Site icon Vistara News

ಹೆಚ್ಚು ಮಕ್ಕಳನ್ನು ಹುಟ್ಟಿಸಿ, ಭ್ರಷ್ಟಾಚಾರಕ್ಕೆ ನೂಕಿದ್ದೀರಿ; ಲಾಲು ಯಾದವ್‌ಗೆ ನಿತೀಶ್‌ ಕುಮಾರ್‌ ಟಾಂಗ್!

Nitish Kumar

Nitish Kumar's veiled dig at Lalu Prasad Yadav for having 'too many children'

ಪಟನಾ: ಲೋಕಸಭೆ ಚುನಾವಣೆಯ (Lok Sabha Election 2024) ಭರಾಟೆ, ಅಬ್ಬರವು ದಿನೇದಿನೆ ಜೋರಾಗುತ್ತಿದೆ. ಅದರಲ್ಲೂ, ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳು, ಆಯಾ ಪಕ್ಷಗಳ ನಾಯಕರು ಎದುರಾಳಿ ಅಭ್ಯರ್ಥಿಗಳ ವಿರುದ್ಧ, ಎದುರಾಳಿ ಪಕ್ಷದ ನಾಯಕರ ವಿರುದ್ಧ ವಾಗ್ಬಾಣ ಪ್ರಯೋಗಿಸುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್‌ ಯಾದವ್‌ (Lalu Prasad Yadav) ಅವರಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ (Nitish Kumar) ಅವರು ಟಾಂಗ್‌ ನೀಡಿದ್ದಾರೆ. “ನೀವು ತುಂಬ ಮಕ್ಕಳನ್ನು ಹುಟ್ಟಿಸಿದ್ದೀರಿ. ಆದರೆ, ಅವರನ್ನು ಭ್ರಷ್ಟಾಚಾರಕ್ಕೆ ತಳ್ಳಿದ್ದೀರಿ” ಎಂದು ಕುಟುಕಿದ್ದಾರೆ.

ಬಾನ್‌ಮಂಖಿಯಲ್ಲಿ ನಡೆದ ಪ್ರಚಾರದ ಸಮಾವೇಶದಲ್ಲಿ ಮಾತನಾಡಿದ ನಿತೀಶ್‌ ಕುಮಾರ್‌, “ಲಾಲು ಪ್ರಸಾದ್‌ ಯಾದವ್‌ ಅವರು ಜೈಲಿಗೆ ಹೋಗುವಾಗ ತಮ್ಮ ಪತ್ನಿಯನ್ನು ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸಿದರು. ಈಗ ಅವರ ಮಕ್ಕಳು ರಾಜಕೀಯದಲ್ಲಿದ್ದಾರೆ. ಹಾಗೆ ನೋಡಿದರೆ, ಲಾಲು ಪ್ರಸಾದ್‌ ಯಾದವ್‌ ಅವರು ತುಂಬ ಮಕ್ಕಳನ್ನು ಹುಟ್ಟಿಸಿದ್ದಾರೆ. ಆದರೆ, ಅವರು ಭ್ರಷ್ಟಾಚಾರದಲ್ಲಿ ಸಿಲುಕುವ ಜತೆಗೆ, ಅವರ ಪುತ್ರರು ಹಾಗೂ ಪುತ್ರಿಯರನ್ನೂ ಸಿಲುಕಿಸಿದ್ದಾರೆ” ಎಂದು ತಿರುಗೇಟು ನೀಡಿದ್ದಾರೆ.

