ಹೊಸದಿಲ್ಲಿ: ಲೋಕಸಭೆ ಚುನಾವಣೆ 2024ರ (Lok Sabha Election 2024) ಮೊದಲಿನ ದೊಡ್ಡ ಬದಲಾವಣೆ ಬಿಹಾರದಲ್ಲಿ ಸಂಭವಿಸುತ್ತಿದ್ದು, ಎನ್‌ಡಿಎ (NDA) ಕಡೆ ಹೆಜ್ಜೆ ಹಾಕುವ ತಮ್ಮ ಅಂತಿಮ ನಡೆಯನ್ನು ಬಿಹಾರ ಸಿಎಂ ನಿತೀಶ್ ಕುಮಾರ್ (Bihar CM Nitish Kumar) ನಾಳೆ ತೆಗೆದುಕೊಳ್ಳಲಿದ್ದಾರೆ. ಇದಕ್ಕೆ ಸಂಬಂಧಿಸಿ ಬಿಹಾರದಲ್ಲಿ ಹಲವಾರು ರಾಜಕೀಯ ಬೆಳಣಿಗೆಗಳು ನಡೆಯುತ್ತಿವೆ.
2020ರ ಚುನಾವಣೆಯ ಸಂದರ್ಭದ ಘಟನೆಗಳನ್ನು ಹೋಲುವ ಘಟನೆಗಳು ಬಿಹಾರದಲ್ಲಿ ಮತ್ತೆ ನಡೆಯುತ್ತಿವೆ. ನಿತೀಶ್ ಕುಮಾರ್ (Nitish Kumar) ಅವರು ಭಾರತೀಯ ಜನತಾ ಪಕ್ಷ (BJP) ಬೆಂಬಲದೊಂದಿಗೆ ಒಂಬತ್ತನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನಾಳೆ ಮತ್ತೆ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಇದು ರಾಜಕೀಯ ಮಂಥನದ ಕೋಲಾಹಲಕ್ಕೆ ಕಾರಣವಾಗಿದೆ.
ನಿತೀಶ್ ಕುಮಾರ್ ಅವರು ಮಹಾಘಟಬಂಧನ್ (ಮಹಾಮೈತ್ರಿಕೂಟ) ಮುರಿದು ಭಾರತೀಯ ಜನತಾ ಪಕ್ಷದೊಂದಿಗೆ ಮತ್ತೆ ಒಂದಾಗುತ್ತಾರೆ ಎಂಬ ಊಹಾಪೋಹಗಳ ಮೇಲೆ ಬಿಹಾರದಲ್ಲಿ ರಾಜಕೀಯ ಕೋಲಾಹಲ ನಡೆದಿದೆ. ರಾಜ್ಯದ ಎಲ್ಲಾ ಪಕ್ಷಗಳು ತಮ್ಮ ಶಾಸಕರ ಸಭೆಗಳನ್ನು ನಿಯೋಜಿಸುತ್ತಿವೆ. ವಾರಾಂತ್ಯದ ಶನಿವಾರ ಮತ್ತು ಭಾನುವಾರ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಕರೆದಿದೆ. ಬಿಹಾರ ಕಾಂಗ್ರೆಸ್ ನಾಯಕ ಶಕೀಲ್ ಅಹ್ಮದ್ ಖಾನ್ ಅವರು ಶನಿವಾರ ಮಧ್ಯಾಹ್ನ 2 ಗಂಟೆಗೆ ಪಕ್ಷದ ಶಾಸಕರು ಮತ್ತು ಮಾಜಿ ಶಾಸಕರ ಸಭೆಯನ್ನು ಪೂರ್ಣೆಯಾದಲ್ಲಿ ಕರೆದಿದ್ದಾರೆ.
ಆರ್‌ಜೆಡಿ ನಾಯಕ ಮತ್ತು ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ (Tejaswi Yadav) ಅವರು ತಮ್ಮ ನಿವಾಸದಲ್ಲಿ ಪಕ್ಷದ ಆಪ್ತ ನಾಯಕರನ್ನು ಭೇಟಿಯಾಗುತ್ತಿದ್ದಾರೆ. ಜೆಡಿಯು ನಾಯಕ ಮೈತ್ರಿಯನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದರೆ ಅಧಿಕಾರ ಕಳೆದುಕೊಳ್ಳುವಿಕೆ ತಡೆಯುವ ತಂತ್ರವನ್ನು ರೂಪಿಸಲು ಮುಂದಾಗಿದ್ದಾರೆ.
ಈ ನಡುವೆ ಸರ್ಕಾರಿ ಅಧಿಕಾರಿಗಳ ದೊಡ್ಡ ಪ್ರಮಾಣದ ವರ್ಗಾವಣೆಯೂ ಆಗಿದ್ದು, ಸಸ್ಪೆನ್ಸ್ ಅನ್ನು ಹೆಚ್ಚಿಸಿದೆ. ಬಿಹಾರದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳ ವ್ಯಾಪಕ ವರ್ಗಾವಣೆಗಳು ನಡೆಯುತ್ತಿವೆ. ಸದ್ಯದ ʼಮಹಾಘಟಬಂಧನ್’ ಸಮ್ಮಿಶ್ರ ಸರ್ಕಾರದ ಮೇಲೆ ಕರಿನೆರಳು ಬಿದ್ದಿದ್ದು, ಸರ್ಕಾರದಲ್ಲಿ ಬದಲಾವಣೆ ಸನ್ನಿಹಿತವಾಗಿರುವುದು ಖಚಿತವಾಗಿದೆ.
