಮೀಸಲಾತಿ ನೀಡಲಾಗಿದೆ.

ಇದನ್ನೂ ಓದಿ: Agnipath Scheme: ಸರ್ಕಾರ ರಚನೆಗೂ ಮುನ್ನ ನಿತೀಶ್‌ ಕುಮಾರ್‌ ಬಿಗ್‌ ಡಿಮ್ಯಾಂಡ್‌! ಬಿಜೆಪಿಗೆ ʼಅಗ್ನಿʼ ಪರೀಕ್ಷೆ ಗ್ಯಾರಂಟಿ!

ಆರಂಭದಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಆರ್‌ಜೆಡಿ ಮತ್ತು ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿತ್ತು. ಬಳಿಕ ಬಿಜೆಪಿಯ ಬೆಂಬಲದೊಂದಿಗೆ ಮತ್ತೆ ಮುಖ್ಯಮಂತ್ರಿಯಾದರು.

Exit mobile version