ನಿತೀಶ್‌ ಕುಮಾರ್‌ ಅವರು 2022ರಲ್ಲಿ ಎನ್‌ಡಿಎ ಮೈತ್ರಿಕೂಟ ತೊರೆದು, ಆರ್‌ಜೆಡಿ ಬೆಂಬಲ ಪಡೆದು ಮುಖ್ಯಮಂತ್ರಿಯಾಗಿ ಮುಂದುವರಿದಿದ್ದರು. ಆದರೆ, ಕಳೆದ ಜನವರಿಯಲ್ಲಿ ಮತ್ತೆ ಎನ್‌ಡಿಎ ಮೈತ್ರಿಕೂಟ ಸೇರಿರುವ ನಿತೀಶ್‌ ಕುಮಾರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುತ್ತಿದ್ದಾರೆ. ಹಾಗೆಯೇ, ಆರ್‌ಜೆಡಿ ನಾಯಕರ ವಿರುದ್ಧ ಆಕ್ರೋಶವನ್ನೂ ಹೊರಹಾಕುತ್ತಿದ್ದಾರೆ. ಇನ್ನು, ಲಾಲು ಪ್ರಸಾದ್‌ ಯಾದವ್‌ ಅವರಿಗೆ ಒಟ್ಟು 9 ಮಕ್ಕಳಿದ್ದಾರೆ. ಇವರಲ್ಲಿ ಇಬ್ಬರು ಪುತ್ರರು ಹಾಗೂ ಏಳು ಪುತ್ರಿಯರು ಇದ್ದರು.

ಮೋದಿ ಕುರಿತು ಕಾಂಗ್ರೆಸ್‌ ಅಭ್ಯರ್ಥಿ ವಿವಾದಾತ್ಮಕ ಹೇಳಿಕೆ

ರಾಜಸ್ಥಾನದ ಜೋಧ್‌ಪುರ ಕಾಂಗ್ರೆಸ್‌ ಅಭ್ಯರ್ಥಿ ಕರಣ್‌ ಸಿಂಗ್‌ ಉಚಿಯಾರ್ದ ಅವರು ನರೇಂದ್ರ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. “ಚಹಾ ಮಾಡುತ್ತಿದ್ದ ಮೋದಿ ಐಐಟಿ, ಐಐಎಂ ಸಂಸ್ಥೆಗಳ ಬಗ್ಗೆ ಮಾತನಾಡಲು ಹೇಗೆ ಸಾಧ್ಯ” ಎಂದಿದ್ದಾರೆ. ಇದಕ್ಕೆ ಬಿಜೆಪಿ ನಾಯಕರು ಸರಿಯಾಗಿಯೇ ತಿರುಗೇಟು ನೀಡಿದ್ದಾರೆ. ಕರಣ್‌ ಸಿಂಗ್‌ ಉಚಿಯಾರ್ದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲೂ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಮಾಧ್ಯಮವೊಂದರ ಜತೆ ಮಾತನಾಡಿದ ಕರಣ್‌ ಸಿಂಗ್‌ ಉಚಿಯಾರ್ದ, “ನಮ್ಮ ದೇಶದಲ್ಲಿ ಐಐಟಿ, ಐಐಎಂ ಸಂಸ್ಥೆಗಳನ್ನು ಸ್ಥಾಪಿಸಿದ್ದು ಯಾರು? ನರೇಂದ್ರ ಮೋದಿ ಅವರು ಇವುಗಳನ್ನು ದೇಶದಲ್ಲಿ ಸ್ಥಾಪಿಸಿದ್ದಾ? ನೀವು ನಿಮ್ಮ ಮನೆಯಲ್ಲಿ ಚಹಾ ಮಾರುತ್ತಿದ್ದಿರಿ. ಅಷ್ಟಕ್ಕೂ, ಚಹಾ ಮಾರುವವನ ಮಗನೊಬ್ಬ ಐಐಟಿ, ಐಐಎಂ ಸಂಸ್ಥೆಗಳ ಬಗ್ಗೆ, ಅವುಗಳ ವಿಚಾರಗಳ ಬಗ್ಗೆ ಹೇಗೆ ಮಾತನಾಡಲು ಸಾಧ್ಯ? ಹುರುಳಿಲ್ಲದೆ ಹೇಗೆ ಇವುಗಳ ಬಗ್ಗೆ ಮಾತನಾಡಲು ಸಾಧ್ಯವಾಗುತ್ತದೆ” ಎಂದು ಹೇಳಿರುವುದು ವಿವಾದಕ್ಕೆ ಗುರಿಯಾಗಿದೆ.

ಇದನ್ನೂ ಓದಿ: Nitish Kumar: ನಿತೀಶ್‌ ಕುಮಾರ್‌ ಯುಟರ್ನ್‌; ಇವರ ಮೈತ್ರಿ ಬದಲಾವಣೆಯ ಇತಿಹಾಸ ಇಲ್ಲಿದೆ

Exit mobile version