ಮುಂಬರುವ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಬಿಜೆಪಿ ಇಂದು ತನ್ನ ಸಂಸದರು ಮತ್ತು ಶಾಸಕರ ಸಭೆಯನ್ನು ಕರೆದಿದೆ. ಬಿಹಾರ ರಾಜ್ಯ ಘಟಕದ ಮುಖ್ಯಸ್ಥ ಸಾಮ್ರಾಟ್ ಚೌಧರಿ ಅವರು ನಿತೀಶ್ ಕುಮಾರ್ ಜೊತೆಗಿನ ಮೈತ್ರಿಯ ಬಗ್ಗೆ ಮಾತಾಡಿಲ್ಲ. ಆದರೆ ಹಲವು ಬಿಜೆಪಿ ನಾಯಕರು ತೆರೆಮರೆಯ ಚರ್ಚೆಗಳ ಬಗ್ಗೆ ಮಹತ್ವದ ಸುಳಿವುಗಳನ್ನು ಕೊಟ್ಟಿದ್ದಾರೆ. ಮೂಲಗಳ ಪ್ರಕಾರ ನಿತೀಶ್ ಕುಮಾರ್ ನಾಳೆ ಶಾಸಕಾಂಗ ಪಕ್ಷದ ಅಧಿವೇಶನ ಕರೆದಿದ್ದಾರೆ.
ಇದನ್ನೂ ಓದಿ: Nitish Kumar: ಬಿಜೆಪಿ ಜತೆ ನಿತೀಶ್ ಕುಮಾರ್ ದೋಸ್ತಿ ಪಕ್ಕಾ; ಜ.28ಕ್ಕೆ ಸಿಎಂ ಆಗಿ ಪದಗ್ರಹಣ
ನಿನ್ನೆ ರಾಜಭವನದಲ್ಲಿ ನಡೆದ ಗಣರಾಜ್ಯೋತ್ಸವದ ಚಹಾ ಕೂಟದಲ್ಲಿ ನಿತೀಶ್ ಕುಮಾರ್ ಅವರು ರಾಜ್ಯದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಜೊತೆಗಿಲ್ಲದೆ ಏಕಾಂಗಿಯಾಗಿ ಕಾಣಿಸಿಕೊಂಡಿದ್ದರು. ಇದು ಜನತಾ ದಳ (ಯುನೈಟೆಡ್) ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಡುವಿನ ಭಿನ್ನಾಭಿಪ್ರಾಯವನ್ನು ಸೂಚಿಸಿತ್ತು. ತಕ್ಷಣದ ಗಮನವು ಲೋಕಸಭೆ ಚುನಾವಣೆಯ ಮೇಲಿರುವಂತೆ ಕಂಡುಬಂದರೂ, ಬಿಹಾರ ವಿಧಾನಸಭೆಯನ್ನು ಸದ್ಯ ವಿಸರ್ಜಿಸಲಾಗುವುದಿಲ್ಲ ಎಂದು ಮೂಲಗಳು ಸೂಚಿಸಿವೆ.
ಜೆಡಿಯು ವಕ್ತಾರ ನೀರಜ್ ಕುಮಾರ್ ಶನಿವಾರ ತಮ್ಮ ಪಕ್ಷ ಬಿಜೆಪಿ ಜೊತೆಗೆ ಕೈಜೋಡಿಸುವ ಕುರಿತ ವರದಿಗಳನ್ನು ತಳ್ಳಿಹಾಕಿದ್ದಾರೆ. “ಅನುಮಾನ ಯಾಕೆ? ಅಂದರೆ ಅವರಿಗೆ (ಆರ್‌ಜೆಡಿಗೆ) ಈ ಕುರಿತು ಸಂದೇಹವಿದೆ ಅಷ್ಟೆ. ನಾವು ಪಾರದರ್ಶಕವಾಗಿದ್ದೇವೆ. ನಾವು ಹಿಂಬಾಗಿಲ ರಾಜಕಾರಣ ಮಾಡುವುದಿಲ್ಲ” ಎಂದಿದ್ದಾರೆ. “ನಿತೀಶ್ ಕುಮಾರ್ ಅವರಿಗೆ ಆರ್‌ಜೆಡಿಯ ಜೊತೆಗೆ ಅಸಮಾಧಾನ ಇದೆ. ಆದರೆ ನಾವು ನಮ್ಮ ಕೆಲಸದ ಮೇಲೆ ಕೇಂದ್ರೀಕರಿಸುತ್ತೇವೆ. ಈ ಪರಿಸ್ಥಿತಿ ಏಕೆ ಹೀಗೆ ಎಂದು ಆರ್‌ಜೆಡಿ ವಿವರಿಸಬೇಕು” ಎಂದು ಅವರು ಹೇಳಿದ್ದಾರೆ. ಇಂಡಿಯಾ ಮೈತ್ರಿಕೂಟದ ಬಗ್ಗೆ ಕೇಳಲಾದ ಪ್ರಶ್ನೆಗೆ, “ಅದರ ಬಗ್ಗೆ ನಾವು ಸರಿಯಾದ ಸಮಯದಲ್ಲಿ ಮಾತನಾಡುತ್ತೇವೆ. ನಿತೀಶ್ ನಿಜವಾಗಿಯೂ ಇಂಡಿಯಾ ಬ್ಲಾಕ್ ನಾಯಕರ ಬಗ್ಗೆ ಅಸಮಾಧಾನ ಹೊಂದಿದ್ದಾರೆ” ಎಂದಿದ್ದಾರೆ.
ಇದನ್ನೂ ಓದಿ: Nitish Kumar: ನಿತೀಶ್ ಕುಮಾರ್ ಮತ್ತೆ ಯುಟರ್ನ್; ಇವರ ‘ಜಂಪ್’ಗಿದೆ ‘ಲಾಂಗ್’ ಇತಿಹಾಸ!