Site icon Vistara News

Nitish Kumar: ನಿತೀಶ್‌ ವಿದಾಯದಿಂದ ಇಂಡಿಯಾ ಒಕ್ಕೂಟದ ಮೇಲಾಗುವ ಪರಿಣಾಮಗಳೇನು?

Nitish Kumar In India Bloc

Nitish Kumar's U-turn: A big blow to INDIA bloc unity in election year

ಪಟನಾ: ನಿರೀಕ್ಷೆಯಂತೆಯೇ ನಿತೀಶ್‌ ಕುಮಾರ್‌ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಹಾರದಲ್ಲಿ ಆರ್‌ಜೆಡಿ ಜತೆಗಿನ ಮಹಾಘಟಬಂಧನವನ್ನು ತೊರೆಯುವ ಜತೆಗೆ ಇಂಡಿಯಾ ಒಕ್ಕೂಟಕ್ಕೂ ಅವರು ವಿದಾಯ ಹೇಳಿದ್ದಾರೆ. ದೀರ್ಘಕಾಲದ ಮಿತ್ರಪಕ್ಷವಾದ ಬಿಜೆಪಿ ಜತೆಗೂಡಿ ಅವರು ಸರ್ಕಾರ ರಚಿಸಲಿದ್ದು, ಭಾನುವಾರ (ಜನವರಿ 28) ಸಂಜೆ 5 ಗಂಟೆಗೆ 9ನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ನಿತೀಶ್‌ ಕುಮಾರ್‌ (Nitish Kumar) ಅವರ ಈ ನಡೆಯಿಂದ ಆರ್‌ಜೆಡಿಗೆ ಮಾತ್ರವಲ್ಲ, ಲೋಕಸಭೆ ಚುನಾವಣೆಯಲ್ಲಿ (Lok Sabha Election 2024) ಬಿಜೆಪಿಯನ್ನು ಸೋಲಿಸಬೇಕು ಎಂದು ರಚಿಸಲಾಗಿರುವ ಇಂಡಿಯಾ ಒಕ್ಕೂಟದ (India Bloc) ಮೇಲೂ ಭಾರಿ ಪರಿಣಾಮ ಬೀರುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇಂಡಿಯಾ ಒಕ್ಕೂಟ ರಚನೆ ಹಿಂದೆ ನಿತೀಶ್‌ ಪಾತ್ರ

2022ರಲ್ಲಿ ಬಿಹಾರದಲ್ಲಿ ಬಿಜೆಪಿ ಜತೆಗಿನ ಮೈತ್ರಿಗೆ ವಿದಾಯ ಹೇಳಿ, ಆರ್‌ಜೆಡಿ ಜತೆ ಮೈತ್ರಿ ಮಾಡಿಕೊಂಡಿದ್ದ ನಿತೀಶ್‌ ಕುಮಾರ್‌ ಅವರು ತುಂಬ ಉತ್ಸಾಹದಿಂದ ಇಂಡಿಯಾ ಒಕ್ಕೂಟ ರಚಿಸಲು ಹೆಚ್ಚಿನ ಆಸಕ್ತಿ ತೋರಿದ್ದರು. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಪ್ರತಿಪಕ್ಷಗಳನ್ನು ಒಗ್ಗೂಡಿಸಿದ್ದ ಅವರು, ಇಂಡಿಯಾ ಒಕ್ಕೂಟ ಅಸ್ತಿತ್ವಕ್ಕೆ ಬರುವಂತೆ ನೋಡಿಕೊಂಡಿದ್ದರು. 2022ರ ಜೂನ್‌ನಲ್ಲಿ ಪಟನಾದಲ್ಲಿ ನಡೆದ ಇಂಡಿಯಾ ಒಕ್ಕೂಟದ ಮೊದಲ ಸಭೆಯನ್ನೂ ನಿತೀಶ್‌ ಕುಮಾರ್‌ ಅವರೇ ಆಯೋಜಿಸಿ, ಪ್ರತಿಪಕ್ಷಗಳ ಒಗ್ಗಟ್ಟು ಪ್ರದರ್ಶಿಸಿದ್ದರು. ಆದರೆ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ನ್ಯಾಯ ಯಾತ್ರೆಯು ಬಿಹಾರ ಪ್ರವೇಶಿಸಲು ಕೇವಲ 48 ಗಂಟೆ ಬಾಕಿ ಇರುವಾಗಲೇ ಇಂಡಿಯಾ ಒಕ್ಕೂಟದಿಂದ ನಿತೀಶ್‌ ಕುಮಾರ್‌ ಹೊರಬಂದಿರುವುದು ಒಕ್ಕೂಟಕ್ಕೆ ಭಾರಿ ಹಿನ್ನಡೆಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಲೋಕಸಭೆ ಚುನಾವಣೆ ಮೇಲೆ ಏನು ಪರಿಣಾಮ?

