ಪಟನಾ: ಬಿಹಾರದಲ್ಲಿ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರು 8ನೇ ಬಾರಿಗೆ ಮುಖ್ಯಮಂತ್ರಿಯಾಗಿ ಮತ್ತು ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಎರಡನೇ ಬಾರಿಗೆ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆಗಸ್ಟ್ 9ರಂದು ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸುವ ಮೂಲಕ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರವನ್ನು ಪತನವನ್ನು ಅಧಿಕೃತಗೊಳಿಸಿದ್ದರು. ಅಷ್ಟಾದ ಮೇಲೆ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಮನೆಗೆ ತೆರಳಿ, ಅವರ ಪುತ್ರರಾದ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಜತೆ ಸಭೆ ನಡೆಸಿ, ನಂತರ ರಾಜ್ಯಪಾಲ ಫಗು ಚೌಹಾಣ್ರನ್ನು ಭೇಟಿಯಾಗಿ ಮಹಾ ಘಟ್ ಬಂಧನ್ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರು.
ಇಂದು ಪ್ರಮಾಣ ವಚನ ಸ್ವೀಕಾರ ಮಾಡಿದ ಬಳಿಕ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಪರಸ್ಪರ ಕೈ ಹಿಡಿದುಕೊಂಡು ಶುಭಾಶಯ ಕೋರಿಕೊಂಡರು. ತೇಜಸ್ವಿ ಯಾದವ್ ಅವರು ನಿತೀಶ್ ಕುಮಾರ್ ಕಾಲಿಗೆ ಬಿದ್ದು, ನಮಸ್ಕಾರ ಮಾಡಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಬಳಿಕ ಇಬ್ಬರೂ ನಗುತ್ತಾ ಅಕ್ಕಪಕ್ಕದ ಕುರ್ಚಿಯಲ್ಲಿ ಕುಳಿತುಕೊಂಡಿದ್ದಾರೆ. ಇನ್ನು ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಆರ್ಜೆಡಿ ನಾಯಕ ಶರದ್ ಯಾದವ್, ‘2024ರ ಲೋಕಸಭೆ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರೇ ಮಹಾ ಘಟ್ ಬಂಧನ್ದಿಂದ ಪ್ರಧಾನಿ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ನಿತೀಶ್ ಕುಮಾರ್ ಬಿಹಾರದಲ್ಲಿ ಬಿಜೆಪಿ ಜತೆ ಮೈತ್ರಿ ತೊರೆದು, ಆರ್ಜೆಡಿ-ಕಾಂಗ್ರೆಸ್ನೊಂದಿಗೆ ಸೇರಿ ಸರ್ಕಾರ ರಚನೆ ಮಾಡಿದ್ದನ್ನು ಪ್ರತಿಪಕ್ಷಗಳು ಸ್ವಾಗತಿಸಿವೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಎನ್ಸಿಪಿ ನಾಯಕ ಶರದ್ ಪವಾರ್, ‘ಭಾರತದ ಪ್ರಾದೇಶಿಕ ಪಕ್ಷಗಳಿಗೆ ಭವಿಷ್ಯವಿಲ್ಲ ಎಂದು ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದರು. ನಿತೀಶ್ ಕುಮಾರ್ ಅವರು ಈಗ ಬಿಜೆಪಿಯಿಂದ ಹೊರ ಬರುವ ಮೂಲಕ, ಬಿಜೆಪಿಯ ಆ ಮಾತನ್ನು ವಿರೋಧಿಸಿದ್ದಾರೆ. ಬಿಜೆಪಿ ಪಕ್ಷ ಪಂಜಾಬ್ನಲ್ಲಿ ತನ್ನ ಮೈತ್ರಿ ಪಕ್ಷವಾಗಿದ್ದ ಅಕಾಲಿ ದಳ್ವನ್ನು ಇಬ್ಭಾಗ ಮಾಡಿತು. ಅದಾದ ಮೇಲೆ ಮಹಾರಾಷ್ಟ್ರದಲ್ಲಿ ಶಿವಸೇನೆಯನ್ನು ಒಡೆಯಿತು’ ಎಂದು ವಿಶ್ಲೇಷಿಸಿದರು.
ಇದನ್ನೂ ಓದಿ: Bihar Politics | ನಿತೀಶ್ ಕುಮಾರ್ ಹೋಗೋದು ಬಿಜೆಪಿಗೆ ಗೊತ್ತಿತ್ತು, ಆದರೆ ಆ ನಿರೀಕ್ಷೆ ಇರಲಿಲ್ಲ !