Site icon Vistara News

2017ರಲ್ಲಿ ನಡೆದ ತಪ್ಪನ್ನು ಮರೆಯೋಣ ಎಂದ ಜೆಡಿಯು ಮುಖ್ಯಸ್ಥ ನಿತೀಶ್​ ಕುಮಾರ್

Nitish Kumar

ಪಟನಾ: ಕಳೆದೆರಡು ದಿನಗಳಿಂದ ಅಡ್ಡಗೋಡೆ ಮೇಲೆ ದೀಪವಿಟ್ಟಂಥ ಸನ್ನಿವೇಶ ಇದ್ದ ಬಿಹಾರ ರಾಜಕಾರಣಕ್ಕೀಗ (Bihar Politics) ಒಂದು ಸ್ಪಷ್ಟತೆ ಸಿಕ್ಕಿದೆ. ಇಂದು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿ, ಬಿಜೆಪಿಯೊಂದಿಗಿನ ಮೈತ್ರಿ ಕಡಿತವನ್ನು ಅಧಿಕೃತಗೊಳಿಸಿದ ಬಳಿಕ ನಿತೀಶ್​ ಕುಮಾರ್​ ಸೀದಾ ಹೋಗಿದ್ದು ಆರ್​ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್​ ನಿವಾಸಕ್ಕೆ. ಅಲ್ಲಿ, ಆರ್​ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್​​ರನ್ನು ಭೇಟಿಯಾಗಿ ‘2017ರಲ್ಲಿ ಏನಾಯಿತೋ ಅದೊಂದು ಪ್ರಮಾದ. ಅದನ್ನು ಮರೆತುಬಿಡೋಣ, ಹೊಸ ಅಧ್ಯಾಯ ಪ್ರಾರಂಭ ಮಾಡೋಣ’ ಎಂದು ಹೇಳಿದ್ದಾರೆ. ಅಂದರೆ 2013ರಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಕಳೆದುಕೊಂಡು, ಮಹಾ ಘಟ್​ ಬಂಧನ್​ ಸೇರಿ, ಮತ್ತೆ 2017ರಲ್ಲಿ ಮಹಾ ಘಟ್​ ಬಂಧನ್​ ತೊರೆದು ಬಿಜೆಪಿ ಜತೆ ಮರು ಮೈತ್ರಿ ಮಾಡಿಕೊಂಡಿದ್ದು ತಪ್ಪು ಎಂಬ ಅರ್ಥದಲ್ಲಿ ಮಾತನಾಡಿದ್ದಾರೆ.

ಅಷ್ಟಾದ ಬಳಿಕ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್​ ಒಟ್ಟಾಗಿ ರಾಜ್ಯಪಾಲರನ್ನು ಭೇಟಿಯಾಗಲು ರಾಜಭವನಕ್ಕೆ ತೆರಳಿದ್ದಾರೆ. ಸರ್ಕಾರ ರಚನೆಗೆ ಹಕ್ಕು ಪ್ರತಿಪಾದಿಸಲು ಈ ಇಬ್ಬರೂ ನಾಯಕರು ಹೋಗಿದ್ದು, ನಾಳೆ ಯೇ(ಆಗಸ್ಟ್​ 10)ಯೇ ಜೆಡಿಯು-ಆರ್​ಜೆಡಿ-ಕಾಂಗ್ರೆಸ್​ ಮೈತ್ರಿಯ ಮಹಾ ಘಟ್​ ಬಂಧನ್​ ಸರ್ಕಾರ ರಚನೆಯಾಗಲಿದೆ. ನಿತೀಶ್ ಕುಮಾರ್ ಮತ್ತೊಮ್ಮೆ​ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಅವರು ಈಗಾಗಲೇ ಮಹಾ ಘಟ್​ ಬಂಧನ್​​ದ ನಾಯಕರಾಗಿಯೂ ಆಯ್ಕೆಯಾಗಿದ್ದಾರೆ.

ಇನ್ನೊಂದೆರಡು ದಿನದಲ್ಲೇ ನಿತೀಶ್ ಕುಮಾರ್​ ದೆಹಲಿಗೆ ತೆರಳಿ, ಸೋನಿಯಾ ಗಾಂಧಿ ಮತ್ತು ರಾಹುಲ್​ ಗಾಂಧಿಯನ್ನು ಭೇಟಿಯಾಗಲಿದ್ದಾರೆ ಎಂದೂ ಹೇಳಲಾಗಿದೆ. ಬಿಹಾರದಲ್ಲಿ ಜೆಡಿಯು ಮತ್ತು ಆರ್​ಜೆಡಿ ಮೈತ್ರಿಯೊಂದಿಗೆ ಕಾಂಗ್ರೆಸ್ ಕೈಜೋಡಿಸಿದ್ದು, ವಿಧಾನಸಭೆಯ ಸ್ಪೀಕರ್​ ಸ್ಥಾನ ಮತ್ತು ಸಂಪುಟದಲ್ಲಿ ಮೂರ್ನಾಲ್ಕು ಸಚಿವ ಸ್ಥಾನ ನೀಡಬೇಕು ಎಂಬುದು ಆ ಪಕ್ಷದ ಬೇಡಿಕೆ ಎನ್ನಲಾಗಿದೆ. ಇಷ್ಟೆಲ್ಲದರ ಮಧ್ಯೆ ಲೋಕ ಜನಶಕ್ತಿ ಪಾರ್ಟಿ (ರಾಮ್​ ವಿಲಾಸ್​) ನಾಯಕ ಚಿರಾಗ್​ ಪಾಸ್ವಾನ್​ ಅವರು ಪ್ರತಿಕ್ರಿಯೆ ನೀಡಿ, ‘ಬಿಹಾರದಲ್ಲಿ ಶೀಘ್ರದಲ್ಲೇ ಚುನಾವಣೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Bihar Politics | ಮತ್ತೆ ಮಗ್ಗಲು ಹೊರಳಿಸಿದ ನಿತೀಶ್​ ಕುಮಾರ್​; ಈಗ್ಯಾಕೆ ಬಿಜೆಪಿ ನಂಟು ಬಿಟ್ಟಿತು ಜೆಡಿಯು?

Exit mobile version