ನಿತೀಶ್‌ ಕುಮಾರ್‌ ಅವರು ಇಂಡಿಯಾ ಒಕ್ಕೂಟವನ್ನು ತೊರೆದಿರುವ ಪರಿಣಾಮವು ಲೋಕಸಭೆ ಚುನಾವಣೆಯಲ್ಲಿಯೇ ಹೆಚ್ಚು ಬೀರಲಿದೆ. ಬಿಹಾರದಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಾಗಲೆಲ್ಲ ಜೆಡಿಯುಗೆ ಹೆಚ್ಚು ಅನುಕೂಲವಾಗಲಿದೆ. ಅದರಲ್ಲೂ, 2019ರ ಲೋಕಸಭೆ ಚುನಾವಣೆ ಫಲಿತಾಂಶವು ಬಿಜೆಪಿ, ಜೆಡಿಯು ಹಾಗೂ ಲೋಕ ಜನ ಶಕ್ತಿ (LJP) ಮೈತ್ರಿ ಪರವಾಗಿತ್ತು. ಹಾಗಾಗಿ, ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೆ ಜೆಡಿಯುಗೆ ಹೆಚ್ಚಿನ ಲಾಭವಾಗುತ್ತದೆ ಎಂಬುದು ನಿತೀಶ್‌ ಕುಮಾರ್‌ ಅವರ ಲೆಕ್ಕಾಚಾರವಾಗಿದೆ ಎಂದು ಮೂಲಗಳು ತಿಳಿಸಿವೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಹಾರದ ಒಟ್ಟು 40 ಕ್ಷೇತ್ರಗಳ ಪೈಕಿ ಎನ್‌ಡಿಎ ಒಕ್ಕೂಟದ ಜೆಡಿಯು 17, ಬಿಜೆಪಿ 16 ಹಾಗೂ ಎಲ್‌ಜೆಪಿ 6 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್‌ ಒಂದೇ ಕ್ಷೇತ್ರದಲ್ಲಿ ಗೆದ್ದಿತ್ತು

ಇದನ್ನೂ ಓದಿ: Nitish Kumar: ನಿತೀಶ್‌ ಕುಮಾರ್‌ ಯುಟರ್ನ್‌; ಇವರ ಮೈತ್ರಿ ಬದಲಾವಣೆಯ ಇತಿಹಾಸ ಇಲ್ಲಿದೆ

ಇಂಡಿಯಾ ಒಕ್ಕೂಟ ಛಿದ್ರ ಛಿದ್ರ?

ಬಿಜೆಪಿಯನ್ನು ಶತಾಯ ಗತಾಯ ಸೋಲಿಸಬೇಕು ಎಂಬ ಧ್ಯೇಯದಿಂದ ಅಸ್ತಿತ್ವಕ್ಕೆ ಬಂದಿರುವ ಇಂಡಿಯಾ ಒಕ್ಕೂಟವು ಲೋಕಸಭೆ ಚುನಾವಣೆಯ ಮೊದಲೇ ಛಿದ್ರ ಛಿದ್ರವಾದಂತಾಗಿದೆ. ಈಗಾಗಲೇ ಇಂಡಿಯಾ ಒಕ್ಕೂಟದಿಂದ ಹೊರಬಂದಿರುವ ಮಮತಾ ಬ್ಯಾನರ್ಜಿ ಅವರ ಟಿಎಂಸಿಯು ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದೆ. ಪಂಜಾಬ್‌ನಲ್ಲಿ ಆಪ್‌ ಕೂಡ ಮೈತ್ರಿ ಇಲ್ಲದೆಯೇ ಸ್ಪರ್ಧಿಸಲು ಮುಂದಾಗಿದೆ. ಇದರ ಬೆನ್ನಲ್ಲೇ, ನಿತೀಶ್‌ ಕುಮಾರ್‌ ಅವರು ಕೂಡ ಮೈತ್ರಿಕೂಟಕ್ಕೆ ವಿದಾಯ ಹೇಳಿರುವುದು ಒಕ್ಕೂಟದ ಒಗ್ಗಟ್ಟಿಗೆ ಭಾರಿ ಪೆಟ್ಟು ಬಿದ್ದಂತಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version